ಕೊಪ್ಪಳದಲ್ಲಿ ಪ್ರೇಮಿಗಳ ಆತ್ಮಹತ್ಯೆ: ತುಂಗಭದ್ರಾ ಕಾಲುವೆಯಲ್ಲಿ ಇಬ್ಬರು ಜಿಗಿದು ನಾಪತ್ತೆ

ಕೊಪ್ಪಳ : ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಪ್ರೇಮಿಗಳು ಆತ್ಮ*ಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ. ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಗ್ರಾಮಕ್ಕೆ ಸೇರಿದ ಪ್ರವೀಣ್ ಕುಮಾರ್ (18) ಮತ್ತು ಸಾಣಾಪುರ ಗ್ರಾಮದ ಅಂಜಲಿ (18) ಎಂಬ ಇಬ್ಬರು ಪ್ರೇಮಿಗಳು ಕಳೆದ ರಾತ್ರಿ ಕಾಲುವೆಗೆ ಹಾರಿದ್ದಾರೆ ಎಂದು ತಿಳಿದುಬಂದಿದೆ

ಈ ಜೋಡಿ ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಕುಟುಂಬಸ್ಥರು ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದು, ಮದುವೆಗೆ ಸಹಕಾರ ನೀಡುತ್ತಿಲ್ಲ ಎಂಬ ಆತಂಕದಲ್ಲಿ ಅವರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಕಳೆದ ಎರಡು ದಿನಗಳಿಂದ ಈ ಜೋಡಿ ಮನೆ ಬಿಟ್ಟು ಹೋಗಿದ್ದ ಸಂದರ್ಭದಲ್ಲಿ, ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದರು. ಕೊನೆಗೆ ಮದುವೆ ಮಾಡಿಸುವ ಭರವಸೆ ನೀಡಿ, ಅವರಿಬ್ಬರನ್ನು ಮುನಿರಾಬಾದ್‌ಗೆ ಕರೆಸಿಕೊಳ್ಳಲಾಗಿತ್ತು. ಆದರೆ “ನಮಗೇನಾದರೂ ಮಾಡಬಹುದು” ಎಂಬ ಭಯದಿಂದ ಅಂಜಲಿ ಮತ್ತು ಪ್ರವೀಣ್ ಅವರು ತುಂಗಭದ್ರಾ ಕಾಲುವೆಗೆ ಹಾರಿದ್ದಾರೆ.
ಘಟನೆ ಸಂಬಂಧ ಮುನಿರಾಬಾದ್ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ತಕ್ಷಣವೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ನೀರಿನಲ್ಲಿ ಕಾಣೆಯಾಗಿರುವ ಪ್ರೇಮಿಗಳಿಗಾಗಿ ಇಂದು ಬೆಳಗ್ಗೆಯಿಂದಲೇ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಕಾಲುವೆ ಪಕ್ಕದ ಪ್ರದೇಶದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.
ಕಾಲುವೆಯಲ್ಲಿ ಹರಿದು ಹೋಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆಯನ್ನು ತುಂಗಭದ್ರಾ ಎಡದಂಡೆ ಕಾಲುವೆಯ ಇಡೀ ಮಾರ್ಗದಲ್ಲಿ ವಿಸ್ತರಿಸಲಾಗುತ್ತಿದೆ. ಮೃತದೇಹಗಳು ಇನ್ನಷ್ಟೇ ಪತ್ತೆಯಾಗಬೇಕಿದ್ದು, ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಯ ಸಹಕಾರದಿಂದ ಶೋಧ ಕಾರ್ಯ ಮುಂದುವರೆದಿದೆ.
