ಪ್ರೇಯಸಿಯ ಕೊಲೆ ಮಾಡಿ 2 ದಿನ ಶವದ ಜೊತೆ ಮಲಗಿದ ಪ್ರಿಯಕರ

ಭೋಪಾಲ್ :ಮಹಿಳೆಯೊಬ್ಬಳು ತನ್ನ ಪ್ರಿಯಕರನಿಂದಲೇ ಬರ್ಬರವಾಗಿ ಕೊಲೆಯಾಗಿರುವ ಘಟನೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನ ಗಾಯತ್ರಿ ನಗರದಲ್ಲಿ ನಡೆದಿದೆ.

ಕೊಲೆಯಾದ ಮಹಿಳೆಯನ್ನು ರಿತಿಕಾ ಸೇನ್ (29) ಎಂದು ಗುರುತಿಸಲಾಗಿದೆ. ಆರೋಪಿ ಪ್ರಿಯಕರನನ್ನು ಸಚಿನ್ ರಜಪೂತ್ (32) ರಿತಿಕಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಲ್ಲದೆ, ಆಕೆಯ ಮೃತದೇಹವನ್ನು ಬ್ಲಾಂಕೆಟ್ನಲ್ಲಿ ಸುತ್ತಿ, ಏನೂ ನಡದೇ ಇಲ್ಲ ಎಂಬಂತೆ ಎರಡು ದಿನಗಳ ಕಾಲ ಅದರ ಪಕ್ಕದಲ್ಲೇ ಮಲಗಿದ್ದ.
ಅಂದಹಾಗೆ, ಈ ಘಟನೆ ಜೂನ್ 27ರಂದು ರಾತ್ರಿ ನಡೆದಿದೆ. ಅಂದು ಇಬ್ಬರ ನಡುವಿನ ಯಾವುದೋ ವಿಚಾರಕ್ಕೆ ಮಾತಿನ ಚಕಮಕಿ ನಡೆಯಿತು. ಕೆಲಸವಿಲ್ಲದೆ ಅಸೂಯೆಯಲ್ಲೇ ಮುಳುಗಿ ಹೋಗಿದ್ದ ಸಚಿನ್, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಿತಿಕಾಳಿಗೆ ತನ್ನ ಬಾಸ್ ಜೊತೆ ಅನೈತಿಕ ಸಂಬಂಧ ಇದೆ ಎಂದು ಅನುಮಾನಿಸಿದ. ಇದೇ ವಿಚಾರವಾಗಿ ಇಬ್ಬರ ನಡುವೆ ನಡೆದ ಜಗಳು ತಾರಕಕ್ಕೇರಿ, ತಾಳ್ಮೆ ಕಳೆದುಕೊಂಡು ಸಚಿನ್, ರಿತಿಕಾಳವನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಆದರೆ, ಆನಂತರ ನಡೆದದ್ದು ಇನ್ನೂ ಹೆಚ್ಚು ಆಘಾತಕಾರಿಯಾಗಿದೆ.
ಆರೋಪಿ ಸಚಿನ್, ರಿತಿಕಾ ಮೃತದೇಹವನ್ನು ಎಚ್ಚರಿಕೆಯಿಂದ ಒಂದು ಬ್ಲಾಂಕೆಟ್ನಲ್ಲಿ ಸುತ್ತಿ, ಹಾಸಿಗೆಯ ಮೇಲೆ ಇಟ್ಟು ಅದೇ ಕೋಣೆಯಲ್ಲಿಯೇ ಇದ್ದ. ಪೊಲೀಸರ ಪ್ರಕಾರ, ಆತ ಎರಡು ದಿನಗಳ ಕಾಲ ದೇಹದ ಪಕ್ಕದಲ್ಲೇ ಮಲಗಿದ್ದ. ಈ ವೇಳೆ ವಿಪರೀತ ಮದ್ಯಪಾನ ಮಾಡಿದ್ದ. ಕೊಲೆ ಮಾಡಿದ ಆಘಾತ ಮತ್ತು ಭಯದಿಂದ ತುಂಬಾ ಚಿಂತಿತನಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಭಾನುವಾರ ಕುಡಿದು ಚಡಪಡಿಸುತ್ತಿದ್ದ ಸಚಿನ್, ಮಿಸ್ರೋಡ್‌ನಲ್ಲಿರುವ ತನ್ನ ಸ್ನೇಹಿತ ಅನುಜ್ ಕರೆ ಮಾಡಿ ಕೊಲೆಯನ್ನು ಒಪ್ಪಿಕೊಂಡಿದ್ದಾನೆ. ಆರಂಭದಲ್ಲಿ ಅನುಜ್ ನಂಬಲಿಲ್ಲ. ಆದರೆ, ಮರುದಿನ ಬೆಳಗ್ಗೆ ಸಚಿನ್ ಅದೇ ತಪ್ಪೊಪ್ಪಿಗೆಯನ್ನು ಪುನರಾವರ್ತಿಸಿದಾಗ, ಅನುಜ್ ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದನು. ಬಜಾರಿಯಾ ಪೊಲೀಸರು ಬಾಡಿಗೆ ಮನೆಯನ್ನು ತಲುಪಿದಾಗ, ಸಚಿನ್ ಹೇಳಿದಂತೆ, ರಿತಿಕಾಳ ಮೃತದೇಹವು ಕಂಬಳಿಯಲ್ಲಿ ಸುತ್ತಿ ಹಾಸಿಗೆಯ ಮೇಲೆ ಬಿದ್ದಿರುವುದನ್ನು ನೋಡಿದರು. ಈ ವೇಳೆ ದೇಹ ಕೊಲೆಯುವ ಹಂತದಲ್ಲಿತ್ತು.
ಇಬ್ಬರು ಮೂರುವರೆ ವರ್ಷಗಳಿಂದ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸಚಿನ್ ವಿದಿಶಾದ ಸಿರೋಂಜ್ ಮೂಲದವರು. ರಿತಿಕಾ ಮತ್ತು ಆತ ಸುಮಾರು 9 ತಿಂಗಳ ಹಿಂದೆ ಗಾಯತ್ರಿ ನಗರದ ನಿವಾಸಕ್ಕೆ ಸ್ಥಳಾಂತರಗೊಂಡಿದ್ದರು. ರಿತಿಕಾ ಕೆಲಸ ಮುಂದುವರಿಸಿದರೂ, ಸಚಿನ್ ನಿರುದ್ಯೋಗಿಯಾಗಿಯೇ ಉಳಿದಿದ್ದ. ಅಲ್ಲದೆ, ಆಕೆಯ ಬಗ್ಗೆ ಅನುಮಾನ ಹೆಚ್ಚಾಗುತ್ತಿತ್ತು. ಇದರಿಂದ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಸಚಿನ್‌ನನ್ನು ವಶಕ್ಕೆ ತೆಗೆದುಕೊಂಡು ಕೊಲೆ ಪ್ರಕರಣ ದಾಖಲಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದ್ದು, ತನಿಖೆ ಮುಂದುವರೆದಿದೆ.
