ಪ್ರೇಮ ವೈಫಲ್ಯ: 10,000 ಅಡಿ ಎತ್ತರದಿಂದ ಜಿಗಿದು ಸ್ಕೈಡೈವರ್ ಆತ್ಮಹತ್ಯೆ

ಲಂಡನ್: ತನ್ನ ಸ್ನೇಹಿತನೊಂದಿಗಿನ ಪ್ರೇಮ ಸಂಬಂಧವನ್ನು ಕಡಿದುಕೊಂಡ ಮರುದಿನವೇ 32 ವರ್ಷದ ಸ್ಕೈಡೈವರ್ ಒಬ್ಬರು 10,000 ಅಡಿ ಎತ್ತರದ ಆಕಾಶದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ ಎಂದು ‘Daily Mail’ ಪತ್ರಿಕೆ ವರದಿ ಮಾಡಿದೆ.
ಆಕಾಶದಿಂದ 400ಕ್ಕೂ ಹೆಚ್ಚು ಬಾರಿ ಕೆಳಕ್ಕೆ ಜಿಗಿದ ಅನುಭವಿ ಪ್ಯಾರಾಚೂಟ್ ಪಟುವಾಗಿದ್ದ ಜೇಡ್ ಡ್ಯಾಮರೆಲ್ ಅಪಘಾತದಿಂದ ಅಥವಾ ಸಂಶಯಾಸ್ಪದ ಸನ್ನಿವೇಶಗಳಿಂದ ಮೃತಪಟ್ಟಿದ್ದಾರೆ ಎಂಬ ಅನುಮಾನಗಳನ್ನು ಪೊಲೀಸರು ತಕ್ಷಣವೇ ಅಲ್ಲಗಳೆದಿದ್ದಾರೆ.
ವರದಿಯ ಪ್ರಕಾರ, ಜೇಡ್ ಡ್ಯಾಮರೆಲ್ ಆಕಾಶದಿಂದ ಜಿಗಿದು ದುರಂತಮಯ ಸಾವನ್ನಪ್ಪುವ ಹಿಂದಿನ ರಾತ್ರಿ ಮತ್ತೊಬ್ಬ ಸ್ಕೈಡೈವರ್ ಆದ 26 ವರ್ಷ ವಯಸ್ಸಿನ ತನ್ನ ಪ್ರೇಮಿಯೊಂದಿಗಿನ ಸಂಬಂಧವನ್ನು ಕಡಿದುಕೊಂಡಿದ್ದರು ಎಂದು ಹೇಳಲಾಗಿದೆ. ಆರು ತಿಂಗಳಿಗಿಂತ ಹೆಚ್ಚು ಕಾಲದಿಂದ ಡೇಟಿಂಗ್ ಮಾಡುತ್ತಿದ್ದ ಈ ಜೋಡಿಗಳು, ಹಲವು ತಿಂಗಳುಗಳಿಂದ ವಾಯುನೆಲೆ ಬಳಿಯಲ್ಲಿನ ಪ್ಯಾರಾಚೂಟ್ ಪಟುಗಳಿಗಾಗಿಯೇ ಬಾಡಿಗೆ ನೀಡಲಾಗುವ ಮನೆಯೊಂದರಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು ಎನ್ನಲಾಗಿದೆ.
ಈ ಕುರಿತು Daily Mail ಪತ್ರಿಕೆಗೆ ಪ್ರತಿಕ್ರಿಯಿಸಿರುವ ಮೃತ ಪ್ಯಾರಾಚೂಟ್ ಪಟು ಜೇಡ್ ಡ್ಯಾಮರೆಲ್ ಸ್ನೇಹಿತೆ, “ಅವರಿಬ್ಬರನ್ನು ಪ್ರತ್ಯೇಕಿಸುವುದು ಅಸಾಧ್ಯವಾಗಿತ್ತು. ಅವರಿಬ್ಬರೂ ತಮ್ಮ ಎಲ್ಲ ಸಮಯವನ್ನೂ ಒಟ್ಟಾಗಿಯೇ ಕಳೆದಿದ್ದರು. ಅವರು ಮತ್ಯಾರೊಂದಿಗೂ ವ್ಯವಹರಿಸುತ್ತಿರಲಿಲ್ಲ. ಎಲ್ಲ ವೇಳೆಯೂ ಅವರಿಬ್ಬರೂ ಒಟ್ಟಾಗಿಯೇ ಆಕಾಶದಿಂದ ಜಿಗಿಯುತ್ತಿದ್ದರು. ಅವರಿಬ್ಬರೂ ಕ್ರಿಸ್ ಮಸ್ ನಿಂದ ಲಾಡ್ಜ್ ಗಳಲ್ಲಿ ವಾಸಿಸುತ್ತಿದ್ದು, ಅದಕ್ಕಿಂತ ಕೆಲವು ತಿಂಗಳ ಮುಂಚಿನಿಂದಲೇ ಅವರಿಬ್ಬರು ಒಟ್ಟಾಗಿಯೇ ಜೀವಿಸುತ್ತಿದ್ದರು. ಜೇಡ್ ಡ್ಯಾಮರೆಲ್ ಮೃತಪಡುವುದಕ್ಕೂ ಹಿಂದಿನ ರಾತ್ರಿ ಆಕೆಯ ಪ್ರೇಮಿ ಜೇಡ್ ಆಕೆಯೊಂದಿಗಿನ ಸಂಬಂಧವನ್ನು ಕಡಿದುಕೊಂಡಿದ್ದ. ಆತ ಮರುದಿನ ಎಂದಿನಂತೆ ತನ್ನ ಕೆಲಸಕ್ಕೆ ತೆರಳಿದ ಹಾಗೂ ಅದೇ ದಿನ ಆಕೆ ಸಾವಿಗೆ ಶರಣಾದಳು” ಎಂದು ತಿಳಿಸಿದ್ದಾರೆ.
ಆರಂಭದಲ್ಲಿ, ಇದೊಂದು ದುರಂತಮಯ ಅಪಘಾತ ಎಂದು ಭಾವಿಸಲಾಗಿತ್ತು. ಆದರೆ, ಆಕಾಶದಿಂದ ಜಿಗಿಯುವ ಸಾಧನದಲ್ಲಿ ಯಾವುದೇ ತಾಂತ್ರಿಕ ವೈಫಲ್ಯ ಸಂಭವಿಸಿರಲಿಲ್ಲ ಎಂಬ ಸಂಗತಿ ತನಿಖೆಯ ವೇಳೆ ಪತ್ತೆಯಾದ ನಂತರ, ಇದೊಂದು ಉದ್ದೇಶಪೂರ್ವಕ ಆಕಾಶ ಜಿಗಿತವಿರಬಹುದು ಎಂದು ಸ್ಕೈಹೈ ಸ್ಕೈಡೈವಿಂಗ್ ಹೇಳಿಕೆ ನೀಡಿತ್ತು.
ತನಿಖೆಯ ವೇಳೆ ಪೊಲೀಸರು ಜೇಡ್ ಡ್ಯಾಮರೆಲ್ ತನ್ನ ಇತ್ತೀಚಿನ ಪ್ರೇಮ ವೈಫಲ್ಯವನ್ನು ಉಲ್ಲೇಖಿಸಿರುವ ಆತ್ಮಹತ್ಯೆ ಪತ್ರವನ್ನು ಪತ್ತೆ ಹಚ್ಚಿದ್ದು, ಆಕಾಶದಿಂದ ಸುಮಾರು 120 ಮೈಲಿಗೂ ಹೆಚ್ಚು ವೇಗದಲ್ಲಿ ಜಿಗಿಯುವಾಗ, ಆಕೆ ತನ್ನ ಪ್ಯಾರಾಚೂಟ್ ಅನ್ನು ಉದ್ದೇಶಪೂರ್ವಕವಾಗಿಯೇ ಚಾಲನೆಗೊಳಿಸಿರಲಿಲ್ಲ ಎಂದು ಶಂಕಿಸಲಾಗಿದೆ ಎಂದು ಆಕೆಯ ಸ್ನೇಹಿತೆಯೊಬ್ಬರು ತಿಳಿಸಿದ್ದಾರೆ.
ಅನುಭವಿ ಸ್ಕೈಡೈವರ್ ಆಗಿದ್ದ ಜೇಡ್ ಡ್ಯಾಮರೆಲ್, ಈ ವರ್ಷದಲ್ಲಿ ಇದುವರೆಗೆ 80ಕ್ಕೂ ಹೆಚ್ಚು ಆಕಾಶ ಜಿಗಿತವನ್ನು ಯಶಸ್ವಿಯಾಗಿ ಪೂರೈಸಿದ್ದರು.