42 ವರ್ಷ ಚಹಾ ಕಪ್, ಟಿವಿ ಆನ್ ಮಾಡಿ ಕೂತಲ್ಲೇ ಅಸ್ಥಿಪಂಜರವಾಗಿದ್ದ ಒಂಟಿ ಹೆಣ್ಣು

ಎಲ್ಲರಿಂದ ದೂರವಾಗಿ ಯಾವುದೋ ಅನಿವಾರ್ಯ ಕಾರಣಗಳಿಗೆ ಒಳಪಟ್ಟು ಏಕಾಂಗಿಯಾಗಿ ಜೀವಿಸುವಂಥವರು ಸಾಮಾಜಿಕವಾಗಿ ಬೆರೆಯದೇ ಇದ್ದರೆ, ಅವರಿಗೇನಾದರೂ ಆದಾಗ ಯಾರಿಗೊ ಗೊತ್ತಾಗದೇ ಉಳಿದುಬಿಡುವಂಥ ಪರಿಸ್ಥಿತಿಗಳು ಬಂದೊಗಿಬಿಡುತ್ತವೆ. ಯಾರೋ ಉದ್ದೇಶಪೂರ್ವಕವಾಗಿ ಕೊಲೆ ಮಾಡಿ, ಅವರ ಅಸ್ಥಿಪಂಜರಗಳು ಯಾವಾಗಲೋ ಸಿಕ್ಕುವುದು ಬೇರೆ ವಿಚಾರ. ಆದರೆ, ಮನೆಯಲ್ಲಿ ಒಬ್ಬಂಟಿಯಾಗಿದ್ದು ಹಲವಾರು ವರ್ಷಗಳ ಮೇಲೆ ಅವರ ಅಸ್ಥಿಪಂಜರ ಪತ್ತೆಯಾಗಿರುವುದು ಸೋಜಿಗದ ವಿಚಾರ.

ಆದರೆ, ನಿಮಗೆ ಗೊತ್ತೇ? ಅತೀ ದೀರ್ಘಕಾಲದ ನಂತರ ಸಹಜಸಾವಿಗೆ ಈಡಾದ ವ್ಯಕ್ತಿಯೊಬ್ಬರ ಅಸ್ಥಿಪಂಜರ ಸಿಕ್ಕಿದ ವಿಚಾರದಲ್ಲಿ ಈವರೆಗಿನ ದಾಖಲೆ ಇರುವುದು ಹೆಡ್ವಿಗಾ ಗೋಲಿಕ್ ಎಂಬ ಮಹಿಳೆಯ ಹೆಸರಿನಲ್ಲಿ! ಹೌದು. ಆಕೆ ಯುಗೋಸ್ಲಾವಿಯಾ ದೇಶದ (ಈಗ ಆ ದೇಶ ಅಸ್ತಿತ್ವದಲ್ಲಿಲ್ಲ) ಝಾಗ್ರೇಬ್ ಎಂಬ ನಗರದಲ್ಲಿನ ತನ್ನ ಹಳೆಯ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಿದ್ದಳು. ಇದ್ದಕ್ಕಿದ್ದಂತೆ 1966ರಲ್ಲಿ ಒಂದು ದಿನ ಸತ್ತು ಹೋದಳು. ಆದರೆ, ಆಕೆಯ ಶವ ಪತ್ತೆಯಾಗಿದ್ದು ಯಾವಾಗ ಗೊತ್ತೇ? 2008ರಲ್ಲಿ! ಬರೋಬ್ಬರಿ 42 ವರ್ಷಗಳ ನಂತರ ಆಕೆಯ ಅಸ್ಥಿಪಂಜರ ಪತ್ತೆಯಾಗಿತ್ತು! ಬಹುಶಃ ಇತಿಹಾಸದಲ್ಲಿ ಹೀಗೆ ನ್ಯಾಚುರಲ್ ಡೆತ್ ಆದ ವ್ಯಕ್ತಿಯೊಬ್ಬರ ಶವ ಇಷ್ಟು ದೀರ್ಘಾವಧಿಯ ನಂತರ ಸಿಕ್ಕಿದ್ದು ಗೋಲಿಕ್ ಅವರದ್ದೇ ಇರಬೇಕು!
ಬಹುಶಃ ಇಂಥ ಪ್ರಕರಣದಲ್ಲಿ ಅತಿ ದೀರ್ಘಾವಧಿ ನಂತರ ಪತ್ತೆಯಾದ ಮತ್ತೊಂದು ಅಸ್ಥಿಪಂಜರವೆಂದರೆ ಅದು ಲಂಡನ್ನಿನಲ್ಲಿ ವಾಸವಾಗಿದ್ದ ಜೋಯ್ಸ್ ಕೆರೋಲ್ ವಿನ್ಸೆಂಟ್ ಅವರದ್ದು. ಆಕೆ ಲಂಡನ್ನಿನ ಹ್ಯಾಮರ್ ಸ್ಮಿತ್ ಎಂಬ ಊರಿನಲ್ಲಿ ಹುಟ್ಟಿದವಳು. ಚಿಕ್ಕ ವಯಸ್ಸಿನಲ್ಲೇ ಆಸ್ತಮಾಕ್ಕೆ ಒಳಗಾಗಿದ್ದ ಆಕೆ, ತನ್ನ ತಂದೆ ಹಾಗೂ ಕುಟುಂಬದೊಂದಿಗಿನ ಭಿನ್ನಾಭಿಪ್ರಾಯಗಳಿಂದಾಗಿ ಕುಟುಂಬ ಸದಸ್ಯರಿಂದ ದೂರ ಉಳಿದಿದ್ದಳು. ಲಂಡನ್ ನಗರದಲ್ಲೇ ವುಡ್ ಗ್ರೀನ್ ಎಂಬಲ್ಲಿನ ಒಂದು ಅಪಾರ್ಟ್ ಮೆಂಟ್ ನ ಫ್ಲ್ಯಾಟ್ ನಲ್ಲಿ ಜೀವನ ಸಾಗಿಸುತ್ತಿದ್ದಳು. ಸಂಬಂಧಿಕರಿಂದ ಯಾವುದೇ ನಂಟು ಇಟ್ಟುಕೊಂಡಿರಲಿಲ್ಲ.
2023ರಲ್ಲಿ ಆಕೆಗೆ ಆಸ್ತಮಾನ ಸ್ವಲ್ಪ ಜಾಸ್ತಿಯಾಗಿತ್ತೆಂದು ಆಸ್ಪತ್ರೆಗೆ ಹೋಗಿದ್ದಳು. ಅದೇ ವರ್ಷ ಒಮ್ಮೆ ಆಕೆಗೆ ರಕ್ತವಾಂತಿಯಾಗಿತ್ತು. ಆಗಲೂ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಾಗ ಹೊಟ್ಟೆಯಲ್ಲಿ ಒಳಗೆ ಹುಣ್ಣಾಗಿದೆ ಎಂದು ಹೇಳಿದ್ದ ವೈದ್ಯರು ಚಿಕಿತ್ಸೆಗಾಗಿ ಕೆಲವು ಔಷಧಿ ಕೊಟ್ಟಿದ್ದರು. ಆನಂತರ, ಅವುಗಳನ್ನು ಪಡೆದು ಮನೆಗೆ ತೆರಳಿದ್ದಾಗಿ ಮತ್ತೆ ಮನೆಯಿಂದ ಹೊರಕ್ಕೆ ಕಾಲಿಡಲಿಲ್ಲ! ಯಾವಾಗ ಜೀವ ಹೋಗಿತ್ತೋ ಗೊತ್ತಿಲ್ಲ. ಅಕ್ಕಪಕ್ಕದವರೊಂದಿಗೂ ಸಂಪರ್ಕ ಇಲ್ಲದ ಆಕೆ, ಕಡೆಗೊಂದು ದಿನ ಅನಾಥ ಶವವಾಗಿ ಸತ್ತಳು. ಮೂಲಗಳ ಪ್ರಕಾರ, ಆಕೆ ಸತ್ತಿದ್ದು 2003ರ ಡಿಸೆಂಬರ್ ನಲ್ಲಿ. ಆಕೆಯ ದೇಹ ಪತ್ತೆಯಾಗಿದ್ದು 2006ರ ಜನವರಿ 25ರಂದು…. ಮೂರು ವರ್ಷಗಳ ನಂತರ.
