ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ಕಣ್ಣು: ಕಲಬುರಗಿಯಲ್ಲಿ ಎಸಿಪಿ, ಶಿವಮೊಗ್ಗದಲ್ಲಿ ಪಾಲಿಕೆ ಅಧಿಕಾರಿ ಬಂಧನ

ಕಲಬುರಗಿ: ರಾಜ್ಯದ ವಿವಿಧೆಡೆ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರದ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ ಕಲಬುರಗಿ ಮತ್ತು ಶಿವಮೊಗ್ಗದಲ್ಲಿ ಇಬ್ಬರು ಸರ್ಕಾರಿ ಅಧಿಕಾರಿಗಳು ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಕಲಬುರಗಿಯಲ್ಲಿ ಎಸಿಪಿ ಮತ್ತು ತಂಡ ಲೋಕಾಯುಕ್ತ ಬಲೆಗೆ
ಕಲಬುರಗಿ ದಕ್ಷಿಣ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಶರಣಬಸಪ್ಪ ಸುಬೇದಾರ್, ಅವರ ರೈಟರ್ ಚಂದ್ರಕಾಂತ್, ಕಾನ್ಸ್‌ಟೇಬಲ್ ರಾಘವೇಂದ್ರ ಮತ್ತು ಇಬ್ಬರು ಖಾಸಗಿ ವ್ಯಕ್ತಿಗಳು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸೈಟ್ ವಿವಾದವೊಂದನ್ನು ಬಗೆಹರಿಸಲು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಂದ ಬರೋಬ್ಬರಿ ₹40 ಲಕ್ಷಕ್ಕೆ ಬೇಡಿಕೆ ಇಟ್ಟು, ₹10 ಲಕ್ಷ ಮುಂಗಡವಾಗಿ ಪಡೆದಿದ್ದರು.
ನಂತರ ಉಳಿದ ₹30 ಲಕ್ಷಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡುತ್ತಿದ್ದರು. ಈ ಕುರಿತು ರೇವಣಸಿದ್ದಯ್ಯ ಸ್ವಾಮಿ ಎಂಬುವವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಎಸ್ಪಿ ಸಿದ್ದರಾಜು ನೇತೃತ್ವದಲ್ಲಿ ದಾಳಿ ನಡೆಸಿದ ತಂಡ, ₹30 ಲಕ್ಷ ಪಡೆಯುವಾಗ ಎಸಿಪಿ ಸುಬೇದಾರ್ ಮತ್ತು ಅವರ ತಂಡವನ್ನು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದಿದೆ. ಘಟನೆಯ ಸಂಬಂಧ ಐವರನ್ನೂ ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರಿ ಬಂಧನ:
ಇದೇ ರೀತಿ, ಶಿವಮೊಗ್ಗದಲ್ಲಿ ಮಹಾನಗರ ಪಾಲಿಕೆಯ ಆಶ್ರಯ ವಿಭಾಗದ ಸಮುದಾಯ ಸಂಘಟನಾಧಿಕಾರಿ ಶಶಿಧರ ಅವರು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಮೊಹಮ್ಮದ್ ಆಸಿಫ್ ಉಲ್ಲಾ ಎಂಬುವವರು ಅಮ್ಯಾದ್ ಅಲಿ ಅವರಿಂದ ಖರೀದಿಸಿದ ಮನೆಯ ಖಾತೆಯನ್ನು ತಮ್ಮ ಹೆಸರಿಗೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರು.
ಈ ಕಾರ್ಯಕ್ಕಾಗಿ ಶಶಿಧರ ಅವರು ₹10,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ದೂರು ಸ್ವೀಕರಿಸಿದ ಲೋಕಾಯುಕ್ತ ಡಿವೈಎಸ್‌ಪಿ ಚಂದ್ರಶೇಖರ್ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ರುದ್ರೇಶ್ ಅವರ ತಂಡವು ಶಿವಮೊಗ್ಗದ ನೆಹರು ರಸ್ತೆಯಲ್ಲಿರುವ ಆಶ್ರಯ ಕಚೇರಿಯಲ್ಲಿ ಲಂಚ ಸ್ವೀಕರಿಸುವ ವೇಳೆ ದಾಳಿ ನಡೆಸಿ ಶಶಿಧರ ಅವರನ್ನು ಬಂಧಿಸಿದೆ. ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ಸಿಬ್ಬಂದಿ ವಿವರ:
ಶರಣಬಸಪ್ಪ ಸುಬೇದಾರ್ (ಕಲಬುರಗಿ ಎಸಿಪಿ)
ರೈಟರ್ ಚಂದ್ರಕಾಂತ್ (ಕಲಬುರಗಿ ರೈಟರ್)
ರಾಘವೇಂದ್ರ (ಪೊಲೀಸ್ ಪೇದೆ)
ಶಶಿಧರ (ಶಿವಮೊಗ್ಗ ಪಾಲಿಕೆ ಸಿಬ್ಬಂದಿ)