ಲೋಕಾಯುಕ್ತ ಬಲೆಗೆ ಬಿದ್ದ ಎಸ್‌ಡಿಎ ಸಂಪತ್; ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಅರೆಸ್ಟ್

ಮಂಗಳೂರು: ಕಮಿಷನ್‌ಗಾಗಿ ಬೇಡಿಕೆ ಮುಂದಿಟ್ಟ ಆರೋಪದ ಮೇರೆಗೆ ದಾಳಿ ನಡೆಸಿದ ಮಂಗಳೂರು ಲೋಕಾಯುಕ್ತ ಪೊಲೀಸರು ಲೋಕೋಪಯೋಗಿ ಇಲಾಖೆಯ ವಿದ್ಯುತ್ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಎಸ್‌ಡಿಎ ಸಂಪತ್ ಎಂಬಾತನನ್ನು ಸೋಮವಾರ ಬಂಧಿಸಿದ್ದಾರೆ.
ರಾಜ್ಯ ಸರಕಾರದಿಂದ ಮಾನ್ಯತೆ ಪಡೆದ ಇಲೆಕ್ಟಿಕಲ್ ಪ್ರಥಮ ದರ್ಜೆಯ ಗುತ್ತಿಗೆದಾರರಾದ ಫಿರ್ಯಾದಿಯು 2025ನೆ ಸಾಲಿನಲ್ಲಿ ಉಡುಪಿ ಜಿಲ್ಲೆಯ ಗ್ರಾಪಂಗಳಿಗೆ ಒಳಪಟ್ಟ ದಾರಿ ದೀಪ ವಿಸ್ತರಣೆಯ ಸರಕಾರಿ ಕಾಮಗಾರಿ ಗಳನ್ನು ನಿರ್ವಹಿಸಿದ್ದರು. ಈ ಕಾಮಗಾರಿಯ ಬಿಲ್‌ಗೆ 4 ಪರ್ಸೆಂಟ್‌ನಂತೆ 22,600 ರೂ. ಕೊಡಬೇಕು ಎಂಬುದಾಗಿ ಸಂಪತ್ ಬೇಡಿಕೆ ಮುಂದಿಟ್ಟಿದ್ದ. ಈ ಬಗ್ಗೆ ಗುತ್ತಿಗೆದಾರ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿದ ಮಂಗಳೂರು ಲೋಕಾಯುಕ್ತ ಪೊಲೀಸರು ಸೋಮವಾರ ಕಚೇರಿಯಲ್ಲಿ ಲಂಚದ ಹಣ ಸ್ವೀಕರಿಸುವಾಗಲೇ ದಾಳಿ ನಡೆಸಿ ಬಂಧಿಸಿದ್ದಾರೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಬಿ.ಪಿ ದಿನೇಶ್ ಕುಮಾರ್‌ರ ಮಾರ್ಗದರ್ಶನದಲ್ಲಿ ಉಪಾಧೀಕ್ಷಕ ಸುರೇಶ್ ಕುಮಾರ್.ಪಿ, ಡಾ. ಗಾನ ಪಿ. ಕುಮಾರ್, ಪಿ.ಐ. ಭಾರತಿ ಜಿ. ಅವರ ಉಸ್ತುವಾರಿಯಲ್ಲಿ ನಿರೀಕ್ಷಕ ಚಂದ್ರಶೇಖರ್ ಕೆ.ಎನ್., ಸಿಬ್ಬಂದಿಗಳಾದ ರಾಜಪ್ಪ, ಮಹೇಶ್, ಆದರ್ಶ್, ರಾಮ ನಾಯ್ಕ ಗಂಗಣ್ಣ ಮಹಾದೇವ, ಪವಿತ್ರ, ಲಕ್ಷ್ಮಿ, ರವಿ ಪವಾರ್, ನವೀನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
