ಕೂಡಲಸಂಗಮದ ಪೀಠದ ಬೀಗ ತೆರೆದು ವಿವಾದಕ್ಕೆ ತಾತ್ಕಾಲಿಕ ವಿರಾಮ

ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲ್ಲೂಕಿನ ಕೂಡಲಸಂಗಮದ ಪಂಚಮಸಾಲಿ ಪೀಠಕ್ಕೆ ಬೀಗ ಜಡಿದಿದ್ದು, ಹೊಸ ಚರ್ಚೆ ಹುಟ್ಟು ಹಾಕಿತ್ತು. ಇದು ಕಾಂಗ್ರೆಸ್ ನಾಯಕ ವಿಜಯಾನಂದ ಕಾಶಪ್ಪನವರ ಮತ್ತು ಪಂಚಮಸಾಲಿ ಶ್ರೀಗಳ ಮಧ್ಯೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿತ್ತು. ಇಂದು ಕೂಡ ಪೀಠದ ಎದುರು ಪೊಲೀಸ್ ಬಿಗಿಭದ್ರತೆ ಒದಗಿಸಲಾಗಿದ್ದು, ಪೀಠಕ್ಕೆ ಜಡಿದಿದ್ದ ಬೀಗವನ್ನು ನಿನ್ನೆಯೇ ತೆರೆಯಲಾಗಿದೆ. ಆ ಮೂಲಕ ಇಬ್ಬರ ಮಧ್ಯೆದ ಗುದ್ದಾಟ ತಾತ್ಕಾಲಿಕ ಸುಖಾಂತ್ಯ ಕಂಡಿದೆ.

ಕಳೆದ ನಾಲ್ಕು ದಿನದ ಹಿಂದೆಯೇ ಕೂಡಲ ಸಂಗಮದ ಪೀಠಕ್ಕೆ ಬೀಗ ಬಿದ್ದಿತ್ತು. ವಿವಾದ ತೀವ್ರಗೊಳ್ಳುತ್ತಿದ್ದಂತೆ ಪಂಚಮಸಾಲಿ ಸಮುದಾಯದ ಮುಖಂಡರು ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಅವರೊಂದಿಗೆ ಸಭೆ ಮಾಡಿ ಇದೀಗ ಪೀಠಕ್ಕೆ ಜಡಿದಿದ್ದ ಬೀಗವನ್ನು ತೆರೆದಿದ್ದಾರೆ. ಬಳಿಕ ವಿಜಯಾನಂದ ಕಾಶಪ್ಪನವರ್ ಮತ್ತು ಬಸವಜಯಮೃತ್ಯುಂಜಯ ಸ್ವಾಮೀಜಿ ಬೆಂಬಲಿಗರಿಂದ ಪೀಠದಲ್ಲಿ ಸಭೆ ಕೂಡ ಮಾಡಲಾಗಿದೆ. ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಜೊತೆಗೆ ವಿವಾದ ಹಿನ್ನಲೆ ಬಂದ ಆಗಿದ್ದ ಪೀಠದಲ್ಲಿರುವ ಕನ್ನಡ ಪ್ರಾಥಮಿಕ ಶಾಲೆ ಕೂಡ ಇದೀಗ ಆರಂಭಗೊಂಡಿದೆ.
ಪೊಲೀಸ್ ಭದ್ರತೆ
ಮಂಗಳವಾರ ಹುನಗುಂದ ಪಟ್ಟಣದಲ್ಲಿ ಪಂಚಮಸಾಲಿ ಸಮಾಜದ ಮುಖಂಡರ ಸಭೆ ಬಳಿಕ ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯಮೃತ್ಯುಂಜಯ ಸ್ವಾಮೀಜಿ ನಿನ್ನೆ ಸಂಜೆ ಪೀಠಕ್ಕೆ ಭೇಟಿ ನೀಡಿದ್ದರು. ಸ್ವಾಮೀಜಿ ಆಗಮಿಸಿದ್ದರಿಂದ ಪಂಚಮಸಾಲಿ ಸಮಾಜದ ಮುಖಂಡರು ಹಾಗೂ ಸಮಾಜದ ಜನರು ಭೇಟಿಗೆ ಬರುತ್ತಿದ್ದಾರೆ. ಸದ್ಯ ಪೀಠಕ್ಕೆ ಹಾಗೂ ಸ್ವಾಮೀಜಿ ಸುರಕ್ಷತಾ ದೃಷ್ಟಿಯಿಂದ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ.
ಭಾನುವಾರ ಬೀಗ ತೆಗೆಯಲು ಯತ್ನಿಸಲಾಗಿದೆ ಎಂದು ಕಾಶಪ್ಪನವರ್ ಬೆಂಬಲಿಗರು ಹುನಗುಂದ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹೀಗಾಗಿ ಬೀಗ ಒಡೆದ ಆರೋಪದಲ್ಲಿ ಸ್ವಾಮೀಜಿ ಕಡೆಯ ಐವರ ಮೇಲೆ ಎಫ್‌ಐಆರ್ ದಾಖಲಾಗಿದೆ. ಈ ಬಗ್ಗೆ ಸ್ವಾಮೀಜಿಗಳನ್ನು ಕೇಳಿದರೆ ನನಗೇನು ಗೊತ್ತಿಲ್ಲ ಎಂದಿದ್ದಾರೆ.
ಜಯಮೃತ್ಯಂಜಯ ಶ್ರೀಗಳು ಹೇಳಿದ್ದಿಷ್ಟು
ಪಂಚಮಸಾಲಿ ಸಮಾಜದ ಮುಖಂಡರ ಸಭೆ ಬಳಿಕ ಪ್ರತಿಕ್ರಿಸಿದ್ದ ಜಯಮೃತ್ಯಂಜಯ ಶ್ರೀಗಳು, ‘ನಾನು ಸಮಾಜ ಸಂಘಟನೆ ಹಾಗೂ ಮೀಸಲಾತಿ ಹೋರಾಟಕ್ಕೆ ಸಮಾಜದ ಜನರನ್ನು ಸಿದ್ದತೆಗೊಳಿಸಲು ಜಿಲ್ಲೆ ಜಿಲ್ಲೆ ಪ್ರವಾಸ ಕೈಗೊಂಡಿದ್ದೇನೆ. ಈ ಹಿನ್ನೆಲೆ ಪೀಠದ ಕಡೆಗೆ ಹೋಗಲು ಆಗಿಲ್ಲ. ನಾನು ಹೊರಗಡೆ ಇದ್ದಾಗ ಅಲ್ಲಿ ಏನು ನಡೆದಿದೆಯೋ ನನಗೆ ಗೊತ್ತಿಲ್ಲ. ಯಾರು ಬೀಗ ಹಾಕಿದ್ದಾರೆ ಎಂಬುದು ಗೊತ್ತಿಲ್ಲ. ನಾನು ಕೂಡಲಸಂಗಮದ ಪೀಠಕ್ಕೆ ಹೋದ ಮೇಲೆಯೇ ನೈಜ ಸ್ಥಿತಿ ಗೊತ್ತಾಗಲಿದೆ’ ಎಂದು ಹೇಳಿದ್ದರು.