ಆಗುಂಬೆಯಲ್ಲಿ ಕಾಳಿಂಗ ಸರ್ಪ ಸಂರಕ್ಷಣೆ ಹೆಸರಲ್ಲಿ ಅಕ್ರಮ ಚಟುವಟಿಕೆ ಆರೋಪ: ತನಿಖೆಗೆ ಅರಣ್ಯ ಸಚಿವ ಆದೇಶ

ಶಿವಮೊಗ್ಗ: ಆಗುಂಬೆ ಮಳೆಕಾಡಿನಲ್ಲಿ ಕಾಳಿಂಗ ಸರ್ಪ ಸಂರಕ್ಷಣೆ ಹೆಸರಿನಲ್ಲಿ ಕಾನೂನು ಬಾಹಿರವಾಗಿ ವೀಡಿಯೋ ಚಿತ್ರೀಕರಣ, ಅಕ್ರಮವಾಗಿ ಜಮೀನು ಖರೀದಿ, ವಾಣಿಜ್ಯ ಚಟುವಟಿಕೆ ನಡೆಯತ್ತಿವೆ ಎಂಬ ದೂರಿನ ಮೇರೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ತನಿಖೆ ನಡೆಸಿ 10 ದಿನದೊಳಗೆ ವರದಿ ನೀಡುವಂತೆ ಸೂಚಿಸಿದ್ದಾರೆ.

ಆಗುಂಬೆ ಮಳೆಕಾಡು ಸಂಶೋಧನ ಕೇಂದ್ರದವರು ತೀರ್ಥಹಳ್ಳಿ ತಾಲೂಕು, ಆಗುಂಬೆ ಹೋಬಳಿ, ತಲ್ಲೂರು ಗ್ರಾಮ ಸರ್ವೇ ನಂ.11ರ ಸೋಮೇಶ್ವರ ಅಭಯಾರಣ್ಯದ ಕೇಂದ್ರ ಭಾಗದಲ್ಲಿ ಅಕ್ರಮವಾಗಿ ಜಮೀನು ಖರೀದಿ, ಯಾವುದೇ ಸಂಶೋಧನೆಗೆ ನಿರ್ದಿಷ್ಟ ಸಮಯಕ್ಕೆ ಮಾತ್ರವೇ ಅನುಮತಿ ಇದ್ದರೂ ವರ್ಷವಿಡೀ ಸಂಶೋಧನೆ ಹೆಸರಲ್ಲಿ ಛಾಯಾಗ್ರಹಣ ನಡೆಸಲಾಗುತ್ತಿದೆ ಎಂಬ ಆರೋಪವಿದ್ದು, ಕ್ರಮದ ಶಿಫಾರಸಿನೊಂದಿಗೆ ವರದಿ ಸಲ್ಲಿಸಲು ಸೂಚಿಸಿದ್ದಾರೆ.
10 ದಿನದೊಳಗೆ ಸಮಗ್ರ ವರದಿ ನೀಡಲು ಅರಣ್ಯ ಸಚಿವ ಸೂಚನೆ
ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಅರಣ್ಯ ಭೂಮಿ ಒತ್ತುವರಿ ಹಾಗೂ ಕಟ್ಟಡ ನಿರ್ಮಾಣ, ಕಾಳಿಂಗ ಸರ್ಪಗಳ ಆವಾಸ ಸ್ಥಳದಲ್ಲಿ ವಾಣಿಜ್ಯ ಚಟುವಟಿಕೆ ಹಾಗೂ ಅರಣ್ಯ ಮತ್ತು ವನ್ಯಜೀವಿ ಕಾಯ್ದೆಗಳ ನೇರ ಉಲ್ಲಂಘನೆ ಮಾಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ, ಪರಿಸರ ಪ್ರೇಮಿಗಳು ದೂರು ನೀಡಿದ್ದರು. ದೂರನ್ನು ಪರಿಗಣಿಸಿದ ಅರಣ್ಯ ಸಚಿವರು, ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿಯವರ ನೇತೃತ್ವದ ತಂಡದಿಂದ ಪರಿಶೀಲನೆ ನಡೆಸಿ ನಿರ್ಲಕ್ಷ್ಯ ವಹಿಸಿರುವ ಅ ಧಿಕಾರಿಗಳ ವಿರುದ್ಧ ಮತ್ತು ತಪ್ಪಿತಸ್ಥರ ವಿರುದ್ಧ ಕೈಗೊಳ್ಳಬಹುದಾದ ಕ್ರಮದ ಶಿಫಾರಸಿನೊಂದಿಗೆ ಸಮಗ್ರ ವರದಿಯನ್ನು 10 ದಿನಗಳ ಒಳಗಾಗಿ ಸಲ್ಲಿಸಲು ಸೂಚಿಸಿದ್ದಾರೆ.
