ಲಿವ್-ಇನ್ ಸಂಗಾತಿ, ಮಗಳ ಕೊ*ಲೆ- ಲಿಪ್ ಸ್ಟಿಕ್ ನಿಂದ ಗೋಡೆಯಲ್ಲಿ ಬರೆದಿಟ್ಟ ಕಾರಣ

ಮಧ್ಯಪ್ರದೇಶ: ವ್ಯಕ್ತಿಯೊಬ್ಬ ತನ್ನ ಸಂಗಾತಿ ಹಾಗೂ ಮಗಳ ಕತ್ತು ಹಿಸುಕಿ ಕೊಲೆ(Murder) ಮಾಡಿರುವ ಘಟನೆ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ನಡೆದಿದೆ. ಅಷ್ಟೇ ಅಲ್ಲದೆ ಇಬ್ಬರನ್ನೂ ಕೊಂದು ರಾತ್ರಿ ಇಡೀ ಶವದ ಪಕ್ಕದಲ್ಲೇ ಆತ ಕುಳಿತುಕೊಂಡಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.
.ಲಿಪ್ಸ್ಟಿಕ್ ಬಳಸಿ ಗೋಡೆಯ ಮೇಲೆ ನಾನು ಅವಳನ್ನು ಕೊಂದೆ ಎಂದು ಬರೆದಿದ್ದ.

ಗಂಜ್‌ಬಸೋಡಾದ ವಾರ್ಡ್ ಸಂಖ್ಯೆ 8 ರಲ್ಲಿ ಈ ದುರಂತ ಘಟನೆ ನಡೆದಿದ್ದು, ಸ್ಥಳೀಯ ಸಮುದಾಯವನ್ನು ದಿಗ್ಭ್ರಮೆಗೊಳಿಸಿದೆ.ಆರೋಪಿಯನ್ನು ರಾಜಾ ಅಲಿಯಾಸ್ ಅನುಜ್ ವಿಶ್ವಕರ್ಮ ಎಂದು ಗುರುತಿಸಲಾಗಿದ್ದು, ಕೆಲವು ತಿಂಗಳುಗಳಿಂದ 36 ವರ್ಷದ ರಾಮಸಖಿ ಜೊತೆ ಲಿವ್-ಇನ್ ಸಂಬಂಧದಲ್ಲಿದ್ದ. ಅನುಜ್ ಜೊತೆಗೆ ಬರುವ ಮೊದಲು ರಾಮಸಖಿ ತನ್ನ ಪತಿಯಿಂದ ಬೇರ್ಪಟ್ಟಿದ್ದರು.
ಈ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು, ಆದರೆ ಇಷ್ಟೊಂದು ಭಯಾನಕ ರೀತಿಯಲ್ಲಿ ಅವರ ಬದುಕೇ ಕೊನೆಗೊಳ್ಳುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ ಎಂದು ಅನುಜ್ ಅವರ ನೆರೆಹೊರೆಯವರು ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಪೊಲೀಸರು ಸ್ಥಳಕ್ಕೆ ಬಂದಾಗ, ಗೋಡೆಯ ಮೇಲೆ ನಾನು ಅವಳನ್ನು ಕೊಂದೆ, ಅವಳು ನನಗೆ ಸುಳ್ಳು ಹೇಳಿದ್ದಳು.
ಅವಳಿಗೆ ಬೇರೆ ಸಂಬಂಧವಿತ್ತು ಎಂದು ಬರೆದಿರುವ ಸಂದೇಶ ಕಂಡುಬಂದಿದೆ. ವರದಿಯ ಪ್ರಕಾರ, ಕೊಲೆ ನಡೆದ ಸ್ವಲ್ಪ ಸಮಯದ ನಂತರ ಈ ಸಂದೇಶವನ್ನು ಬರೆಯಲಾಗಿದೆ ಎಂದು ವಿಧಿವಿಜ್ಞಾನ ತಜ್ಞರು ದೃಢಪಡಿಸಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಪ್ರಶಾಂತ್ ಚೌಬೆ ಎನ್‌ಡಿಟಿವಿಗೆ ಮಾಹಿತಿ ನೀಡಿದ್ದು, ಮಹಿಳೆ ತನ್ನ ಪತಿಯಿಂದ ಬೇರೆಯಾಗಿ ಅನುಜ್ ಹಾಗೂ ಮಗಳ ಜೊತೆ ವಾಸಿಸುತ್ತಿದ್ದರು ಎಂದು ಹೇಳಿದ್ದಾರೆ.
ನಮ್ಮ ತನಿಖೆಯಲ್ಲಿ ಆಕೆ ಮತ್ತು ಆಕೆಯ ಮಗು ಇಬ್ಬರನ್ನೂ ಕತ್ತು ಹಿಸುಕಿ ಕೊಲ್ಲಲಾಗಿದೆ ಎಂದು ತಿಳಿದುಬಂದಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಅವರು ಹೇಳಿದರು.
