ಭಾರತದ ಟಾಪ್ 10 ಕೊಳಕು ನಗರಗಳ ಪಟ್ಟಿ ಬಿಡುಗಡೆ; ಬೆಂಗಳೂರಿಗೆ 5ನೇ ಸ್ಥಾನ, ಮಧುರೈ ಫಸ್ಟ್!

ಸ್ವಚ್ಛತೆ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ನಗರ, ಊರು, ಪಟ್ಟಣ, ಹಳ್ಳಿಯನ್ನು ಸುಂದರವಾಗಿ ಕಾಣುವಂತೆ ಮಾಡುತ್ತವೆ. ದೇಶಾದ್ಯಂತ ಈ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಹಾಗೂ ಗಾಂಧೀಜಿಯವರ ಸ್ವಚ್ಛ ಭಾರತದ ಕನಸನ್ನು ಸಾಕಾರ ಮಾಡುವ ನಿಟ್ಟಿನಲ್ಲಿ ಸ್ವಚ್ಛ ಭಾರತದಂತಹ ಹಲವಾರು ಸ್ವಚ್ಛತಾ ಅಭಿಯಾನಗಳು ನಡೆಯುತ್ತಿವೆ. ಹೀಗಿದ್ದರೂ ಕೂಡ ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲದೆ, ತ್ಯಾಜ್ಯ ವಿಲೇವಾರಿ ಇಲ್ಲದೆ ಜೊತೆಗೆ ಸಾರ್ವಜನಿಕರ ಬೇಜವಾಬ್ದಾರಿಯುತ ವರ್ತನೆಗಳಿಂದ ಅದೆಷ್ಟೋ ನಗರಗಳು ಹದಗೆಟ್ಟು ಹೋಗಿವೆ. ಇದೀಗ 2025 ರ ಸ್ವಚ್ಛ ಸರ್ವೇಕ್ಷಣ್ ಅಭಿಯಾನವು ಭಾರತದ ಟಾಪ್ 10 ಕೊಳಕು ನಗರಗಳ (dirtiest cities) ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಸಣ್ಣ ಪಟ್ಟಣಗಳಿಗಿಂತ, ಸ್ಮಾರ್ಟ್ ಸಿಟಿ, ಮಾಲ್‌ಗಳಿರು ಹೈಫೈ ಸಿಟಿಗಳೇ ಅತ್ಯಂತ ಕೊಳಕು ನಗರಗಳು ಎಂಬ ಸ್ಥಾನವನ್ನು ಪಡೆದಿವೆ. ಆ ಟಾಪ್ 10 ಸಿಟಿಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದ ಟಾಪ್ 10 ಕೊಳಕು ನಗರಗಳ ಪಟ್ಟಿ:
ಸಣ್ಣ ಪಟ್ಟಣಗಳು ಸ್ವಚ್ಛತೆ ಮತ್ತು ನಾಗರಿಕ ನಿರ್ವಹಣೆಯಲ್ಲಿ ಪ್ರಮುಖ ಮಹಾನಗರಗಳನ್ನು ಮೀರಿಸಿದರೆ, ಭಾರತದ ಪ್ರಮುಖ ಮಹಾನಗರಗಳಲ್ಲಿ ದೊಡ್ಡದೊಡ್ಡ ಸ್ಕೈಲೈನ್‌ಗಳು, ಶಾಪಿಂಗ್ ಮಾಲ್‌ಗಳು, ಸ್ಮಾರ್ಟ್ ಸಿಟಿಗಳ ನಡುವೆ ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ ಅಸ್ಪಷ್ಟವಾಗಿಯೇ ಉಳಿದಿದೆ. ಇದಕ್ಕೆ ಉದಾಹರಣೆ ಇತ್ತೀಚಿನ ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆ. ವರ್ಷಗಳಿಂದ, ಸರ್ಕಾರದ ಸ್ವಚ್ಛ ಭಾರತ ಮಿಷನ್ ಮತ್ತು ವಾರ್ಷಿಕ ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆಯು ನಗರಗಳು ಸ್ವಚ್ಛತೆ, ನೈರ್ಮಲ್ಯ ಮತ್ತು ತ್ಯಾಜ್ಯವನ್ನು ಹೇಗೆ ನಿರ್ವಹಿಸುತ್ತವೆ ಎಂಬುದರ ಬಗ್ಗೆ ಸಮೀಕ್ಷೆಯನ್ನು ನಡೆಸುತ್ತಾ ಬರುತ್ತಿವೆ.
ಹೊಸದಾಗಿ ಬಿಡುಗಡೆಯಾದ ಸ್ವಚ್ಛ ಸರ್ವೇಕ್ಷಣ್ 2025 ವರದಿಯು ಹಲವಾರು ಪಟ್ಟಣಗಳು ತ್ಯಾಜ್ಯ ಸಂಗ್ರಹ ಮತ್ತು ಸಾರ್ವಜನಿಕ ನೈರ್ಮಲ್ಯವನ್ನು ಸುಧಾರಿಸಿದ್ದರೆ, ಇನ್ನು ಕೆಲವು ನಗರಗಳು ಕಸ ವಿಲೇವಾರಿ, ಅಸಮರ್ಥ ಒಳ ಚರಂಡಿಗಳು ಮತ್ತು ಕಳಪೆ ನೈರ್ಮಲ್ಯದೊಂದಿಗೆ ಹೋರಾಡುತ್ತಿವೆ, ಸಣ್ಣ ಪಟ್ಟಣಗಳು ಸ್ವಚ್ಛತೆಯಲ್ಲಿ ಮುಂದಿದ್ದರೆ, ಮಹಾನಗರಗಳು ಸ್ವಚ್ಛತೆಯಲ್ಲಿ ಹಿಂದಿವೆ ಎಂಬುದನ್ನು ಬಹಿರಂಪಡಿಸಿದೆ.
ಈ ವರ್ಷದ ಶ್ರೇಯಾಂಕ, ಭಾರತದ ದೊಡ್ಡ ನಗರಗಳು ಅತ್ಯಂತ ಕೊಳಕು ನಗರಗಳು ಎಂಬ ಹೆಸರನ್ನು ಗಳಿಸಲು ಕಾರಣವೇ ಯೋಜಿತವಲ್ಲದ ನಗರ ವಿಸ್ತರಣೆ, ಅಸಮರ್ಥ ತ್ಯಾಜ್ಯ ವಿಲೇವಾರಿ ಮತ್ತು ನಾಗರಿಕ ನಿರ್ಲಕ್ಷ್ಯ, ಮಾಲಿನ್ಯ ಎಂದು ಹೇಳಿದೆ. ಅತ್ಯಂತ ಕೊಳಕು ನಗರ ಎಂಬ ಪಟ್ಟಿಯಲ್ಲಿ ಮಧುರೈ ಮೊದಲ ಸ್ಥಾನವನ್ನು ಪಡೆದರೆ ಸಿಲಿಕಾನ್ ಸಿಟಿ 5 ನೇ ಸ್ಥಾನವನ್ನು ಹಾಗೂ ದೆಹಲಿ 10 ನೇ ಸ್ಥಾನ ಪಡೆದಿದೆ.
ಭಾರತದ ಅತ್ಯಂತ ಕೊಳಕು ನಗರಗಳಿವು:
- ಮಧುರೈ, ತಮಿಳುನಾಡು
- ಲುಧಿಯಾನ, ಪಂಜಾಬ್
- ಚೆನ್ನೈ, ತಮಿಳುನಾಡು
- ರಾಂಚಿ, ಜಾರ್ಖಾಂಡ್
- ಬೆಂಗಳೂರು, ಕರ್ನಾಟಕ
- ಧನ್ಬಾದ್, ಜಾರ್ಖಾಂಡ್
- ಫರಿದಾಬಾದ್, ಹರ್ಯಾಣ
- ಗ್ರೇಟರ್ ಮುಂಬೈ
- ಶ್ರೀನಗರ
- ದೆಹಲಿ
ಸ್ವಚ್ಛ ನಗರಗಳು ಯಾವುವು?
- ಅಹಮದಾಬಾದ್: ಗುಜರಾತ್‌ನ ಈ ನಗರವು ತ್ಯಾಜ್ಯ ವಿಂಗಡಣೆ ಮತ್ತು ಮರುಬಳಕೆಯಲ್ಲಿ ಉತ್ತಮ ಸಾಧನೆ ಮಾಡಿದೆ.
- ಭೋಪಾಲ್: ಮಧ್ಯಪ್ರದೇಶದ ರಾಜಧಾನಿ ಸ್ವಚ್ಛತೆಯಲ್ಲಿ ಮುಂದಿದೆ.
- ಲಕ್ನೋ: ಉತ್ತರ ಪ್ರದೇಶದ ಈ ಸಿಟಿ 7-ಸ್ಟಾರ್ ಕಸ ಮುಕ್ತ ನಗರ ಪ್ರಮಾಣೀಕರಣವನ್ನು ಪಡೆದುಕೊಂಡಿದೆ.
- ರಾಯ್‌ಪುರ: ಛತ್ತೀಸ್‌ಗಢದ ಈ ನಗರವು ಸ್ವಚ್ಛತೆಯಲ್ಲಿ ನಾಗರಿಕರ ಭಾಗವಹಿಸುವಿಕೆಗಾಗಿ ಪ್ರಶಂಸಿಸಲ್ಪಟ್ಟಿದೆ.
- ಜಬಲ್ಪುರ: ಮಧ್ಯಪ್ರದೇಶದ ಈ ನಗರವು ನಿರಂತರ ಸುಧಾರಣೆಯ ಮೂಲಕ ತನ್ನ ಸ್ವಚ್ಛತೆಯ ವಿಷಯದಲ್ಲಿ ಛಾಪನ್ನು ಮೂಡಿಸಿದೆ.
ಹೆಚ್ಚುವರಿಯಾಗಿ, ಇಂದೋರ್, ಸೂರತ್ ಮತ್ತು ನವಿ ಮುಂಬೈ ನಗರಗಳು ಸ್ವಚ್ಛತೆಯ ಕಾರಣದಿಂದ ಸೂಪರ್ ಸ್ವಚ್ಛ ಲೀಗ್ ನಲ್ಲಿ ಮನ್ನಣೆ ಗಳಿಸಿವೆ.