ವಿದೇಶದಿಂದ ಮರಳಿದ 31ರ ಯುವಕನಿಗೆ ಭಾರತದ ಜೀವನ ಕಷ್ಟ: ಕಸ, ಟ್ರಾಫಿಕ್‌ನಿಂದ ಬೇಸತ್ತು ನೆಟ್ಟಿಗರ ಸಲಹೆ ಕೇಳಿದ ಎನ್‌ಆರ್‌ಐ

ಹೊಸ ದಿಲ್ಲಿ: ಆರು ವರ್ಷ ಉನ್ನತ ಶಿಕ್ಷಣ ಮತ್ತು ಉತ್ತಮ ಕೆಲಸದಲ್ಲಿ ಕೆನಡಾದಲ್ಲಿದ್ದ 31 ವರ್ಷದ ವ್ಯಕ್ತಿ ಕಳೆದ ವರ್ಷ ದೆಹಲಿಗೆ ವಾಪಸ್ಸಾಗಿದ್ದಾರೆ. ಆದರೆ, ಇಲ್ಲಿನ ವಾತಾವರಣಕ್ಕೆ ಒಗ್ಗಿಕೊಳ್ಳಲಾಗದೆ, ಜೀವನಮಟ್ಟವನ್ನು ಸುಧಾರಿಸಲು ಸಲಹೆ ನೀಡುವಂತೆ ರೆಡ್ಡಿಟ್‌ನಲ್ಲಿ ಪೋಸ್ಟ್ ಹಂಚಿಕೊಂಡು ನೆಟ್ಟಿಗರ ಬಳಿ ಸಲಹೆ ಕೇಳಿರುವುದು ಸದ್ಯ ವೈರಲ್ ಆಗುತ್ತಿದೆ.

ಹುಟ್ಟಿದ ರಾಜ್ಯದಿಂದ ಮತ್ತೊಂದು ಕಡೆ ಹೋಗಿ ಬದುಕೋದೆ ಕಷ್ಟ. ಅಲ್ಲಿನ ಜೀವನ ಶೈಲಿ ದುಪ್ಪಟು ವೆಚ್ಚ ಇದೆಲ್ಲವೂ ಸಾಕಾಗಿ, ಅಯ್ಯೋ ಊರಿಗೆ ಹೋಗಿ ವ್ಯವಸಾಯ ಮಾಡೋದೆ ಬೆಸ್ಟು ಅನ್ನೋ ಕಾಲ ಇದು. ಹಾಗೆಯೇ ವಿದೇಶಗಳಲ್ಲಿ ಒಂದೆರಡು ವಾರ ಪ್ರವಾಸಕ್ಕೆ ತೆರಳಿ ವಾಪಸ್ ಬಂದ್ರೆ ಸಾಕಪ್ಪ ಅನ್ನೋರು ಇದ್ದಾರೆ. ಆದರೆ, ದೆಹಲಿಯ ಈ ವ್ಯಕ್ತಿ ಹೆಣಗಾಟ ಎಲ್ಲರನ್ನೂ ಅಚ್ಚರಿ ಮೂಡಿಸುವಂತೆ ಮಾಡಿದೆ.
ಡೆಹ್ರಾಡೂನ್‌ನಲ್ಲಿ ತನ್ನ ಹೆತ್ತವರೊಂದಿಗೆ ವಾಸಿಸುತ್ತಿರುವ ವ್ಯಕ್ತಿ, ತನ್ನ ನೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾನೆ. ಭಾರತದಲ್ಲಿ ಬದುಕುವುದನ್ನು ಸುಧಾರಿಸಕೊಳ್ಳಲು ಟಿಪ್ಸ್ ಕೊಡಿ ರೆಡ್ಡಿಟ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಕೆಲಸ ಮತ್ತು ಅಧ್ಯಯನಕ್ಕಾಗಿ ಕೆನಡಾಕ್ಕೆ ಹೋದ ದೆಹಲಿ ಮೂಲದ ವ್ಯಕ್ತಿಯೊಬ್ಬರು, 2024 ರಲ್ಲಿ ಕೆಲವು ವೈಯಕ್ತಿಕ ಕಾರಣಗಳಿಗಾಗಿ ತನ್ನ ಕುಟುಂಬದೊಂದಿಗೆ ಇರಲು ಬಯಸಿ ಭಾರತಕ್ಕೆ ಮರಳಿದ್ದಾರೆ. ಆದರೆ ಈಗ ಭಾರತದಲ್ಲಿ ಹೊಂದಿಕೊಳ್ಳಲು ಕಷ್ಟಪಡುತ್ತಿದ್ದಾರೆ.
NRI ಹೆಸರಿನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಏನಿದೆ?
ಕೆನಡಾದಲ್ಲಿ 6 ವರ್ಷಗಳ ಕಾಲ ಕೆಲಸ ಮತ್ತು ವಿದ್ಯಾಭ್ಯಾಸ ಮುಗಿಸಿ ಭಾರತಕ್ಕೆ ಮರಳಿದ 31 ವರ್ಷದ ವ್ಯಕ್ತಿಯೊಬ್ಬರು, ಇಲ್ಲಿನ ಜೀವನಕ್ಕೆ ಹೊಂದಿಕೊಳ್ಳಲು ಕಷ್ಟಪಡುತ್ತಿದ್ದಾರೆ. ದೆಹಲಿಯ ಮೂಲದವರಾದ ಅವರು, ವೈಯಕ್ತಿಕ ಕಾರಣಗಳಿಂದಾಗಿ ತಮ್ಮ ಕುಟುಂಬದೊಂದಿಗೆ ಇರಲು ಭಾರತಕ್ಕೆ ವಾಪಸ್ಸಾಗಿದ್ದಾರೆ. ಆದರೆ, ಹಳೆಯ ಸ್ನೇಹಿತರಿಲ್ಲದೆ, ಸೂಕ್ತ ಕೆಲಸ ಸಿಗದೆ, ವಾತಾವರಣ ಮತ್ತು ಜೀವನಶೈಲಿಯಿಂದ ಬೇಸತ್ತು, ಭಾರತದಲ್ಲಿ ಜೀವನ ಸಾಗಿಸುವುದು ಕಷ್ಟಕರವಾಗಿದೆ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ, ಭಾರತದಲ್ಲಿ ಜೀವನಮಟ್ಟವನ್ನು ಹೇಗೆ ಉತ್ತಮಪಡಿಸಿಕೊಳ್ಳುವುದು ಅಥವಾ ಕೆನಡಾಕ್ಕೆ ವಾಪಸ್ಸಾಗುವುದು ಸೂಕ್ತವೇ ಎಂದು ಅವರು ಸಲಹೆ ಕೇಳಿದ್ದಾರೆ.
ಅಲ್ಲಲ್ಲಿ ಕಸ, ಟ್ರಾಫಿಕ್ ಹೊಂದಿಕೊಳ್ಳೋಕೆ ಕಷ್ಟ

ʻನಾನು ಎರಡು ಪ್ರಪಂಚಗಳ ನಡುವೆ ಸಿಲುಕಿಕೊಂಡಿದ್ದೇನೆ ಎಂದು ಭಾವಿಸುತ್ತೇನೆ. ಒಂದು ಪರಿಚಿತವಾಗಿದೆ ಆದರೆ ನಿರಾಶಾದಾಯಕವಾಗಿದೆ. ಇನ್ನೊಂದು ಕೆನಡಾದಲ್ಲಿ ಕೆಲವೊಮ್ಮೆ ಒಂಟಿತನ ಕಾಡಿತ್ತು. ಆದರೆ ಅಲ್ಲಿನ ವ್ಯವಸ್ಥೆ, ಅವಕಾಶ ನನಗೆ ಬದುಕಲು ಸಾಕಷ್ಟು ಸ್ವಾತಂತ್ರ್ಯ ನೀಡಿತುʼ ಎಂದು ಎನ್‌ಆರ್‌ಐ ಎಂಬ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ʻನನಗೆ ಇಲ್ಲಿ ಯಾರ ಜೊತೆಯಲ್ಲೂ ಸಾಮಾಜಿಕವಾಗಿ ಬೆರೆಯಲು ಆಗುತ್ತಿಲ್ಲ. ನನ್ನ ಹಳೆಯ ಸ್ನೇಹಿತರೆಲ್ಲ ವಿದೇಶದಲ್ಲಿ ನೆಲೆಸಿದ್ದಾರೆ. ನನಗೀಗ ಹಳೆಯ ಗೆಳೆಯರ ಜೊತೆ ಯಾವುದೇ ಒಡೆನಾಟವಿಲ್ಲ. ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು ಸವಾಲಾಗಿದೆ. ನನ್ನ ಶಿಕ್ಷಣಕ್ಕೆ ಸಮನಾಗಿ ಸೂಕ್ತ ಕೆಲಸ ಹುಡುಕುವುದು ಕಷ್ಟವಾಗಿದೆ. ನನಗೆ ನನ್ನ ಹಿನ್ನೆಲೆಗೆ ಸರಿಹೊಂದುವ, ಉತ್ತಮ ಸಂಬಳದ, ಕೆಲಸ ಸಿಗುತ್ತಿಲ್ಲ. ಕೆನಡಾದಲ್ಲಿ ಇದ್ದಾಗ ಉತ್ತಮ ಅವಕಾಶಗಳಿದ್ದವು. ಆದರೆ, ಭಾರತದಲ್ಲಿ ಆ ರೀತಿಯ ಕೆಲಸ ಸಿಗುತ್ತಿಲ್ಲ.
ನನ್ನ ಓದಿಗೆ ಸಮನಾದ ಕೆಲಸ ಸಿಗ್ತಿಲ್ಲ
ಭಾರತದ ವಾತಾವರಣ ಮತ್ತು ಜೀವನಶೈಲಿಯು ಇಷ್ಟವಾಗುತ್ತಿಲ್ಲ. ಪ್ರತಿದಿನ ಚಟುವಟಿಕೆಯಿಂದ ಇರಲು ಅಥವಾ ಪ್ರೇರಣೆ ಪಡೆಯಲು ಕಷ್ಟವಾಗುತ್ತದೆ. ಕೆನಡಾದಲ್ಲಿ ವ್ಯಾಯಾಮ ಮಾಡಲು ಮತ್ತು ಆರೋಗ್ಯವಾಗಿರಲು ಉತ್ತಮ ವಾತಾವರಣವಿತ್ತು. ಆದರೆ, ಭಾರತದಲ್ಲಿ ಅದು ಸಾಧ್ಯವಾಗುತ್ತಿಲ್ಲ.ನಾಗರಿಕ ಪ್ರಜ್ಞೆಯ ಕೊರತೆ, ಗೊಂದಲ ಮತ್ತು ದಿನನಿತ್ಯದ ತೊಂದರೆಗಳು ನನ್ನನ್ನು ಸುಸ್ತಾಗಿಸುತ್ತವೆ. ಎಲ್ಲೆಂದರಲ್ಲಿ ಕಸ, ಟ್ರಾಫಿಕ್ ಜಾಮ್ ಮತ್ತು ಇತರ ಸಮಸ್ಯೆಗಳು ನನ್ನ ತಾಳ್ಮೆಯನ್ನು ಪರೀಕ್ಷಿಸುತ್ತಿವೆ. ಜೀವನೋತ್ಸಾಹ ಕಳೆದುಕೊಳ್ಳುವಂತೆ ಮಾಡುತ್ತಿದೆ ಎಂದು ಬರೆದುಕೊಂಡಿದ್ದಾರೆ.
ನೆಟ್ಟಿಗರು ಕೊಟ್ಟ ಸಲಹೆಗಳೇನು?
ಕೆನಾಡಕ್ಕೆ ತೆರಳಿದ ಮೊದಲ ದಿನಗಳು ನೀವಲ್ಲಿ ಹೇಗೆ ದಿನ ಕಳೆದಿದ್ದೀರೋ ಹಾಗೆಯೇ ಭಾರತದಲ್ಲಿ ಇರುವುದನ್ನು ರೂಢಿಸಿಕೊಳ್ಳಿ ಎಂದು ಒಬ್ಬ ನೆಟ್ಟಿಗ ಕಾಮೆಂಟ್ ಮಾಡಿದ್ದಾನೆ. ನಿಮಗೆ ಭಾರತಕ್ಕೆ ಒಗ್ಗಿಕೊಳ್ಳಲು ಸ್ವಲ್ಪ ಸಮಯ ಕೊಡಿ. ನಾನು ಅಮೆರಿಕದಿಂದ ಬಂದ ನಂತರ ಇಲ್ಲಿಗೆ ಒಗ್ಗಿಕೊಳ್ಳಲು 15 ವರ್ಷಗಳ ನಂತರ ಹಿಂತಿರುಗಿದೆ. ಹೊಂದಿಕೊಳ್ಳಲು ನನಗೆ ಸುಮಾರು 1.5 ವರ್ಷಗಳು ಬೇಕಾಯಿತುʼ ಎಂದು ಹೇಳಿದ್ದಾರೆ.
