ಲಿಕ್ಟನ್‌ಸ್ಟೈನ್: ಅಚ್ಚರಿ ಮೂಡಿಸುವ ವಿಶ್ವದ ಅತಿ ಶ್ರೀಮಂತ ಮತ್ತು ಸುರಕ್ಷಿತ ಪುಟ್ಟ ದೇಶ!

ವಿಶ್ವದ ಅತಿ ಶ್ರೀಮಂತ ದೇಶಗಳು ಯಾವುವೆಂದರೆ ನಿಮಗೆ ಅಮೆರಿಕ, ಸ್ವೀಡನ್, ಡೆನ್ಮಾರ್ಕ್ ಇತ್ಯಾದಿ ಹೆಸರು ಸ್ಮರಣೆಗೆ ಬರಬಹುದು. ಆದರೆ, ಲಿಕ್ಟನ್ಸ್ಟೇನ್ (Liechtenstein) ಎನ್ನುವ ಹೆಸರು ಹೆಚ್ಚಿನ ಮಂದಿಗೆ ತಿಳಿದಿರುವುದು ಕಡಿಮೆ. ಇದು ವಿಶ್ವದಲ್ಲೇ ಅತಿಹೆಚ್ಚು ತಲಾದಾಯ ಹೊಂದಿರುವ ದೇಶಗಳ ಸಾಲಿಗೆ ಬರುತ್ತದೆ.

ಈ ಪುಟ್ಟ ದೇಶದ ಬಗ್ಗೆ ಅಚ್ಚರಿ ಎನಿಸುವ ಹತ್ತು ಹಲವು ಅಂಶಗಳಿವೆ. ಈ ದೇಶದ ಬಗ್ಗೆ ಈಗ ಇಲ್ಲಿ ಬರೆಯಲು ಕಾರಣ, ಒಂದು ಸೋಷಿಯಲ್ ಮೀಡಿಯಾ ಪೋಸ್ಟ್. ಈ ದೇಶ ದೊಡ್ಡ ಶ್ರೀಮಂತ ದೇಶವಾದರೂ ಒಂದು ಏರ್ಪೋರ್ಟ್ ಇಲ್ಲ, ಸ್ವಂತ ಕರೆನ್ಸಿ ಇಲ್ಲ ಎಂದು ಕೆಲ ಅಚ್ಚರಿಯ ಸಂಗತಿಗಳನ್ನು ಆ ಪೋಸ್ಟ್ನಲ್ಲಿ ಬರೆಯಲಾಗಿತ್ತು.
ಲಿಕ್ಟನ್ಸ್ಟೈನ್ನಲ್ಲಿ ಏರ್ಪೋರ್ಟ್ ಇಲ್ಲ ಎಂಬುದು ನಿಜ. ಅದರದ್ದೇ ಸ್ವಂತ ಕರೆನ್ಸಿ ಎಂಬುದೂ ಇಲ್ಲ. ನೆರೆಯ ದೇಶಗಳ ಕರೆನ್ಸಿಯನ್ನೇ ಬಳಸಲಾಗುತ್ತದೆ. ಆದರೂ ಕೂಡ ಇಲ್ಲಿಯ ಜನರು ಶ್ರೀಮಂತರೋ ಶ್ರೀಮಂತರು. ಹಾಗಂತ ಇಲ್ಲಿ ಅಪರಾಧ ಬಹಳ ಕಡಿಮೆ. ಮೋಸ ವಂಚನೆ, ದಗಾ ಇಲ್ಲ. ಇಡೀ ದೇಶದಲ್ಲಿ ಇರೋದು ಕೇವಲ 300 ಪೊಲೀಸರು. ಜೈಲಿನಲ್ಲಿ ಸದ್ಯ ಕಂಬಿ ಎಣಿಸುತ್ತಿರುವವರ ಸಂಖ್ಯೆ ಏಳು ಮಾತ್ರವಂತೆ. ಇದು ಅತ್ಯಂತ ಶ್ರೀಮಂತ ದೇಶಗಳಲ್ಲಿ ಒಂದು ಎನಿಸಿರುವುದು ಮಾತ್ರವಲ್ಲ, ಅತ್ಯಂತ ಸುರಕ್ಷಿತ ದೇಶಗಳಲ್ಲೂ ಒಂದಾಗಿದೆ.
ಅಂದಹಾಗೆ ಲಿಕ್ಟನ್ಸ್ಟೈನ್ ಯೂರೋಪ್ನಲ್ಲಿರುವ ಒಂದು ಪುಟ್ಟ ದೇಶ. ಸ್ವಿಟ್ಜರ್ಲ್ಯಾಂಡ್ ಮತ್ತು ಆಸ್ಟ್ರಿಯಾ ದೇಶಗಳ ನಡುವೆ ಇದೆ. ಇಲ್ಲಿಯ ಜನಸಂಖ್ಯೆ ಸುಮಾರು 39,000 ಇರಬಹುದು. ಬೆಂಗಳೂರಿನ ಒಂದು ಪುಟ್ಟ ಪ್ರದೇಶದ ಒಂದು ಲೇ ಔಟ್ನಲ್ಲಿ ಇರುವಷ್ಟು ಜನಸಂಖ್ಯೆ ಮಾತ್ರವೇ. ಆದರೆ, ಅಚ್ಚರಿ ಎಂದರೆ ಇಲ್ಲಿ ನೊಂದಾಯಿಲ್ಪಟ್ಟಿರುವ ಕಂಪನಿಗಳ ಸಂಖ್ಯೆ 70,000 ಕ್ಕೂ ಅಧಿಕ.
ಜಿಡಿಪಿ ತಲಾದಾಯದಲ್ಲಿ ಇದು ಬಹಳ ಎತ್ತರದಲ್ಲಿದೆ. ಒಂದೂವರೆ ಲಕ್ಷ ಡಾಲರ್ಗೂ ಅಧಿಕ ತಲಾದಾಯ ಇದೆ. ಅಮೆರಿಕದಕ್ಕಿಂತ ಬಹುತೇಕ ಎರಡು ಪಟ್ಟು ಹೆಚ್ಚು ಹೊಂದಿದೆ.
ಲಿಕ್ಟನ್ಸ್ಟೈನ್ ದೇಶಕ್ಕೆ ಆದಾಯ ಮೂಲ?
ಲಿಕ್ಟನ್ಸ್ಟೈನ್ ದೇಶಕ್ಕೆ ಪ್ರಮುಖ ಆದಾಯವೇ ಅದರಲ್ಲಿರುವ ಕೈಗಾರಿಕೆಗಳು ಮತ್ತು ಉದ್ದಿಮೆಗಳು. ಇಲ್ಲಿ ಆರ್ ಅಂಡ್ ಡಿಗೆ ಹೆಚ್ಚು ಒತ್ತುಕೊಡಲಾಗುತ್ತದೆ. ಹೀಗಾಗಿ, ಉತ್ಕೃಷ್ಟ ತಂತ್ರಜ್ಞಾನ ಇರುವ ಉದ್ದಿಮೆಗಳು ನೆಲಸಿವೆ. ಈ ದೇಶದ ಜನಸಂಖ್ಯೆಯ ಅರ್ಧದಷ್ಟು ಜನರು ಇಲ್ಲಿ ದಿನವೂ ಬಂದು ಕೆಲಸ ಮಾಡಿ ಹೋಗುತ್ತಾರೆ. ಇದರ ಫಲವಾಗಿ ಸಾಕಷ್ಟು ಆದಾಯ ಈ ದೇಶಕ್ಕೆ ಇದೆ.
ಈ ದೇಶದಲ್ಲಿ ಉತ್ಕೃಷ್ಟ ಶಿಕ್ಷಣ ವ್ಯವಸ್ಥೆ ಇದೆ. ಆದರೆ, ಪೂರ್ಣ ಉಚಿತ. ಶ್ರೀಮಂತರೇ ಅಧಿಕ ಇರುವ ಈ ದೇಶದಲ್ಲಿ ಏರ್ಪೋರ್ಟ್ ಇಲ್ಲ. ಇಲ್ಲಿನ ಜನರು ನೆರೆಯ ದೇಶಗಳಿಗೆ ಹೋಗಿ ವಿಮಾನ ಹತ್ತುತ್ತಾರೆ.
