ಟ್ರಂಪ್ ಸರ್ಕಾರದ ವಿರುದ್ಧ ಭಾರತೀಯ ವಿದ್ಯಾರ್ಥಿಗಳಿಂದ ಕಾನೂನು ಸಮರ

ವಾಷಿಂಗ್ಟನ್ :ಕ್ಯಾಂಪಸ್‌ನಲ್ಲಿ ಅಮೆರಿಕ ವಿರೋಧಿ ಚಟುವಟಿಕೆಯ ಆರೋಪದ ಮೇಲೆ ಟ್ರಂಪ್ ಆಡಳಿತದ ಸರ್ಕಾರವು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ವೀಸಾಗಳನ್ನು ರದ್ದುಗೊಳಿಸಲು ಮುಂದಾಗಿದ್ದು ವೀಸಾ ರದ್ದತಿ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರ ನಡುವೆ ಮಹತ್ತರ ಬೆಳವಣಿಗೆಯೊಂದು ನಡೆದಿದೆ.
ಹೌದು, ಭಾರತೀಯ ವಿದ್ಯಾರ್ಥಿ ಚಿನ್ಮಯ್ ಡಿಯೋರ್ ಹಾಗೂ ಚೀನಾ ಮತ್ತು ನೇಪಾಳದ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಮೂವರು ಡೊನಾಲ್ಡ್ ಟ್ರಂಪ್ ಆಡಳಿತದ ಸರ್ಕಾರದ ಮೇಲೆ ಮೊಕದ್ದಮೆ ಹೂಡಿದ್ದಾರೆ.

ಈ ತಿಂಗಳು ತಮ್ಮ ವಿದ್ಯಾರ್ಥಿ ವೀಸಾ ಅವಧಿಯ ಬಗ್ಗೆ ಮಾಹಿತಿಯನ್ನೇ ನೀಡದೇ ತಮ್ಮನ್ನು ದೇಶದಿಂದ ಗಡೀಪಾರು ಮಾಡಲಾಗುತ್ತಿದೆ ಎಂದು ಚಿನ್ಮಯ್ ಹಾಗೂ ಇನ್ನಿಬ್ಬರು ವಿದ್ಯಾರ್ಥಿಗಳು ಆರೋಪಿಸಿ ತಮ್ಮ ಮೊಕದ್ದಮೆಯಲ್ಲಿ ಉಲ್ಲೇಖಿಸಿದ್ದಾರೆ. ಈ ಮೂಲಕ, ವಿದ್ಯಾರ್ಥಿಗಳು ಯುಎಸ್ ನಲ್ಲಿ ತಮ್ಮ ಹಕ್ಕು ಸಾಧಸಲು ಪ್ರಯತ್ನಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಮಿಚಿಗನ್‌ನ ಪೂರ್ವ ಜಿಲ್ಲೆಯ ಯುಎಸ್ ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಲಾದ ಈ ಮೊಕದ್ದಮೆಯನ್ನು ವಿದ್ಯಾರ್ಥಿಗಳ ಪರವಾಗಿ ಅಮೆರಿಕನ್ ಸಿವಿಲ್ ಲಿಬರ್ಟೀಸ್ ಯೂನಿಯನ್ (ACLU) ಸಲ್ಲಿಸಿದೆ.
ಭಾರತೀಯರು ಸೇರಿದಂತೆ ನೂರಾರು ವಿದ್ಯಾರ್ಥಿಗಳು ಸ್ವಯಂ-ಗಡೀಪಾರು ಮಾಡುವಂತೆ ಸೂಚಿಸಿರುವ ಇಮೇಲ್‌ಗಳು ಈಗಾಗಲೇ ಹಲವರಿಗೆ ಅಮೆರಿಕಾ ತಲುಪಿಸಿದೆ. ಅಂಗಡಿ ಕಳ್ಳತನ ಅಥವಾ ಸಂಚಾರ ಉಲ್ಲಂಘನೆಯಂತಹ ಸಣ್ಣಪುಟ್ಟ ಅಪರಾಧಗಳಲ್ಲಿ ಆರೋಪಿಸಲ್ಪಟ್ಟ ವಿದ್ಯಾರ್ಥಿಗಳನ್ನು ಸಹ ಗುರಿಯಾಗಿಸಲಾಗುತ್ತಿದ್ದು ಟ್ರಂಪ್ ಸರ್ಕಾರ ಈ ವೀಸಾ ರದ್ದತಿ ಮಾಡಲಾರಂಭಿಸಿದೆ.
ಇಂಥಹ ಗಡೀಪಾರು ಪ್ರಕ್ರಿಯೆಯ ವಿರುದ್ಧ ದನಿ ಎತ್ತಿರುವ ವಿದ್ಯಾರ್ಥಿಗಳು ಕಾನೂನಿನ ಮೊರೆ ಹೋಗಿದ್ದಾರೆ.