ಊಟ ಬಿಸಾಕುತ್ತಾರೆ, ಶೂ ತೆಗೆಸುತ್ತಿದ್ದಾರೆ ದರ್ಶನ್ ಜೈಲು ಪಾಡಿಗೆ ವಕೀಲರ ಅಸಮಾಧಾನ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹೈಕೋರ್ಟ್‌ನಿಂದ ಜಾಮೀನು ಪಡೆದು ಹೊರಬಂದಿದ್ದ ಆರೋಪಿಗಳಿಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದ್ದು, ಜಾಮೀನು ರದ್ದುಗೊಳಿಸಿ ಮತ್ತೆ ಜೈಲಿಗಟ್ಟಿದೆ. ಈ ಮೂಲಕ ಪ್ರಕರಣದ ಎ2 ಆರೋಪಿ ನಟ ದರ್ಶನ್ ತೂಗುದೀಪ ಎರಡನೇ ಬಾರಿಗೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.

ಹೀಗೆ ಜೈಲು ಪಾಲಾಗಿರುವ ನಟ ದರ್ಶನ್ ಪರ ಇಂದು ( ಸೆಪ್ಟೆಂಬರ್ 2 ) ವಕೀಲ ಸುನಿಲ್ ಕುಮಾರ್ ಬೆಂಗಳೂರು 57ನೇ ಸೆಷನ್ ನ್ಯಾಯಾಲಯದ ಮುಂದೆ ಜೈಲಿನಲ್ಲಿ ದರ್ಶನ್ ಎದುರಿಸುತ್ತಿರುವ ತೊಂದರೆಗಳನ್ನು ಬಿಚ್ಚಿಟ್ಟಿದ್ದಾರೆ.
ದರ್ಶನ್‌ಗೆ ಹೆಚ್ಚುವರಿ ದಿಂಬು ಹಾಗೂ ಹಾಸಿಗೆಯನ್ನು ನೀಡಬೇಕೆಂದು ಅರ್ಜಿ ಸಲ್ಲಿಸಿದ್ದ ವಕೀಲರು ಜೈಲಿನಲ್ಲಿ ದರ್ಶನ್‌ಗೆ ಊಟ ಬಿಸಾಕುತ್ತಿದ್ದಾರೆ, ಶೂ ಹಾಕಿಕೊಂಡರೆ ಅದನ್ನೂ ಸಹ ತೆಗೆಸುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಕಾಂಡಿಮೆಂಟ್ಸ್‌ಗೂ ಸಹ ಹಣ ನೀಡಲು ಬಿಡುತ್ತಿಲ್ಲ, ಜೈಲಿನ ಅಧಿಕಾರಿಗಳು ಕನಿಷ್ಟ ಸೌಲಭ್ಯವನ್ನು ನೀಡಬೇಕೆಂದು ನ್ಯಾಯಾಲಯದ ಮುಂದೆ ಬೇಡಿಕೆ ಇಟ್ಟಿದ್ದಾರೆ.
ಈ ಮೂಲಕ ಜೈಲಿನಲ್ಲಿ ದರ್ಶನ್ ಪಡುತ್ತಿರುವ ಪಾಡನ್ನು ವಕೀಲರು ಬಿಚ್ಚಿಟ್ಟಿದ್ದಾರೆ. ನಾವು ಕೇಳುತ್ತಿರುವುದು ಮೂಲಭೂತ ಬೇಡಿಕೆ, ಹೀಗಾಗಿ ಜೈಲಧಿಕಾರಿಗಳು ಇದನ್ನು ಕೊಡಲೇಬೇಕು ಎಂದು ವಾದ ಮಾಡಿದ್ದಾರೆ.