ಕಾಲ್ತುಳಿತ ಪ್ರಕರಣ; ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ಅಮಾನತು ರದ್ದು, ರಾಜ್ಯ ಸರ್ಕಾರಕ್ಕೆ ಮುಖಭಂಗ!

ಬೆಂಗಳೂರು: ಜೂನ್4ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಐಪಿಎಸ್ ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿತ್ತು. ಸರ್ಕಾರದ ಈ ನಡೆಗೆ ಸಾರ್ವಜನಿಕರು ಹಾಗೂ ವಿರೋಧ ಪಕ್ಷದ ನಾಯಕರು ಕಿಡಿಕಾರಿದ್ದರು.

ಈ ಕುರಿತಂತೆ ಇದೀಗ ಕೇಂದ್ರ ಆಡಳಿತಾತ್ಮಕ ನ್ಯಾಯ ಮಂಡಳಿ ಆದೇಶ ಹೊರಡಿಸಿದ್ದು, ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ಅವರ ಅಮಾನತು ರದ್ದುಗೊಳಿಸಿದೆ. ಈ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮುಖಭಂಗವಾಗಿದೆ.

ನ್ಯಾಯಮೂರ್ತಿಗಳಾದ ಬಿ.ಕೆ. ಶ್ರೀವಾತ್ಸವ, ಸಂತೋಷ್ ಮೆಹ್ರಾ ಅವರಿದ್ದ ಪೀಠ ಈ ಆದೇಶವನ್ನು ಹೊರಡಿಸಿದೆ. ವಿಕಾಸ್ ಕುಮಾರ್ ಪರ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಅವರು ವಾದ ಮಂಡಿಸಿದ್ದಾರೆ. ಇನ್ನು ವಿಕಾಸ್ ಕುಮಾರ್ ಅವರಿಗೆ ಹಿಂದಿನ ಎಲ್ಲ ಭತ್ಯೆ, ಸೌಲಭ್ಯಗಳನ್ನೂ ಸಹ ಒದಗಿಸಬೇಕು ಎಂದೂ ಸಹ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಸಾವನ್ನಪ್ಪಿದ್ದರು. ರಾಜ್ಯ ಸರ್ಕಾರ ಮೃತ ಕುಟುಂಬಕ್ಕೆ 25 ಲಕ್ಷ ಪರಿಹಾರ ಧನವನ್ನು ನೀಡಿತ್ತು. ಆರ್ಸಿಬಿ ಹಾಗೂ ಕೆಎಸ್ಸಿಎ ಸಹ ತಲಾ 5 ಲಕ್ಷ ರೂಪಾಯಿ ಪರಿಹಾರ ಧನವನ್ನು ಘೋಷಿಸಿದ್ದವು.
