ಲಹರಿ ಆಡಿಯೋ ಸಂಸ್ಥೆಯಿಂದ 50 ವರ್ಷಗಳ ಸಂಭ್ರಮ: 10,000 ಹಾಡುಗಳನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆ

ಆಡಿಯೋ ಹಾಗೂ ಸಂಗೀತ ಕ್ಷೇತ್ರದ ಬಹು ದೊಡ್ಡ ಹೆಸರು ಮಾಡಿರುವ ಲಹರಿ ಆಡಿಯೋ ಸಂಸ್ಥೆ 50 ವರ್ಷಗಳನ್ನು ಪೂರೈಸಿ ಸುವರ್ಣ ಸಂಭ್ರಮದಲ್ಲಿದೆ. ಈ ಹೊತ್ತಿನಲ್ಲಿ ಲಹರಿ ಸಂಸ್ಥೆ ಹೊಸ ಯೋಜನೆ ಹಾಕಿಕೊಂಡಿದೆ. ಮುಂದಿನ ಒಂದು ವರ್ಷದ ಒಳಗೆ 10 ಸಾವಿರ ಹಾಡುಗಳನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿದೆ. ಆ ನಿಟ್ಟಿನಲ್ಲಿ ಈಗಾಗಲೇ 1500 ಹಾಡುಗಳನ್ನು ನಿರ್ಮಿಸಿದ್ದು, 50 ಹಾಡುಗಳು ಆಗಲೇ ಪ್ರಸಾರ ಆಗಿವೆ. ಹಾಡುಗಳನ್ನು ಪ್ರಸ್ತುತ ಪಡಿಸುವ ಮೂಲಕ ಪ್ರಯೋಗ್ ಸ್ಟುಡಿಯೋ ಹಾಗೂ ಓನ್ಲಿ ಕನ್ನಡ ಓಟಿಟಿ ಕೂಡ ಸಾಥ್ ನೀಡುತ್ತಿದೆ.

ಈ ಕುರಿತು ಮಾತನಾಡಿದ ಲಹರಿ ವೇಲು, ‘ಪ್ರಯೋಗ್ ಸ್ಟುಡಿಯೋ ಸಹಕಾರದಿಂದ ಕಳೆದ ಒಂದು ತಿಂಗಳಿನಿಂದ ನಮ್ಮ ಕನಸಿನ ಯೋಜನೆಗೆ ಚಾಲನೆ ನೀಡಿದ್ದೇವೆ. 1500ಕ್ಕೂ ಹೆಚ್ಚು ಶಾಸ್ತ್ರೀಯ ಸಂಗೀತ ಹಾಗೂ ಭಕ್ತಿಗೀತೆಗಳನ್ನು ರೆಕಾರ್ಡ್ ಮಾಡಿದ್ದು, ಇನ್ನೂರಕ್ಕೂ ಹೆಚ್ಚು ಹೊಸ ಪ್ರತಿಭಾನ್ವಿತ ಕಲಾವಿದರನ್ನು ಗುರುತಿಸಿ ವೇದಿಕೆ ನೀಡಿದ್ದೇವೆ. ಈ ಯೋಜನೆಯಿಂದ ಕಲಾವಿದರು, ತಂತ್ರಜ್ಞರು, ಬರಹಗಾರರು, ಸಂಗೀತ ನಿರ್ದೇಶಕರು ಬೆಳಕಿಗೆ ಬರಲಿದ್ದಾರೆ’ ಎನ್ನುತ್ತಾರೆ.
ಲಹರಿ ಮ್ಯೂಸಿಕ್, ಎಂಆರ್‌ಟಿ ಮ್ಯೂಸಿಕ್ ಯೂಟ್ಯೂಬ್ ಚಾನಲ್ ಹಾಗೂ ಓನ್ಲಿ ಕನ್ನಡ ಓಟಿಟಿ ವಾಹಿನಿ ಮೂಲಕ ಹಾಡುಗಳು ಪ್ರಸಾರ ಆಗಲಿವೆ. ಶಾಸ್ತ್ರೀಯ ಸಂಗೀತ, ಸಾಹಿತ್ಯ, ಭಾವಗೀತೆ, ಭಕ್ತಿ ಗೀತೆ, ಜನಪದ ಗೀತೆ, ಶಾಸ್ತ್ರೀಯ ನೃತ್ಯ, ಜನಪದ ನೃತ್ಯ, ಹರಿಕಥೆ, ಯಕ್ಷಗಾನ, ನಾಟಕ, ಕಿರುಚಿತ್ರಗಳು ಹಾಗೂ ನಮ್ಮ ಭಾರತೀಯ ಸಂಸ್ಕೃತಿಯ ಕಲಾ ಪ್ರಕಾರಗಳನ್ನು ಸಂರಕ್ಷಿಸಿ, ಪೋಷಿಸಿ ಮುಂದಿನ ಪೀಳಿಗೆಗೆ ಪ್ರೋತ್ಸಾಹ ನೀಡುವ ಉದ್ದೇಶವನ್ನು ಲಹರಿ ಸಂಸ್ಥೆಯು ಹೊಂದಿದೆ.
ಕಿರುತೆರೆಯ ಅಮೃತಾಂಜನ್ ಜೋಡಿಯ ಹೊಸ ಸಿನಿಮಾ ಅಮೃತಾ ಅಂಜನ್: ಜನಪ್ರಿಯ ಕಿರುಚಿತ್ರ ಸರಣಿ ‘ಅಮೃತಾಂಜನ್’ ಖ್ಯಾತಿಯ ತಂಡ ಇದೀಗ ಹೆಸರು ಕೊಂಚ ಬದಲಿಸಿ ಸಿನಿಮಾ ಮಾಡಲು ಮುಂದಾಗಿದೆ. ನವೆಂಬರ್‌ನಲ್ಲಿ ತೆರೆ ಕಾಣಲಿರುವ ಈ ಚಿತ್ರದ ಹೆಸರು ‘ಅಮೃತಾ ಅಂಜನ್’. ಸಿನಿಮಾ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ಜಯರಾಮ್, ‘ಅಮೃತಾಂಜನ್ ಕಿರುಚಿತ್ರದ ಜನಪ್ರಿಯತೆಯನ್ನು ದುಡಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ಚಿತ್ರ ಮಾಡಿದ್ದೇವೆ. ಅಮೃತಾಂಜನ್ ಎಂಬ ಟೈಟಲ್ ಸಿಗದ ಕಾರಣ ಅಮೃತಾ ಅಂಜನ್ ಎಂಬ ಶೀರ್ಷಿಕೆ ಇಟ್ಟಿದ್ದೇವೆ. ಚಿತ್ರದ ಕಥೆಗೂ ಶೀರ್ಷಿಕೆಗೂ ಸಂಬಂಧ ಇಲ್ಲ. ಹಾಸ್ಯ ಹಾಗೂ ತಂದೆ ಮಗನ ಭಾವನಾತ್ಮಕತೆ ಸಿನಿಮಾದ ಹೈಲೈಟ್’ ಎಂದರು. ನಾಯಕ ನಟ ಸುಧಾಕರ್, ಪಾಯಲ್ ಚೆಂಗಪ್ಪ, ಗೌರವ್, ಶ್ರೀ ಭವ್ಯಾ ಇದ್ದರು. ವಿಜಯ ಕುಮಾರ್ ಈ ಚಿತ್ರದ ನಿರ್ಮಾಪಕರು.
