ಕಾರ್ಮಿಕ ಇಲಾಖೆ ಸಮುಚ್ಛಯ ಗೋಡೆ ಕುಸಿತ; ಓರ್ವ ಕಾರ್ಮಿಕ ಸಾವು, ಸಹೋದರನಿಗೆ ಗಂಭೀರ ಗಾಯ

ಶಿವಮೊಗ್ಗ: ತಾಲೂಕಿನ (Shivamogga) ಕೋಟೆಗಂಗೂರಿನ ಸಿದ್ಲೀಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಕಾರ್ಮಿಕ ಇಲಾಖೆಯ ಸಮುಚ್ಛಯ ಕಟ್ಟಡದ ಗೋಡೆ ಕುಸಿದು (Building Collapse) ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ. ಆತನ ಸಹೋದರನ ಕೈಕಾಲುಗಳು ಮುರಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ.

ಮೃತನನ್ನು ಸಿದ್ಲೀಪುರ ಗ್ರಾಮದ ಮಂಜು (35) ಎಂದು ಗುರುತಿಸಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಬಳಕೆಯಾಗಿದ್ದ ತಾತ್ಕಾಲಿಕ ಕಟ್ಟಡ ಕೆಡವಲು ಮಂಜು ಮತ್ತು ಆತನ ಸಹೋದರ ಮುತ್ತು ಮುಂದಾಗಿದ್ದರು. ಈ ವೇಳೆ, ಸಮುಚ್ಚಾಯ ಕಟ್ಟಡದ ಒಂದು ಭಾಗದ ಗೋಡೆ ದಿಢೀರನೆ ಕುಸಿದು ಬಿದ್ದು ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
ಗೋಡೆಯ ಅವಶೇಷಗಳ ಅಡಿಯಲ್ಲಿ ಸಿಲುಕಿದ ಮಂಜು ಸ್ಥಳದಲ್ಲೇ ಸಾವನ್ನಪ್ಪಿದರೆ, ಆತನ ಸಹೋದರ ಮುತ್ತು ಅವರ ಕೈ ಕಾಲುಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡಿರುವ ಮುತ್ತುವನ್ನು ತಕ್ಷಣವೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರ್ಮಿಕ ಇಲಾಖೆಯ ವತಿಯಿಂದ ಇತ್ತೀಚೆಗೆ ಸಿದ್ಲೀಪುರದಲ್ಲಿ ಸಮುಚ್ಚಯ ಭವನದ ಕಟ್ಟಡವನ್ನು ನಿರ್ಮಿಸಲಾಗಿತ್ತು. ಇತ್ತೀಚೆಗೆ ಅದರ ಉದ್ಘಾಟನೆಯನ್ನೂ ಮಾಡಲಾಗಿತ್ತು.