ಕಾನೂನು ಇದ್ದರೂ ಕಾರ್ಮಿಕ ಶೋಷಣೆ ಮುಂದುವರಿಕೆ: ಸುರಕ್ಷತಾ ಸಾಧನ ಇಲ್ಲದೆ ಮ್ಯಾನ್‌ಹೋಲ್‌ಗೆ ಇಳಿಯಲು ಕಾರ್ಮಿಕರನ್ನು ಒತ್ತಾಯಿಸಿದ ಗುತ್ತಿಗೆದಾರ.

ಬೆಂಗಳೂರು: ಮ್ಯಾನ್ ಹೋಲ್ ಸ್ವಚ್ಛಗೊಳಿಸುವ ವೇಳೆ ಮೂವರು ಕಾರ್ಮಿಕರು ಉಸಿರುಗಟ್ಟಿ ಅಸ್ವಸ್ಥಗೊಂಡಿರುವ ಘಟನೆ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ನೀಲಸಂದ್ರ ಬಳಿ ಭಾನುವಾರ ನಡೆದಿದೆ.

ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ವಿರುದ್ಧ ಕಠಿಣ ಕಾನೂನು ಇದ್ದರೂ ನಗರದಲ್ಲಿ ಕಾರ್ಮಿಕರ ಶೋಷಣೆ ಮುಂದುವರೆದಿದೆ. ಸುರಕ್ಷತಾ ಸಾಧನಗಳು ಇಲ್ಲದ ಕಾರಣ ಹಸ್ತಚಾಲಿತವಾಗಿ ಸ್ವಚ್ಛಗೊಳಿಸುವಂತೆ ಗುತ್ತಿಗೆದಾರ ಕಾರ್ಮಿಕರನ್ನು ಒತ್ತಾಯಿಸಿದ್ದಾನೆ.
ಆರಂಭದಲ್ಲಿ ಇಬ್ಬರು ಕಾರ್ಮಿಕರು ಇಳಿದಿದ್ದಾರೆ. ಮ್ಯಾನ್ ಹೋಲ್ ಸ್ವಚ್ಛಗೊಳಿಸುವಾಗ ಒಳಗೆ ಸಿಲುಕಿ ಉಸಿರಾಡಲು ಸಾಧ್ಯವಾಗದೆ, ರಕ್ಷಣೆಗೆ ಕೂಗಿದ್ದಾರೆ. ಈ ವೇಳ ಅವರನ್ನು ರಕ್ಷಿಸಲು ಮತ್ತೊಬ್ಬ ಕಾರ್ಮಿಕ ಕೂಡ ಕೆಳಗೆ ಇಳಿದಿದ್ದು, ಆತ ಕೂಡ ಉಸಿರುಗಟ್ಟಿ ನಿತ್ರಾಣಗೊಂಡಿದ್ದಾನೆ. ನಂತರ ಸ್ಥಳೀಯರು ಮೂವರನ್ನು ಹಗ್ಗ ಬಳಸಿ, ಹೊರಗೆ ತಂದಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ.
ಚಿಕಿತ್ಸೆ ಬಳಿಕ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಘಟನೆ ಬೆನ್ನಲ್ಲೇ ಗುತ್ತಿಗೆದಾರನ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.