ಕುಂದಾಪುರ: ಪ್ರೀತಿಸಿ, ಗರ್ಭವತಿಯನ್ನಾಗಿಸಿ ಕೈಕೊಟ್ಟ ಪ್ರಿಯಕರನಿಗೆ ಜೈಲು ಶಿಕ್ಷೆ

ಕುಂದಾಪುರ: ಮದುವೆಯಾಗುವುದಾಗಿ ನಂಬಿಸಿ, ಗರ್ಭವತಿಯನ್ನಾಗಿಸಿ ಬಳಿಕ ಕೈ ಕೊಟ್ಟ ಪ್ರಿಯಕರನಿಗೆ ಇಲ್ಲಿನ ಪ್ರಧಾನ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಶಿಕ್ಷೆ ನೀಡಿದೆ.

ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯ ಗೆಧ್ದೋಡು ಎಂಬಲ್ಲಿಯ ಸುಧಾಕರ ಪೂಜಾರಿ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿದ್ದ.
ಆಕೆ ಗರ್ಭಿಣಿಯಾದ ಬಳಿಕ ಮದುವೆಯಾಗದೇ ವಂಚಿಸಿದ್ದ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಅಂದಿನ ಪೊಲೀಸ್ ಉಪನಿರೀಕ್ಷಕ ರಾಘವ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಲಯ ವಿಚಾರಣೆ ಸಮಯ ವೈದ್ಯರ ಮುಖೇನ ಮಗು ಹಾಗೂ ಆರೋಪಿಯ ರಕ್ತ ತೆಗೆದು ವಿಧಿವಿಜ್ಞಾನ ಸಂಸ್ಥೆಗೆ ಕಳುಹಿಸಿ, ಅಲ್ಲಿನ ವರದಿ ಪ್ರಕಾರ ಆರೋಪಿಯೇ ಮಗುವಿನ ಜೈವಿಕ ತಂದೆ ಎಂಬ ಬಲವಾದ ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ ನ್ಯಾಯಾಧೀಶೆ ಮಂಜುಳಾ ಬಿ. ತೀರ್ಪು ನೀಡಿದ್ದು, ಸುಧಾಕರ ಪೂಜಾರಿ ತಪ್ಪಿತಸ್ಥನೆಂದು ತೀರ್ಮಾನಿಸಿ 1 ವರ್ಷದವರೆಗೆ ಕಾರಾಗೃಹ ವಾಸ ಮತ್ತು 3,000 ರೂ. ಜುಲ್ಮಾನೆ ವಿಧಿಸಿದ್ದಾರೆ. ಆರೋಪಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದ ಅವಧಿಯನ್ನು ವಜಾ ಮಾಡಲಾಗಿದೆ.
ಸರಕಾರದ ಪರ ಕುಂದಾಪುರದ ಸಹಾಯಕ ಸರಕಾರಿ ಅಭಿಯೋಜಕ ಉದಯ ಕುಮಾರ ಬಿ.ಎ. ವಾದಿಸಿದ್ದರು
