ಕೊಲ್ಲೂರು ದೇವಸ್ಥಾನದ ಕಳ್ಳತನ: ತೆಲಂಗಾಣದ ಮಹಿಳೆಯ ಬಂಧನ, ಚಿನ್ನ ವಶ

ಕೊಲ್ಲೂರು: ಕೊಲ್ಲೂರು ದೇವಸ್ಥಾನದಲ್ಲಿ ಭಕ್ತರೊಬ್ಬರ ಬ್ಯಾಗ್ ನಿಂದ ಚಿನ್ನ ಕದ್ದ ಕಳ್ಳಿಯನ್ನು ಕೊಲ್ಲೂರು ಪೊಲೀಸರು 24 ಗಂಟೆಗಳ ಒಳಗಾಗಿ ಅರೆಸ್ಟ್ ಮಾಡಿದ್ದಾರೆ.
ಬಂಧಿತ ಆರೋಪಿಯನ್ನು ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಗಣೇಶ ನಗರದ ಯಾಧವ ದುರ್ಗಮ್ಮ ಎಂದು ಗುರುತಿಸಲಾಗಿದೆ. ಆಕೆಯಿಂದ ಕಳವುಗೈದ 2.5 ಲಕ್ಷ ರೂ. ಮೌಲ್ಯದ ಹವಳದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ.

ಸೆಪ್ಟೆಂಬರ್ 26 ರಂದು ರಾತ್ರಿ 9ಗಂಟೆ ಸುಮಾರಿಗೆ ದೇವಸ್ಥಾನದಲ್ಲಿ ದೇವಿಪ್ರಿಯಾ ಎಂಬವರ ಬ್ಯಾಗ್‌ನಲ್ಲಿದ್ದ 2.5ಲಕ್ಷ ರೂ. ಮೌಲ್ಯದ 3 ಪವನ್‌ನ ಹವಳದ ಚಿನ್ನದ ಸರ ಕಳವಾಗಿತ್ತು. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಕೊಲ್ಲೂರು ಪೊಲೀಸ್ ಠಾಣಾ ಉಪನಿರೀಕ್ಷಕ ವಿನಯ್ ಎಂ.ಕೊರ್ಲಹಳ್ಳಿ ನೇತೃತ್ವದ ತಂಡ, ಸಿಸಿಟಿವಿ ಕ್ಯಾಮೆರಾ ಮತ್ತು ತಾಂತ್ರಿಕ ಸಹಾಯದಿಂದ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.
ಈ ಕಾರ್ಯಾಚರಣೆಯಲ್ಲಿ ಕೊಲ್ಲೂರು ಪೊಲೀಸ್ ಉಪನಿರೀಕ್ಷಕಿ ಸುಧಾರಾಣಿ ಟಿ. ಹಾಗೂ ಸಿಬ್ಬಂದಿ ರಾಮ ಪೂಜಾರಿ, ನಾಗೇಂದ್ರ, ಸುರೇಶ್, ನರಸಿಂಹ, ರಾಘವೇಂದ್ರ, ವಾಸಂತಿ ಹಾಗೂ ಸಂತೋಷ ಪಾಲ್ಗೊಂಡಿದ್ದರು.
