ಕೊಡಗಿನಲ್ಲಿ ಡೇಟಿಂಗ್ ಹೆಸರಿನಲ್ಲಿ ವಂಚನೆ: ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋ ಪೋಸ್ಟ್ ಮಾಡಿದ ಯುವಕ ಅರೆಸ್ಟ್

ಕೊಡಗು : ಡೇಟಿಂಗ್‌ಗೆ ಮಡಿಕೇರಿಯಲ್ಲಿ ಹುಡುಗಿಯರು, ಆಂಟಿಯರು ಸಿಗುತ್ತಾರೆ ಎಂದು ಇನ್ಸ್ಟಾಗ್ರಾಂನಲ್ಲಿ ಹಾಕಿ ಜನರನ್ನು ವಂಚಿಸುತ್ತಿದ್ದ ಯುವಕನನ್ನು ಮಡಿಕೇರಿ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಚಿಮ್ಮಡ ಜಗಳದ ಗ್ರಾಮದ ನಾಗಪ್ಪ ಹನುಮಂತ ಎಂಬಾತನನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ. ಕಳೆದ ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿರುವ ಆರೋಪಿ ನಾಗಪ್ಪ ಹನುಮಂತ ಆಗಸ್ಟ್ 21 ರಂದು ತನ್ನ ಪತ್ನಿಯೊಂದಿಗೆ ಮಡಿಕೇರಿಗೆ ಬಂದಿದ್ದ. ಈ ವೇಳೆ ಪತ್ನಿಯನ್ನು ಲಾಡ್ಜ್ನಲ್ಲಿ ಬಿಟ್ಟು ತಾನು ಮಡಿಕೇರಿ ಬಸ್ಸು ನಿಲ್ದಾಣಕ್ಕೆ ಬಂದು ವೀಡಿಯೋ ಮಾಡಿದ್ದ.
ಅದಕ್ಕೆ ಇನ್ಸ್ಟಾಗ್ರಾಂನಲ್ಲೇ ದೊರೆತ ಉತ್ತರ ಭಾರತದ ಹುಡುಗಿಯರ ವಿಡಿಯೋ ಒಂದನ್ನು ಸೇರಿಸಿ ಎಡಿಟ್ ಮಾಡಿದ್ದ. ಬಳಿಕ ಕೋಟ್ಯ ಎಂಬ ಇನ್ಸ್ಟಾ ಗ್ರಾಂ ಲಿಂಕ್ ನಲ್ಲಿ ಅದನ್ನು ಶೇರ್ ಮಾಡಿದ್ದ. ಮಡಿಕೇರಿಯಲ್ಲಿ ಹುಡುಗಿಯರು, ಆಂಟಿಯರು ದೊರೆಯುತ್ತಾರೆ. ಯಾವುದೇ ರೀತಿ ಸಮಸ್ಯೆ ಇಲ್ಲ. ಎಲ್ಲವೂ ಸುರಕ್ಷಿತವಾಗಿ ನಡೆಯುತ್ತದೆ. ನೀವು ಇರುವಲ್ಲಿ ಆಂಟಿಯರು, ಹುಡುಗಿಯರು ಬರುತ್ತಾರೆ ಎಂದು ವಿಡಿಯೋ ಮಾಡಿದ್ದ. ಈ ವಿಡಿಯೋ ಎಲ್ಲೆಡೆ ಶೇರ್ ಆಗಿತ್ತು. ಹೀಗಾಗಿ ಈ ವಿಡಿಯೋವನ್ನು ನೋಡಿದ್ದ ಕೊಡಗಿನ ಜನರು ಕೊಡಗು ಜಿಲ್ಲೆಯ ಮರ್ಯಾದೆಯನ್ನು ತೆಗೆಯಲಾಗುತ್ತಿದೆ ಎಂದು ಆ ಪೋಸ್ಟ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಹೀಗಾಗಿ ಆ ಪೋಸ್ಟ್ ವಿರುದ್ಧ ಮಡಿಕೇರಿ ನಗರ ಠಾಣೆ ಪೊಲೀಸರು ಸುಮೊಟೋ ದೂರು ದಾಖಲಿಸಿಕೊಂಡಿದ್ದರು. ವಿಚಾರಣೆ ಮಾಡಿ ನೋಡಿದಾಗ ಇದು ಹುಡುಗಿಯರು ಹಾಗೂ ಆಂಟಿಯರು ಸಿಗುತ್ತಾರೆ ಎಂದು ಹೇಳಿ ಮೋಸ ಮಾಡುತ್ತಿರುವ ವ್ಯಕ್ತಿ ಬಾಗಲಕೋಟೆ ಜಿಲ್ಲೆಯವನು ಎನ್ನುವುದು ಗೊತ್ತಾಗಿತ್ತು. ಬಾಗಲಕೋಟೆಗೆ ಹೋದ ಮಡಿಕೇರಿ ಪೊಲೀಸರು ಸದ್ಯ ಆರೋಪಿ ನಾಗಪ್ಪ ಹನುಮಂತ ಎಂಬಾತನನ್ನು ಹೆಡೆಮುರಿಕಟ್ಟಿದ್ದಾರೆ. ವೇಷ್ಯಾವಾಟಿಕೆಗೆ ಪ್ರಚೋದನೆ, ಐಟಿ ದುರ್ಬಳಕೆ ಸೇರಿದಂತೆ ವಿವಿಧ ನಾಲ್ಕು ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ನಾಗಪ್ಪ ಹನುಮಂತ ಕೂಡ ಇದೇ ರೀತಿ ಒಂದು ಆಯಪ್ ಮೂಲಕ ಮೋಸ ಹೋಗಿದ್ದ ಎನ್ನುವುದು ಪೊಲೀಸರ ವಿಚಾರಣೆ ವೇಳೆ ಗೊತ್ತಾಗಿದೆ. ಹೀಗಾಗಿಯೇ ಬಳಿಕ ತಾನೂ ಕೂಡ ಇದೇ ರೀತಿ ಜನರನ್ನು ವಂಚಿಸಲು ನಿರ್ಧರಿಸಿ ಆರೋಪಿ ನಾಗಪ್ಪ ಹನುಮಂತ ಆ ಕೆಲಸಕ್ಕೆ ಇಳಿದಿದ್ದ. ಆರೋಪಿಯನ್ನು ಬಂಧಿಸಿರುವ ಮಡಿಕೇರಿ ನಗರ ಠಾಣೆ ಪೊಲೀಸರು ಆತನ ಖಾತೆಯಿಂದ 80 ಸಾವಿರ ರೂಪಾಯಿ ನಗದು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ 5 ಸಿಮ್ ಕಾರ್ಡುಗಳನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ಒಂದು ತಿಂಗಳಿನಲ್ಲಿಯೇ ಈ ಖದೀಮ 40 ಸಾವಿರ ರೂಪಾಯಿಯನ್ನು ಜನರಿಂದ ದೋಚಿದ್ದ ಎಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹೇಳಿದ್ದಾರೆ.
ಮಡಿಕೇರಿಯಲ್ಲಿ ಹುಡುಗಿಯರು ಆಂಟಿಯರು ಸಿಗುತ್ತಾರೆ ಎಂದು ಇನ್ಸ್ಟಾದಲ್ಲಿ ವೀಡಿಯೋ ಒಂದನ್ನು ಪೋಸ್ಟ್ ಮಾಡಿದ ರೀತಿಯಲ್ಲೇ ಮೈಸೂರು, ಬೆಂಗಳೂರು ಬೆಳಗಾವಿ ಸೇರಿದಂತೆ ವಿವಿಧೆಡೆ ಹುಡುಗಿಯರು ಮತ್ತು ಆಂಟಿಯರು ಸಿಗುತ್ತಾರೆ ಎಂದು ಆರೋಪಿ ಪೋಸ್ಟ್ ಹಾಕಿರುವುದು ಬೆಳಕಿಗೆ ಬಂದಿದೆ. ಒಟ್ಟಿನಲ್ಲಿ ಅಡ್ಡ ದಾರಿಯಲ್ಲಿ ದುಡ್ಡು ಸಂಪಾದಿಸಲು ಮುಂದಾಗಿದ್ದ ನಾಗಪ್ಪ ಹನುಮಂತ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
