ಲವ್ ಮ್ಯಾರೇಜ್ ನ್ಯಾಯ ಪಂಚಾಯ್ತಿ ವೇಳೆ ಚಾಕು ಇರಿತ; ನಾಲ್ವರಿಗೆ ಗಾಯ, ಮೂವರ ಸ್ಥಿತಿ ಗಂಭೀರ

ಯಾದಗಿರಿ : ಲವ್ ಮ್ಯಾರೇಜ್ ವಿಷಯಕ್ಕೆ ನ್ಯಾಯ ಪಂಚಾಯ್ತಿ ಮಾಡುವಾಗ ಚಾಕು ಇರಿದ ಘಟನೆ ಯಾದಗಿರಿ ನಗರದ ಹಳೆ ಜಿಲ್ಲಾ ನ್ಯಾಯಾಲಯದ ಬಳಿ ನಡೆದಿದೆ. ಯಾದಗಿರಿ ತಾಲೂಕಿನ ನಾಗಾಲಾಪುರ ಗ್ರಾಮದ ಮಲ್ಲಪ್ಪ ಅಲಿಯಾಸ್ ನಿರ್ಮಲ್ ನಾಲ್ಕು ಜನರಿಗೆ ಚಾಕು ಇರಿದಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.

ಹೊನಗೇರಾ ಗ್ರಾಮದ ಪೀರಪ್ಪ, ಮಲ್ಲಪ್ಪ, ಮಲ್ಲೇಶ್ ಹಾಗೂ ಮಲ್ಲಪ್ಪ ಎಂಬುವರ ಮೇಲೆ ಚಾಕು ಇರಿತವಾಗಿದೆ. ನಾಲ್ಕು ಜನರಲ್ಲಿ ಪೀರಪ್ಪನಿಗೆ ಗಂಭೀರ ಗಾಯವಾಗಿದ್ದು, ಹೊಟ್ಟೆ ಹಾಗೂ ಕೈಗೆ ಚಾಕು ಇರಿತವಾಗಿದೆ. ಸದ್ಯ ಗಾಯಾಳುಗಳನ್ನು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಏನಿದು ಘಟನೆ
ಮಲ್ಲಾರೆಡ್ಡಿ ಹಾಗೂ ಶೋಭಾ ಇಬ್ಬರು ಪ್ರೀತಿಸಿ ಮದುವೆಯಾಗಿದ್ರು. ಇಬ್ಬರು ಕುಟುಂಬಸ್ಥರ ಜೊತೆ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ರು. ಇದೇ ವೇಳೆ ಇಬ್ಬರಿಗೆ ಪರಿಚಯವಾಗಿ ಪರಸ್ಪರ ಪ್ರೀತಿಸಿದ್ದಾರೆ. ಬಳಿಕ ಕುಟುಂಬಸ್ಥರಿಗೆ ಗೊತ್ತಿಲ್ಲದೇ ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ರು. ಬಳಿಕ ಕುಟುಂಬಸ್ಥರಿಗೆ ಗೊತ್ತಾಗಿ ನ್ಯಾಯ ಪಂಚಾಯತಿ ಮಾಡಿ ಹಿರಿಯರ ಸಮ್ಮುಖದಲ್ಲಿ ಮತ್ತೊಮ್ಮೆ ಮದುವೆ ಮಾಡಬೇಕು ಅಂದುಕೊಂಡಿದ್ರು.
ಇದೇ ವಿಷಯಕ್ಕೆ ಇವತ್ತು ಎರಡು ಕುಟುಂಬಸ್ಥರಿಂದ ನ್ಯಾಯ ಪಂಚಾಯತಿ ಮಾಡ್ತಾಯಿದ್ರು. ಎರಡು ಕುಟುಂಬಸ್ಥರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿದೆ. ಆಗ ಚಾಕುನಿಂದ ಮಲ್ಲಪ್ಪ ಅಲಿಯಾಸ್ ನಿರ್ಮಲ್ ಇರಿದಿದ್ದಾನೆ. ಸದ್ಯ ಯಾದಗಿರಿ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಇನ್ನು ಬೆಂಗಳೂರಿನಲ್ಲೇ ಮಲ್ಲಾರೆಡ್ಡಿ-ಶೋಭಾ ಮದುವೆಯಾಗಿದ್ದರು. ಇವರಿಬ್ಬರ ಮದುವೆಯಾಗಲು ಮಲ್ಲಪ್ಪ ಅಲಿಯಾಸ್ ನಿರ್ಮಲ್ ಕಾರಣ ಎಂಬ ಸಿಟ್ಟು ಇತ್ತು. ನ್ಯಾಯ ಪಂಚಾಯ್ತಿ ಮಾಡುವಾಗಲೇ ಎರಡು ಕುಟುಂಬದ ಕಡೆಯವರಿಂದ ಜಗಳವಾಗಿದ್ದು, ಇಬ್ಬರ ಮದುವೆಯನ್ನು ನೀನೇ ಮಾಡಿಸಿದ್ದೀಯಾ ಎಂದು ಮಲ್ಲಪ್ಪನಿಗೆ ಯುವತಿ ಕುಟುಂಬಸ್ಥರು ಬೈದಿದ್ದರು. ಈ ವೇಳೆ ಪರಸ್ಪರ ಮಾತಿಗೆ ಮಾತು ಬೆಳೆದು ಎರಡು ಕುಟುಂಬಸ್ಥರು ಕೈ ಕೈ ಮಿಲಾಯಿಸಿದ್ದರು. ಈ ವೇಳೆ ನಾಲ್ಕು ಜನರ ಮೇಲೆ ಮಲ್ಲಪ್ಪ ಚಾಕು ಇರಿದಿದ್ದ. ಇನ್ನು ಮಲ್ಲಪ್ಪ, ಯುವಕ ಮಲ್ಲಾರೆಡ್ಡಿ ಸಂಬಂಧಿಕನಾಗಿದ್ದ.