ಬಿಹಾರ ಸದನದಲ್ಲಿ ‘ಖೈನಿ’ ವಿವಾದ ಸಾಮ್ರಾಟ್ ಚೌಧರಿ ವಿರುದ್ಧ ಆರ್ಜೆಡಿ ವಾಗ್ದಾಳಿ

ಪಾಟ್ನಾ: ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಬಿಹಾರ ಉಪಮುಖ್ಯಮಂತ್ರಿ ಮತ್ತು ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಅವರು ಅಧಿವೇಶನದ ಸಮಯದಲ್ಲಿ ‘ಖೈನಿ”( ತಂಬಾಕು ) ತಿನ್ನುತ್ತಿದ್ದರು ಎಂದು ವಿಪಕ್ಷ ಆರ್ಜೆಡಿ ಆರೋಪಿಸಿದೆ.
ವೈರಲ್ ವೀಡಿಯೊದಲ್ಲಿ ಸಾಮ್ರಾಟ್ ಚೌಧರಿ ಅವರು ಸದನದಲ್ಲಿ ಕುಳಿತಿರುವಾಗ ತಮ್ಮ ಅಂಗೈಗೆ ಒಂದು ವಸ್ತುವನ್ನು ಉಜ್ಜಿ ನಂತರ ಅದನ್ನು ಬಾಯಿಗೆ ಹಾಕಿಕೊಂಡಿರುವುದು ಕಂಡು ಬಂದಿದೆ. ಸಾಮಾಜಿಕ ಜಾಲತಾಣಗಳ ಬಳಕೆದಾರರು ಹಾಗೂ ಪ್ರತಿಪಕ್ಷದ ಬೆಂಬಲಿಗರು ಉಪಮುಖ್ಯಮಂತ್ರಿ ವಿಧಾನಸಭೆಯೊಳಗೆ ‘ಖೈನಿ’ ತಿನ್ನುತ್ತಿದ್ದರು ಎಂದು ಹೇಳಿದ್ದಾರೆ.


ಕಾಂಗ್ರೆಸ್ ಮತ್ತು ಆರ್ಜೆಡಿ ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್ಗಳಿಂದ ಈ ವೀಡಿಯೊವನ್ನು ಹಂಚಿಕೊಂಡವು ಮತ್ತು ಸಾಮ್ರಾಟ್ ಚೌಧರಿ ಅವರನ್ನು ತೀವ್ರವಾಗಿ ಟೀಕಿಸಿದೆ. ಕ್ಲಿಪ್ ಅನ್ನು ಹಂಚಿಕೊಂಡ ಆರ್ಜೆಡಿ, ಸದನದಲ್ಲಿ ,ತಂಬಾಕು ಅಗಿಯಲು ತಂತ್ರ ಎಂದು ಬರೆದಿದೆ. ವೀಡಿಯೊಗೆ “80 चुटकी 90 ताल, रगड़ के… मुंह में डाल” ಎಂಬ ಶೀರ್ಷಿಕೆಯನ್ನು ನೀಡಿದೆ.
ಈ ವೀಡಿಯೊ ಎಕ್ಸ್ ಮತ್ತು ಫೇಸ್ಬುಕ್ನಲ್ಲಿ ವೇಗವಾಗಿ ವೈರಲ್ ಆಗುತ್ತಿದ್ದಂತೆ ಹಲವಾರು ಸಾಮಾಜಿಕ ಜಾಲತಾಣಗಳ ಬಳಕೆದಾರರು ಸಾಮ್ರಾಟ್ ಚೌಧರಿಯ ನಡೆಯನ್ನು ಖಂಡಿಸಿದ್ದಾರೆ. ವಿಧಾನಸಭೆ ಪ್ರಜಾಪ್ರಭುತ್ವದ ದೇವಾಲಯ ಮತ್ತು ಅಂತಹ ನಡವಳಿಕೆ ನಿಜವಾಗಿದ್ದರೆ, ಅದು ಅಶಿಸ್ತಿಗೆ ಸಮಾನವಾಗಿದೆ ಎಂದು ಹೇಳಿದರು.