KBC ವಿವಾದ: ಅಮಿತಾಭ್ ಬಚ್ಚನ್ ಜೊತೆ ಅಧಿಕಪ್ರಸಂಗದಿಂದ ವರ್ತಿಸಿದ್ದ ಬಾಲಕ ಇಷಿತ್ ಭಟ್ ಕೊನೆಗೂ ಕ್ಷಮೆಯಾಚನೆ!

ಕೌನ್ ಬನೇಗಾ ಕರೋರ್‌ಪತಿಯಲ್ಲಿ ಅಮಿತಾಭ್ ಬಚ್ಚನ್ ಜೊತೆ ಅಧಿಕಪ್ರಸಂಗದಿಂದ ವರ್ತಿಸಿ ಟೀಕೆಗೆ ಗುರಿಯಾಗಿದ್ದ ಬಾಲಕ ಇಷಿತ್ ಭಟ್ ಕೊನೆಗೂ ಕ್ಷಮೆ ಕೋರಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಟ್ರೋಲ್‌ಗೆ ಒಳಗಾದ ನಂತರ, ಆತಂಕದಿಂದ ತನ್ನ ವರ್ತನೆ ತಪ್ಪಾಯಿತು ಎಂದಿದ್ದಾನೆ.

ಅಮಿತಾಭ್ ಜೊತೆ ಅಧಿಕಪ್ರಸಂಗ
ಕೌನ್ ಬನೇಗಾ ಕರೋರ್‌ಪತಿಯಲ್ಲಿ (Kaun Banega Crorepati) ಅಮಿತಾಭ್ ಬಚ್ಚನ್ ಜೊತೆ ಅಧಿಕಪ್ರಸಂಗತನದ ವರ್ತನೆ ತೋರಿ, ನಟನಿಗೆ ಏಕವಚನದಲ್ಲಿ ಮಾತನಾಡಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ನಿಂದನೆಗೆ ಒಳಗಾಗಿದ್ದ ಬಾಲಕ ಇಷಿತ್ ಭಟ್ (Ishit Bhatt) ಇದೀಗ ಕ್ಷಮೆ ಕೋರಿದ್ದಾನೆ.
ಪೇಚಿಗೆ ಸಿಲುಕಿರೋ ಬಾಲಕ
ಈತನಿಗಿಂತಲೂ ಮುಖ್ಯವಾಗಿ ಈತನ ಈ ವರ್ತನೆಗೆ ಕಾರಣವಾಗಿರುವ ಆತನ ಅಪ್ಪ-ಅಮ್ಮನ ವಿರುದ್ಧ ಭಾರಿ ಟೀಕೆಗಳು ಕೇಳಿಬರುತ್ತಿವೆ. ಈ ಷೋನಲ್ಲಿ ಆತ ಅತಿಯಾಗಿ ವರ್ತಿಸುತ್ತಿದ್ದರೂ, ಅಪ್ಪ-ಅಮ್ಮ ಅದೊಂದು ರೀತಿಯಲ್ಲಿ ಜೋಕ್ ಎನ್ನುವಂತೆ ನಗುತ್ತಿದ್ದರು. ಈ ನಗುವನ್ನು ನೋಡಿ ಬಾಲಕ ಇನ್ನೂ ಏರಿ ಹೋಗಿದ್ದ. ಆದ್ದರಿಂದ ತಾನು ಅತಿ ಬುದ್ಧಿವಂತನಂತೆ ವರ್ತಿಸುತ್ತಾ ಕೊನೆಗೆ ಪೇಚಿಗೆ ಸಿಲುಕಿದ್ದ.
ಪಾಲಕರ ಬಗ್ಗೆ ಅಸಮಾಧಾನ
ಈ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುತ್ತಲೇ ಇದೆ. ಇಂಥ ವರ್ತನೆ ಹೆಚ್ಚಾಗಿ ಒಂದೇ ಮಗುವಿದ್ದು, ಆತ ಅಥವಾ ಆಕೆಯನ್ನು ಅತಿ ಮುದ್ದಿನಿಂದ ಬೆಳೆಸುವುದು, ಆತ ಹೇಳಿದಂತೆ ಕೇಳುವುದು, ಅತಿಯಾಗಿ ವರ್ತಿಸಿದಾಗ ಹೆತ್ತವರಿಗೆ ಹೆಗ್ಗಣವೂ ಮುದ್ದು ಎನ್ನುವಂತೆ ಅದಕ್ಕೆ ಉತ್ತೇಜನ ನೀಡುವುದು, ಇಂಥ ಮಕ್ಕಳು ಬುದ್ಧಿವಂತರೆಂದು ತಿಳಿದು ಬೇರೆಯವರ ಮಕ್ಕಳು ತಮ್ಮ ಮಕ್ಕಳನ್ನು ಇಂಥ ಮಕ್ಕಳ ಜೊತೆ ಹೋಲಿಕೆ ಮಾಡಿ ಇನ್ನಷ್ಟು ಪ್ರೋತ್ಸಾಹ ಕೊಡುವುದು…. ಹೀಗೆ ನಾನಾ ಕಾರಣಗಳಿಂದ ಮಕ್ಕಳು ಇಂಥ ಹುಚ್ಚಾಟ ಮಾಡುವುದು ಮಾಮೂಲು ಎನ್ನಲಾಗುತ್ತಿದೆ.
ವಾರದ ಬಳಿಕ ಕ್ಷಮೆ
ಇವೆಲ್ಲ ಟ್ರೋಲ್ಗಳ ನಡುವೆಯೇ ಕೊನೆಗೂ ಬಾಲಕ ಎಲ್ಲರ ಕ್ಷಮೆ ಕೋರಿದ್ದಾನೆ. ಜೊತೆಗೆ ತಾನು ಹೀಗೆ ದುರ್ವರ್ತನೆ ತೋರಲು ಕಾರಣವನ್ನೂ ನೀಡಿದ್ದಾನೆ. ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಷಯವಾಗಿ ಬಾಲಕ ಬರೆದುಕೊಂಡಿದ್ದಾನೆ.
ಕ್ಷಮೆ ಕೋರಿದ ಬಾಲಕ
“ಎಲ್ಲರಿಗೂ ನಮಸ್ಕಾರ, ಕೌನ್ ಬನೇಗಾ ಕರೋಡ್ ಪತಿಯಲ್ಲಿ ನನ್ನ ವರ್ತನೆಗೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ನಾನು ಮಾತನಾಡಿದ ರೀತಿಯಿಂದ ಅನೇಕ ಜನರಿಗೆ ನೋವಾಗಿದೆ ಮತ್ತು ಹಲವರು ಕೋಪಗೊಂಡಿದ್ದಾರೆ ಎಂದು ನನಗೆ ತಿಳಿದಿದೆ, ಅದಕ್ಕಾಗಿ ವಿಷಾದಿಸುತ್ತೇನೆ ಎಂದಿದ್ದಾನೆ ಬಾಲಕ.
ಕಾರಣ ಹೇಳಿದ ಇಷಿತ್
ತಾನು ಹೀಗೆ ಮಾಡಲು ಕಾರಣ ಹೇಳಿರೋ ಬಾಲಕ, ಆ ಕ್ಷಣದಲ್ಲಿ, ನಾನು ಆತಂಕಗೊಂಡೆ, ಅದಕ್ಕಾಗಿ ಏನು ಮಾಡಬೇಕು ಎನ್ನುವುದು ತಿಳಿಯಲಿಲ್ಲ. ಆದರೆ ಈ ಆತಂಕದಿಂದ ನನ್ನ ವರ್ತನೆ ಸಂಪೂರ್ಣವಾಗಿ ತಪ್ಪಾಯಿತು. ಅಸಭ್ಯವಾಗಿ ವರ್ತಿಸುವುದು ನನ್ನ ಉದ್ದೇಶವಾಗಿರಲಿಲ್ಲ. ನಾನು ಅಮಿತಾಭ್ ಬಚ್ಚನ್, ಸರ್ ಮತ್ತು ಇಡೀ KBC ತಂಡವನ್ನು ಆಳವಾಗಿ ಗೌರವಿಸುತ್ತೇನೆ ಎಂದು ಹೇಳಿದ್ದಾನೆ.
ಪಾಠ ಕಲಿತೆ
ನಾವು ನುಡಿಯುವ ಪದಗಳು ಮತ್ತು ಕಾರ್ಯಗಳು ನಾವು ಯಾರೆಂದು, ವಿಶೇಷವಾಗಿ ಇಷ್ಟು ದೊಡ್ಡ ವೇದಿಕೆಯಲ್ಲಿ ಹೇಗೆ ಪ್ರತಿಬಿಂಬಿಸುತ್ತವೆ ಎಂಬುದರ ಕುರಿತು ನಾನು ದೊಡ್ಡ ಪಾಠವನ್ನು ಕಲಿತಿದ್ದೇನೆ. ಭವಿಷ್ಯದಲ್ಲಿ ಹೆಚ್ಚು ವಿನಮ್ರ, ಗೌರವಾನ್ವಿತ ಮತ್ತು ಚಿಂತನಶೀಲನಾಗಿರುತ್ತೇನೆ ಎಂದು ನಾನು ಭರವಸೆ ನೀಡುತ್ತೇನೆ ಎಂದಿದ್ದಾನೆ ಬಾಲಕ.