ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ಪಿಡಿಒ ಅಮಾನತಿಗೆ ‘ಕೆಎಟಿ’ ತಡೆ; ‘ರಾಜಕೀಯ ಪ್ರೇರಿತ’ ಎಂದು ಆದೇಶ

ಬೆಂಗಳೂರು/ರಾಯಚೂರು: ಆರ್‌ಎಸ್‌ಎಸ್ (RSS) ಪಥಸಂಚಲನದಲ್ಲಿ ಭಾಗಿಯಾಗಿದ್ದಕ್ಕೆ ಲಿಂಗಸೂಗೂರು (Lingasuguru) ಪಿಡಿಒ ಅಮಾನತು ಮಾಡಿದ್ದ ಸರ್ಕಾರದ ಆದೇಶಕ್ಕೆ ಕೆಎಟಿ (KAT) ತಡೆ ನೀಡಿದೆ.

ಲಿಂಗಸುಗೂರು ತಾಲೂಕಿನ ರೋಡಲಬಂಡಾ ಗ್ರಾಮದ ಪಿಡಿಒ ಪ್ರವೀಣ್ ಕುಮಾರ್ ಅವರನ್ನು ಅಮಾನತು ಮಾಡಿ ಸರ್ಕಾರ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿದ ಪಿಡಿಒ ಕೆಎಟಿ ಮೊರೆ ಹೋಗಿದ್ದರು. ಕರ್ನಾಟಕ ಆಡಳಿತ ನ್ಯಾಯಮಂಡಳಿಯು ಅಮಾನತು ಮಾಡಿದ್ದ ಸರ್ಕಾರದ ಆದೇಶವನ್ನು ವಜಾಗೊಳಿಸಿ, ರಾಜಕೀಯ ಪ್ರೇರಿತರಾಗಿ ಅಮಾನತು ಮಾಡಲಾಗಿದೆ ಎಂದು ಆದೇಶ ಹೊರಡಿಸಿದೆ.
ಇದೇ ಅ.12 ರಂದು ಲಿಂಗಸುಗೂರು ಪಟ್ಟಣದಲ್ಲಿ ಆರ್‌ಎಸ್‌ಎಸ್ ಶತಮಾನೋತ್ಸವದ ಹಿನ್ನೆಲೆ ಪಥಸಂಚಲನ ಕಾರ್ಯಕ್ರಮ ನಡೆದಿತ್ತು. ಈ ಪಥಸಂಚಲನದಲ್ಲಿ ಕೈಯಲ್ಲಿ ದಂಡ ಹಿಡಿದುಕೊಂಡು ಗಣವೇಷ ಧರಿಸಿ ಪ್ರವೀಣ್ ಭಾಗವಹಿಸಿದ್ದರು.
ಕರ್ನಾಟಕ ಸಿವಿಲ್ ಸೇವಾ ನಿಯಮಗಳ ಉಲ್ಲಂಘನೆ ಹಾಗೂ ಸರ್ಕಾರಿ ನೌಕರನ ತರವಲ್ಲದ ರೀತಿ ನಡೆದುಕೊಂಡಿದ್ದಕ್ಕೆ ಅಮಾನತು ಮಾಡಿ, ಪಂಚಾಯತ್ ರಾಜ್ ಇಲಾಖೆ ಆಯುಕ್ತೆ ಡಾ.ಅರುಂಧತಿ ಅವರು ಆದೇಶಿಸಿದ್ದರು.