ಕಾಶ್ಮೀರ ನಮ್ಮ ರಕ್ತನಾಳ: ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ವಿವಾದಾತ್ಮಕ ಹೇಳಿಕೆ

ಪಾಕಿಸ್ತಾನ : ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್, ಜಮ್ಮು ಕಾಶ್ಮೀರವನ್ನು ಇಸ್ಲಾಮಾಬಾದ್‌ನ ರಕ್ತನಾಳ ಎಂದು ಕರೆದಿದ್ದಾರೆ. ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಸಮರ್ಥಿಸಿಕೊಂಡ ಅವರು, ಪಾಕಿಸ್ತಾನ ಕಾಶ್ಮೀರವನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ. ನವದೆಹಲಿ: ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಮತ್ತೆ ಕಾಶ್ಮೀರದ ಬಗ್ಗೆ ಮಾತನಾಡಿದ್ದು, ಇದಕ್ಕೆ ಶೀಘ್ರದಲ್ಲೇ ಭಾರತ ಸರಿಯಾದ ತಿರುಗೇಟು ನೀಡಲಿದೆ. ಹಾಗಿದ್ರೆ ಮುನೀರ್ ಜಮ್ಮು ಕಾಶ್ಮೀರದ ಬಗ್ಗೆ ಹೇಳಿದ್ದೇನು? ಜಮ್ಮು ಕಾಶ್ಮೀರವೂ ಇಸ್ಲಮಾಬಾದ್‌ನ ರಕ್ತನಾಳ(jugular vein) ಇದ್ದಂತೆ ಹಾಗೂ ಮುಂದೆಯೂ ಅದು ಹಾಗೆಯೇ ಇರುತ್ತದೆ ಹಾಗೂ ಪಾಕಿಸ್ತಾನ ಅದನ್ನು ಯಾವತ್ತೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ. 1947 ರ ಭಾರತ ವಿಭಜನೆಗೆ ಆಧಾರವಾಗಿದ್ದ ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಅವರು ಇದೇ ವೇಳೆ ಸಮರ್ಥಿಸಿಕೊಂಡಿದ್ದಾರೆ.
ವಿದೇಶಗಳಲ್ಲಿ ನೆಲೆಸಿರುವ ಪಾಕಿಸ್ತಾನಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಪಾಕ್ ಸೇನಾ ಮುಖ್ಯಸ್ಥ, ವಿದೇಶದಲ್ಲಿರುವವರು ದೇಶದ ರಾಯಭಾರಿಗಳು ಮತ್ತು ಅವರು ಉನ್ನತ ಸಿದ್ಧಾಂತ ಮತ್ತು ಸಂಸ್ಕೃತಿಗೆ ಸೇರಿದವರು ಎಂಬುದನ್ನು ಮರೆಯಬಾರದು ಎಂದು ಹೇಳಿದರು. ನೀವು ಖಂಡಿತವಾಗಿಯೂ ನಿಮ್ಮ ಮಕ್ಕಳಿಗೆ ಪಾಕಿಸ್ತಾನದ ಕಥೆಯನ್ನು ಹೇಳಬೇಕು. ನಮ್ಮ ಪೂರ್ವಜರು ಜೀವನದ ಪ್ರತಿಯೊಂದು ಅಂಶದಲ್ಲೂ ನಾವು ಹಿಂದೂಗಳಿಗಿಂತ ಭಿನ್ನರು ಎಂದು ಭಾವಿಸಿದ್ದರು. ನಮ್ಮ ಧರ್ಮಗಳು, ನಮ್ಮ ಪದ್ಧತಿಗಳು, ಸಂಪ್ರದಾಯಗಳು, ಆಲೋಚನೆಗಳು ಮತ್ತು ಮಹತ್ವಾಕಾಂಕ್ಷೆಗಳು ವಿಭಿನ್ನವಾಗಿವೆ. ಅದು ಎರಡು ರಾಷ್ಟ್ರಗಳ ಸಿದ್ಧಾಂತದ ಅಡಿಪಾಯವಾಗಿತ್ತು ಎಂದು ಪಾಕಿಸ್ತಾನ ಸೇನಾ ಅಸಿಮ್ ಮುನೀರ್ ಸಭೆಯಲ್ಲಿ ಹೇಳಿದ್ದಾರೆ. ಸ್ವಾತಂತ್ರ್ಯಕ್ಕೂ ಮುಂಚಿನ ವರ್ಷಗಳಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ರಾಜ್ಯವನ್ನು ಕೋರುವ ಚಳುವಳಿಗೆ ಎರಡು ರಾಷ್ಟ್ರಗಳ ಸಿದ್ಧಾಂತವು ಆಧಾರವಾಗಿತ್ತು. ಈ ಚಳುವಳಿಯ ನೇತೃತ್ವವನ್ನು ಪಾಕಿಸ್ತಾನದ ಮೊದಲ ಗವರ್ನರ್ ಜನರಲ್ ಆದ ಮುಹಮ್ಮದ್ ಅಲಿ ಜಿನ್ನಾ ವಹಿಸಿದ್ದರು. ಆದರೆ ಮುನೀರ್ ಹೇಳಿದ ಎರಡು ರಾಷ್ಟ್ರಗಳ ಸಿದ್ಧಾಂತವು ಭಾರತ ಮತ್ತು ಪಾಕಿಸ್ತಾನ ಹಂಚಿಕೊಳ್ಳುವ ಸಾಮಾನ್ಯ ಇತಿಹಾಸ ಮತ್ತು ಪರಂಪರೆಯ ಕಲ್ಪನೆಗೆ ವಿರುದ್ಧವಾಗಿದೆ ಮತ್ತು ಜಾತ್ಯತೀತತೆಯ ತತ್ವಗಳಿಗೆ ವಿರುದ್ಧವಾಗಿದೆ.

ಭಾರತ ಪಾಕಿಸ್ತಾನ ಒಂದೇ ರಾಷ್ಟ್ರವಲ್ಲ
ತಮ್ಮ ಮಾತನ್ನು ಮುಂದುವರಿಸುತ್ತಾ ಜನರಲ್ ಮುನೀರ್, ಭಾರತ ಮತ್ತು ಪಾಕಿಸ್ತಾನ ಎರಡು ರಾಷ್ಟ್ರಗಳು, ನಾವು ಒಂದೇ ರಾಷ್ಟ್ರವಲ್ಲ. ಅದಕ್ಕಾಗಿಯೇ ನಮ್ಮ ಪೂರ್ವಜರು ಈ ದೇಶವನ್ನು ರಚಿಸಲು ಹೋರಾಡಿದರು. ನಮ್ಮ ಪೂರ್ವಜರು ಮತ್ತು ನಾವು ಈ ದೇಶದ ನಿರ್ಮಾಣಕ್ಕೆ ಸಾಕಷ್ಟು ತ್ಯಾಗ ಮಾಡಿದ್ದಾರೆ. ಅದನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂದು ನಮಗೆ ತಿಳಿದಿದೆ. ನನ್ನ ಪ್ರೀತಿಯ ಸಹೋದರರೇ, ಸಹೋದರಿಯರೇ, ಹೆಣ್ಣುಮಕ್ಕಳೇ ಮತ್ತು ಪುತ್ರರೇ, ದಯವಿಟ್ಟು ಪಾಕಿಸ್ತಾನದ ಈ ಕಥೆಯನ್ನು ಮರೆಯಬೇಡಿ. ಪಾಕಿಸ್ತಾನದೊಂದಿಗಿನ ಅವರ ಬಾಂಧವ್ಯ ಎಂದಿಗೂ ದುರ್ಬಲವಾಗದಂತೆ ಈ ಕಥೆಯನ್ನು ನಿಮ್ಮ ಮುಂದಿನ ಪೀಳಿಗೆಗೆ ಹೇಳಲು ಮರೆಯಬೇಡಿ ಎಂದು ಅವರು ಹೇಳಿದ್ದಾರೆ. ಭಯೋತ್ಪಾದಕ ಚಟುವಟಿಕೆಯಿಂದಾಗಿ ಪಾಕಿಸ್ತಾನಕ್ಕೆ ಹೂಡಿಕೆ ಸಿಗುವುದಿಲ್ಲ ಎಂದು ಹಲವರು ಭಯಪಡುತ್ತಾರೆ. ಭಯೋತ್ಪಾದಕರು ದೇಶದ ಭವಿಷ್ಯವನ್ನು ಕಸಿದುಕೊಳ್ಳಬಹುದು ಎಂದು ನೀವು ಭಾವಿಸುತ್ತೀರಾ? 1.3 ಮಿಲಿಯನ್ ಬಲಶಾಲಿ ಭಾರತೀಯ ಸೇನೆಯೇ ತನ್ನ ಎಲ್ಲಾ ಸಶಸ್ತ್ರ ಬಲದೊಂದಿಗೆ, ನಮ್ಮನ್ನು ಬೆದರಿಸಲು ಸಾಧ್ಯವಾಗದಿದ್ದರೆ, ಈ ಭಯೋತ್ಪಾದಕರು ಪಾಕಿಸ್ತಾನದ ಸಶಸ್ತ್ರ ಪಡೆಗಳನ್ನು ನಿಗ್ರಹಿಸಬಹುದು ಎಂದು ನೀವು ಭಾವಿಸುತ್ತೀರಾ? ಎಂದು ಅವರು ಪ್ರಶ್ನಿಸುವ ಮೂಲಕ ಭಾರತವನ್ನು ಕೆರಳಿಸುವ ಪ್ರಯತ್ನ ಮಾಡಿದ್ದಾರೆ.
ತನ್ನ ದೇಶದ ಒಂದು ಭಾಗವೇ ಆಗಿರುವ ಬಲೂಚಿಸ್ತಾನದಲ್ಲಿನ ಪ್ರತ್ಯೇಕತಾವಾದಿ ಚಳುವಳಿಗಳನ್ನೇ ಪಾಕಿಸ್ತಾನ ನಿಭಾಯಿಸಲು ಹೆಣಗಾಡುತ್ತಿರುವ ಈ ಸಂದರ್ಭದಲ್ಲೇ ಪಾಕಿಸ್ತಾನ ಸೇನಾ ಮುಖ್ಯಸ್ಥರು ಈ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಬಲೂಚಿಸ್ತಾನದಲ್ಲಿ ಪ್ರತ್ಯೇಕತವಾದಿಗಳ ಮೇಲೆ ಸಶಸ್ತ್ರ ಪಡೆಗಳು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಬಲೂಚಿಸ್ತಾನ್ ಪಾಕಿಸ್ತಾನದ ಹೆಮ್ಮೆ, ನೀವು ಅದನ್ನು ಅಷ್ಟು ಸುಲಭವಾಗಿ ಕಸಿದುಕೊಳ್ಳುತ್ತೀರಾ? ನಿಮ್ಮ 10 ತಲೆಮಾರುಗಳು ಬಂದರೂ ಅದನ್ನು ಪಡೆಯಲು ನಿಮ್ಮಿಂದ ಸಾಧ್ಯವಾಗದು. ಇನ್ಶಾ ಅಲ್ಲಾಹ್, ನಾವು ಈ ಭಯೋತ್ಪಾದಕರನ್ನು ಬಹಳ ಬೇಗ ಸೋಲಿಸುತ್ತೇವೆ. ಪಾಕಿಸ್ತಾನ ಹಿಂದೆ ಬೀಳುವುದಿಲ್ಲ ಎಂದೆಲ್ಲಾ ಮುನೀರ್ ಮಾತನಾಡಿದ್ದಾರೆ.
ಕಾಶ್ಮೀರ ನಮ್ಮ ಕತ್ತಿನ ರಕ್ತನಾಳ
ಇದೇ ವೇಳೆ ಕಾಶ್ಮೀರದ ಬಗ್ಗೆ ಮಾತನಾಡಿದ ಜನರಲ್ ಮುನೀರ್, ನಮ್ಮ ನಿಲುವು ಸಂಪೂರ್ಣವಾಗಿ ಸ್ಪಷ್ಟವಾಗಿದೆ, ಅದು ನಮ್ಮ ಕುತ್ತಿಗೆಯ ರಕ್ತನಾಳವಾಗಿತ್ತು, ಅದು ನಮ್ಮ ಕುತ್ತಿಗೆಯ ರಕ್ತನಾಳವಾಗಿರುತ್ತದೆ, ನಾವು ಅದನ್ನು ಮರೆಯುವುದಿಲ್ಲ. ನಾವು ನಮ್ಮ ಕಾಶ್ಮೀರಿ ಸಹೋದರರನ್ನು ಅವರ ವೀರೋಚಿತ ಹೋರಾಟದಲ್ಲಿ ಬಿಡುವುದಿಲ್ಲ ಕೈಬಿಡುವುದಿಲ್ಲ ಎಂದು ಮುನೀರ್ ಹೇಳಿದ್ದು, ಕಾಶ್ಮೀರಿ ಪ್ರತ್ಯೇಕತವಾದಿಗಳನ್ನು ಭಾರತದತ್ತ ಎತ್ತಿಕಟ್ಟುವ ಎಲ್ಲಾ ಪ್ರಯತ್ನಗಳು ಅವರ ಮಾತಿನಲ್ಲಿ ಎದ್ದು ಕಂಡಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ವಿದೇಶಾಂಗ ಸಚಿವಾಲಯ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.