ಅಖಂಡ ಕರ್ನಾಟಕ ಬಂದ್: ರಾಜ್ಯವೇ ನಿಶ್ಶಬ್ದ, ರಾಜಧಾನಿ ಸಂಪೂರ್ಣ ಸ್ಥಗಿತ

ಬೆಂಗಳೂರು : ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ಮರಾಠಿ ಪುಂಡರ ಹಲ್ಲೆ ಪ್ರಕರಣ ಸಂಬಂಧ ಶುರುವಾದ ಸಮರ ಈಗ ಅಖಂಡ ಕರ್ನಾಟಕ ಬಂದ್‌ವರೆಗೆ ಬಂದಿದೆ. ಕರ್ನಾಟಕದಲ್ಲಿ ಎಂಇಎಸ್ ನಿಷೇಧ, ಮೇಕೆದಾಟು, ಕಳಸಬಂಡೂರಿ ಯೋಜನೆಗೆ ಶೀಘ್ರ ಅನುಮತಿ ಸೇರಿದಂತೆ ನಾಡು-ನುಡಿ, ನೆಲ-ಜಲ ವಿಷಯವಾಗಿ ಕನ್ನಡ ಒಕ್ಕೂಟಗಳು ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ಇಂದು 10 ಗಂಟೆಯ ಸುಮಾರಿಗೆ ಬೆಂಗಳೂರಿನ ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್ವರೆಗೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಬೃಹತ್ ಮೆರವಣಿಗೆ ಹಮ್ಮಿಕೊಂಡಿವೆ. ಬೆಳಗಾವಿ, ಮಂಡ್ಯ, ರಾಮನಗರದಲ್ಲಿ ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ರಾಜ್ಯ ಮುಷ್ಕರಕ್ಕೆ ಸಂಪೂರ್ಣ ಬೆಂಬಲ ಸಿಕ್ಕಿದೆ. ಅದರಂತೆ ಬೆಂಗಳೂರಿನ ಅತ್ತಿಬೆಲೆ ಗಡಿ ಗೋಪುರದ ಬಳಿ ಹೆದ್ದಾರಿ ತಡೆದು ಕನ್ನಡ ಜಾಗೃತಿ ವೇದಿಕೆ ಪ್ರತಿಭಟನೆ ನಡೆಸುತ್ತಿದೆ. ಕರ್ನಾಟಕ ಬಂದ್ ಬೆಂಬಲಿಸಿ ರಾಜ್ಯಾಧ್ಯಕ್ಷ ಮಂಜುನಾಥ್ ದೇವ ನೇತೃತ್ವದಲ್ಲಿ ಪ್ರತಿಭಟನೆ ಕೈಗೊಳ್ಳಲಾಗಿದೆ. ತಮಿಳುನಾಡು ವಾಹನಗಳನ್ನು ತಡೆದು ರಸ್ತೆಯಲ್ಲಿ ಟೈರ್ಗೆ ಬೆಂಕಿ ಹಚ್ಚಲು ಪ್ರತಿಭಟನಾಕಾರರು ಮುಂದಾಗಿದ್ದು, ಈ ವೇಳೆ ಹಲವರನ್ನು ಅತ್ತಿಬೆಲೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ನಗರದ ಪ್ರಮುಖ ಭಾಗಗಳಲ್ಲಿ ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗೃತ ಕ್ರಮವನ್ನು ತೆಗೆದುಕೊಂಡಿದ್ದಾರೆ. ಸದ್ಯ ಇಡೀ ಬೆಂಗಳೂರೇ ಸೈಲೆಂಟ್ ಆಗಿದೆ. ರಸ್ತೆಗಳೆಲ್ಲಾ ಬಿಕೋ ಎನ್ನತ್ತಿದ್ದು, ಯಾವುದೇ ಆಟೋಗಳು ರಸ್ತೆಗೆ ಇಳಿದಿಲ್ಲ. ಓಲಾ, ಊಬರ್ ಕಾರುಗಳು ಯಾವುದೂ ಓಡಾಡ್ತಿಲ್ಲ. ಈ ಮೂಲಕ ರಾಜಧಾನಿ ಬೆಂಗಳೂರು ಟೋಟಲ್ ಬಂದ್ ಆಗಿ ಬಿಟ್ಟಿದೆ. ನಗರದಲ್ಲಿ ಅಲ್ಲೊಂದು ಇಲ್ಲೊಂದು ವಾಹನ ಬಿಟ್ರೆ ರಸ್ತೆಗಳು ಫುಲ್ ಖಾಲಿ ಖಾಲಿಯಾಗಿವೆ.

