ಕರ್ನಾಟಕದ ಐಜಿಪಿ ಸಂದೀಪ್ ಪಾಟೀಲ್ ಅವರಿಂದ ಅಸಾಮಾನ್ಯ ಸಾಧನೆ: ಐರನ್‌ಮ್ಯಾನ್ ಟ್ರಯಥ್ಲಾನ್ ಪೂರ್ಣ

ಬೆಂಗಳೂರು: ಕರ್ನಾಟಕ (Karnataka) ರಾಜ್ಯ ಮೀಸಲು ಪೊಲೀಸ್ ಇಲಾಖೆಯ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಸಂದೀಪ್ ಪಾಟೀಲ್ (IGP Sandeep Patil), ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ನಡೆದ ಐರನ್‌ಮ್ಯಾನ್ ಟ್ರಯಥ್ಲಾನ್ (Ironman Triathlon) ಪೂರ್ಣಗೊಳಿಸಿದ್ದಾರೆ.

ಆ ಮೂಲಕ ಕರ್ನಾಟಕ ಪೊಲೀಸ್ ಇಲಾಖೆಯ ಖ್ಯಾತಿಯನ್ನು ವಿಶ್ವ ಮಟ್ಟದಲ್ಲಿ ಪಸರಿಸಿದ್ದಾರೆ.
ಡೆನ್ಮಾರ್ಕ್‌ನ ಕೋಪನ್ ಹ್ಯಾಗನ್ನಲ್ಲಿ ನಡೆದ ವಿಶ್ವ ಟ್ರಯಥ್ಲಾನ್ ಕಾರ್ಪೊರೇಷನ್ (ಡಬ್ಲ್ಯೂಟಿಸಿ) ನಡೆಸಿದ ಜಾಗತಿಕ ಸವಾಲಿನಲ್ಲಿ ಸ್ಪರ್ಧಿಸಿದ ಕರ್ನಾಟಕ ಕೇಡರ್ನ ಏಕೈಕ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್ ಆಗಿದ್ದಾರೆ.
ಹೇಗಿರುತ್ತದೆ ಈ ಸ್ಪರ್ಧೆ?: ಸಮುದ್ರದಲ್ಲಿ ಬರೋಬ್ಬರಿ 3.8 ಕಿಲೋ ಮೀಟರ್ ಈಜಬೇಕು. 180 ಕಿಲೋ ಮೀಟರ್ ಸೈಕಲ್ ತುಳಿದು, 14 ಗಂಟೆ 45 ನಿಮಿಷಗಳಲ್ಲಿ 42 ಕಿಲೋ ಮೀಟರ್ ಓಡಬೇಕು.
ಏನಂದ್ರು ಸಂದೀಪ್ ಪಾಟೀಲ್?: ನಾನು ಒಂದೂವರೆ ವರ್ಷಗಳ ಹಿಂದೆ ಟ್ರಯಥ್ಲಾನ್‌ಗಾಗಿ ತರಬೇತಿಯನ್ನು ಪ್ರಾರಂಭಿಸಿದೆ. ಆದರೆ ಈ ವರ್ಷದ ಜನವರಿಯಲ್ಲಿ ಟ್ರಯಥ್ಲಾನ್‌ಗೆ ನೋಂದಾಯಿಸಿದ ಬಳಿಕ ಆರು ತಿಂಗಳ ಹಿಂದೆ ಕಟ್ಟುನಿಟ್ಟಿನ ಆಹಾರ ಪದ್ಧತಿ ಅನುಸರಿಸಿದೆ ಎಂದು ಸಂದೀಪ್ ಪಾಟೀಲ್ ಹೇಳಿದ್ದಾರೆ.
ಐರನ್‌ಮ್ಯಾನ್‌ನಲ್ಲಿ ಅರ್ಹತೆ ಪಡೆಯಲು ಮತ್ತು ಸ್ಪರ್ಧಿಸಲು ಅದನ್ನು ಸಾಧಿಸುವ ದೃಢಸಂಕಲ್ಪದ ಜೊತೆಗೆ ಹೆಚ್ಚಿನ ಮಟ್ಟದ ಶಿಸ್ತು ಮತ್ತು ತರಬೇತಿಯ ಅಗತ್ಯವಿದೆ. ಮೂರು ವಿಭಾಗಗಳಲ್ಲಿ ಸ್ಪರ್ಧಿಸುವುದು ಒಂದು ಸವಾಲಾಗಿತ್ತು, ವಿಶೇಷವಾಗಿ ನನ್ನ ಹಿಂದಿನ ಈಜು ಅನುಭವವು 300 ಮೀಟರ್ ಆಗಿತ್ತು. ಅಲ್ಲಿಂದ 3.8 ಕಿಲೋ ಮೀಟರ್ ಈಜುವುದನ್ನು ಕಲಿಯುವುದು, ಅದು ಕೂಡ ಸಮುದ್ರದಲ್ಲಿ ಒಂದು ದೊಡ್ಡ ಸವಾಲಾಗಿತ್ತು. ನಾನು ಹೆಚ್ಚು ಉತ್ತಮವಾಗಿ ಮತ್ತು ದಾಖಲೆ ಸಮಯದಲ್ಲಿ ಈಜಲು ನನ್ನನ್ನು ಪ್ರೇರೇಪಿಸಿಕೊಂಡೆ ಎಂದಿದ್ದಾರೆ.
ಸುರೇಶ್ ಕುಮಾರ್ ಅಭಿನಂದನೆ: ಇನ್ನೂ ಇವರ ಈ ಸಾಧನೆಗೆ ಮಾಜಿ ಸಚಿವ ಹಾಗೂ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ. ನಮ್ಮ ರಾಜ್ಯಕ್ಕೆ ಹೆಮ್ಮೆ ತರುವ ಸಾಧನೆ ಮಾಡಿರುವ ಸಂದೀಪ್ ಪಾಟೀಲ್‌ರಿಗೆ ನಾನು ಖುದ್ದಾಗಿ ಫೋನ್ ಮೂಲಕ ಅಭಿನಂದನೆ ಸಲ್ಲಿಸಿದ್ದೇನೆ.
ಸಮುದ್ರದಲ್ಲಿ 3.8 ಕಿಲೋ ಮೀಟರ್ ಈಜು ಹೊಡೆದ ನಂತರ, ತಕ್ಷಣವೇ 180 ಕಿಲೋಮೀಟರ್ ದೂರ ಸೈಕಲ್ ತುಳಿದು, ನಂತರ ತಕ್ಷಣವೇ 42 ಕಿಲೋ ಮೀಟರ್ ದೂರ ಓಡಿ ಇವೆಲ್ಲವನ್ನೂ ಕೇವಲ 14 ಗಂಟೆ 45 ನಿಮಿಷಗಳಲ್ಲಿ ಪೂರೈಸಿದ್ದಾರೆ. ಇದಕ್ಕಾಗಿ ಕಳೆದ ಜನವರಿ ತಿಂಗಳಿಂದ ಮಾಡಿರುವ ನಿರಂತರತೆ ಅವರು ಕಾಪಾಡಿಕೊಂಡಿರುವ ಶಾರೀರಿಕ ಶಿಸ್ತು ಎಲ್ಲಾ ವಿವರಗಳು ನಿಜಕ್ಕೂ ಶ್ಲಾಘನೀಯ.
ಸಂದೀಪ್ ಪಾಟೀಲ್‌ರ ಈ ಕಾರ್ಯ ಯುವ ಜನಾಂಗಕ್ಕೆ ಒಂದು ಪ್ರೇರಣೆ ನೀಡುವಂತಹದ್ದು, ಮತ್ತೊಮ್ಮೆ ಪೊಲೀಸ್ ಇಲಾಖೆಗೆ, ರಾಜ್ಯಕ್ಕೆ ಹೆಮ್ಮೆ ತರುವಂತಹ ಸಾಧನೆ ಮಾಡಿರುವ ಸಂದೀಪ್ ಪಾಟೀಲ್ರಿಗೆ ಅಭಿನಂದನೆಗಳು ಎಂದು ಶಾಸಕ ಸುರೇಶ್ ಕುಮಾರ್ ಫೇಸ್ಬುಕ್ನಲ್ಲಿ ಬರೆದಿದ್ದಾರೆ.