ಕರ್ನಾಟಕ ಸರ್ಕಾರಿ ಶಾಲೆಗಳಿಗೆ ಹಾಲಿನ ಪುಡಿ ದುರ್ಬಳಕೆಗೆ ಬೇಸತ್ತ ಸರ್ಕಾರ ಹೊಸ ನಿರ್ಧಾರ

ಬೆಂಗಳೂರು:ಕರ್ನಾಟಕದ ಸರ್ಕಾರಿ ಶಾಲೆಯ (Karnataka Govt School) ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ವೊಂದು ಸಿಕ್ಕಿದೆ. ಇನ್ಮುಂದೆ ಹಾಲು ಪುಡಿ (Milk Powder) ಕೊಡುವುದನ್ನು ಸರ್ಕಾರ ನಿಲ್ಲಿಸಲು ಚಿಂತನೆ ನಡೆಸಿದ್ದು, ಇದರ ಬದಲಿಗೆ ಸುವಾಸನೆ ಭರಿತ ಹಾಲು ನೀಡಲು ಬೆಂಗಳೂರು ಹಾಲು ಒಕ್ಕೂಟ (bangalore Milk union) ಪ್ಲಾನ್ ಮಾಡಿದೆ.

ಇಷ್ಟು ವರ್ಷಗಳ ಕಾಲ ಸರ್ಕಾರಿ ಶಾಲೆಗಳಿಗೆ ಹಾಲಿನ ಪುಡಿಗಳನ್ನು ಕಳುಹಿಸಿ ಕೊಡಲಾಗುತ್ತಿತ್ತು. ಅವುಗಳನ್ನು ಆಯಾ ಶಾಲೆಯಲ್ಲಿ ಹಾಲಾಗಿ ಮಾಡಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿತ್ತು. ಆದರೆ ಕೆಲ ಕಡೆ ಇವುಗಳಲ್ಲಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿತ್ತು.
ಇದೀಗ ಸರ್ಕಾರಿ ಶಾಲೆಗಳಿಗೆ ಪುಡಿ ಹಾಲಿನ ಬದಲಿಗೆ ಹಾಲನ್ನೇ ನೀಡಲು ಪ್ಲಾನ್ ಮಾಡಿದ್ದು, ಅದರಂತೆ ಮೊದಲು ಪ್ರಾಯೋಗಿಕವಾಗಿ ಬೆಂಗಳೂರು ಹಾಲು ಒಕ್ಕೂಟದ ವ್ಯಾಪ್ತಿಯ ಬೆಂಗಳೂರು ದಕ್ಷಿಣ (ರಾಮನಗರ), ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ವಿತರಿಸಲು ನಿರ್ಧರಿಸಿದೆ.
ಆರಂಭದಲ್ಲಿ ಕೇವಲ ಬೆಂಗಳೂರಿನಲ್ಲಿ ಮಾತ್ರ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಲಾಗುವುದು.. ಒಂದು ವೇಳೆ ಈ ಯೋಜನೆ ಯಶಸ್ವಿಯಾದರೆ ರಾಜ್ಯವ್ಯಾಪಿ ಈ ಯೋಜನೆಯನ್ನು ವಿಸ್ತರಿಸುವ ಚಿಂತನೆಯನ್ನು ಸರ್ಕಾರ ಮಾಡಿದೆ.
ಇನ್ನು ಈ ಯೋಜನೆಯ ಬಗ್ಗೆ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಹಾಲು ಒಕ್ಕೂಟ ಅಧ್ಯಕ್ಷ ಡಿಕೆ ಸುರೇಶ್ ಮಾತುಕತೆ ನಡೆಸಿದ್ದು, ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವುದು ಎನ್ನಲಾಗಿದೆ.
ಸದ್ಯ ಈ ಮೂರು ಜಿಲ್ಲೆಗಳಿಗೆ ಸುಮಾರು 250 ಟನ್ ಹಾಲಿನ ಪುಡಿಗಳನ್ನು ರವಾನೆ ಮಾಡಲಾಗುತ್ತಿದೆ. ಬಳಿಕ ಶಾಲೆಗಳಲ್ಲಿ ಶಿಕ್ಷಕರು ಅಥವಾ ಸಿಬ್ಬಂದಿಗಳು ಈ ಪುಡಿಯನ್ನು ನೀರಿನಲ್ಲಿ ಬೆರೆಸಿ ಅದನ್ನು ಕುದಿಸಿ ಮಕ್ಕಳಿಗೆ ತಲಾ 250 ಗ್ರಾಂ ಹಾಲು ಮಾಡಿಕೊಡಬೇಕಿದೆ.
ಈ ಹಿಂದೆ ಅನೇಕ ಕಡೆ ಹಾಲಿನ ಪುಡಿಗಳು ಮಕ್ಕಳಿಗೆ ಸರಿಯಾದ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ ಎಂಬ ಗಂಭೀರ ಆರೋಪವಿದೆ. ಅಷ್ಟೇ ಅಲ್ಲದೆ ಕೆಲವೆಡೆ ಹಾಲಿನ ಪುಡಿಗಳನ್ನು ಕದ್ದು ಹೋಟೆಲ್ ಗಳಿಗೆ, ಅಂಗಡಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿ ಬರುತ್ತಲೆ ಇದೆ.
ಇದೀಗ ಈ ಎಲ್ಲದಕ್ಕೂ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದ್ದು, ಅದರಂತೆ ಇನ್ಮುಂದೆ ಸರ್ಕಾರಿ ಶಾಲೆಗಳಿಗೆ ಹಾಲನ್ನು ಪಿಸ್ತಾ, ಬಾದಾಮ್, ಮಾವು, ಕಿತ್ತಳೆ, ಬಾಳೆಹಣ್ಣು ಸೇರಿ ಒಟ್ಟು 10 ಬಗೆಯ ಸುವಾಸನೆ ಭರಿತ ಹಾಲನ್ನು ಸಿದ್ದಪಡಿಸಿ ಮಕ್ಕಳಿಗೆ ನೀಡಲು ಪ್ಲಾನ್ ಮಾಡಿದೆ.
ಈಗಾಗಲೇ ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಈ ಯೋಜನೆಯನ್ನು ಆರಂಭಿಸಿ ಉತ್ತಮ ಪಲಿತಾಂಶ ಬಂದಿದೆ. ಅದರಂತೆ ರಾಜ್ಯ ಸರ್ಕಾರ ಕೂಡ ಇದನ್ನು ಜಾರಿಗೆ ತರಲು ಮುಂದಾಗಿದೆ.
ಇನ್ನು ರಾಜ್ಯದಲ್ಲಿ ಈಗಾಗಲೇ ತೃಪ್ತಿ ಹೆಸರಲ್ಲಿ ಒಂದು ಲೀಟರ್ ಪ್ಯಾಕ್ ನಲ್ಲಿ ಸುವಾಸನೆ ಭರಿತ ಹಾಲನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಇದೇ ಹಾಲನ್ನು ಶಾಲಾ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಪ್ಯಾಕ್ ಮಾಡಿ ಪೂರೈಕೆ ಮಾಡಲು ಚಿಂತನೆ ನಡೆಸಲಾಗಿದೆ. ಒಂದು ವೇಳೆ ಇದು ಜಾರಿಗೆ ಬಂದರೆ ಹಾಲಿನ ಪುಡಿ ನೀಡುತ್ತಿರುವ ಹಣದಲ್ಲಿಯೇ ಈ ಯೋಜನೆಯನ್ನು ಮುಂದುವರೆಯಬಹುದಾಗಿ ಎಂದು ಹೇಳಲಾಗಿದೆ.
