ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್‌ನಿಂದ ₹2 ಲಕ್ಷ ದಂಡ: ಅಂಗವಿಕಲ ಈಜು ಚಾಂಪಿಯನ್ ಮನೋಸ್ಥೈರ್ಯ ಕುಗ್ಗಿಸಿದ ಅಧಿಕಾರಿಗಳಿಗೆ ತರಾಟೆ!

ಬೆಂಗಳೂರು : ಎರಡೂ ಕೈಗಳಿಲ್ಲದೆ ಅಂತರರಾಷ್ಟ್ರೀಯ ಪ್ಯಾರಾ-ಈಜು ಸ್ಪರ್ಧೆಯಲ್ಲಿ ಯಶಸ್ಸು ಸಾಧಿಸಿದ ವಿಶ್ವಾಸ್ ಕೆ ಎಸ್ ಅವರ ಮನೋಭಾವವನ್ನು ರಾಜ್ಯವು ಗೌರವಿಸಬೇಕಿತ್ತು. ಆದರೆ, ರಾಜ್ಯ ಸರ್ಕಾರ ಅವ ಮನೋಸ್ಥೈರ್ಯವನ್ನೇ ಕುಗ್ಗಿಸುವ ಕೆಲಸ ಮಾಡಿದೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

ಚಾಂಪಿಯನ್ ಈಜುಗಾರನಿಗೆ ಅರ್ಹವಾಗಿ ಸಿಗಬೇಕಿದ್ದ ನಗದು ಪುರಸ್ಕಾರವನ್ನು ನೀಡಲು ವಿಳಂಬ ಮಾಡಿದ್ದಕ್ಕಾಗಿ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ 2 ಲಕ್ಷ ರೂಪಾಯಿ ದಂಡವನ್ನು ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಅಧಿಕಾರಿಗಳ ಸಂಬಳದಿಂದ ಪಾವತಿ ಮಾಡುವಂತೆ ಸೂಚನೆ ನೀಡಿದೆ.
“ಎರಡು ಕೈಗಳೇ ಇಲ್ಲದ ವ್ಯಕ್ತಿಯೊಬ್ಬರು ಈಜುಕೊಳಕ್ಕೆ ಧುಮುಕಿ ಕೇವಲ ವಿಜಯಶಾಲಿಯಾಗಿ ಹೊರಹೊಮ್ಮದೆ, ಅಂತರರಾಷ್ಟ್ರೀಯ ವೇದಿಕೆಯಲ್ಲಿ ಚಾಂಪಿಯನ್‌ಆಗಿ ಹೊರಹೊಮ್ಮಿದಾಗ, ರಾಜ್ಯವು ಆ ಮನೋಭಾವಕ್ಕೆ ನಮಸ್ಕರಿಸಬೇಕೆಂದು ನಿರೀಕ್ಷಿಸಲಾಗುತ್ತದೆ, ನಿಮ್ಮ ರಿಬ್ಬನ್ ಕತ್ತರಿಸುವ ಸಂಸ್ಕೃತಿಯಿಂದ ಅವರಿಗೆ ಅರ್ಹವಾಗಿ ಸಿಗಬೇಕಾಗಿರೋದನ್ನ ಹತ್ತಿಕ್ಕಬಾರದು” ಎಂದು ಹೈಕೋರ್ಟ್ ಹೇಳಿದೆ.
2017 ಮತ್ತು 2023 ರಲ್ಲಿ ಪ್ರಾತಿನಿಧ್ಯಗಳನ್ನು ಸಲ್ಲಿಸಿದರೂ, ಅವರಿಗೆ ಯಾವುದೇ ಮೊತ್ತವನ್ನು ನೀಡಲಾಗಿಲ್ಲ. ಅವರು 2023 ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ನೋಟಿಸ್ ನೀಡಿದ ನಂತರ 4.74 ಲಕ್ಷ ರೂ.ಗಳನ್ನು ಪಾವತಿ ಮಾಡಲಾಗಿತ್ತು.
ಪದಕಗಳನ್ನು ಗೆದ್ದಿದ್ದಕ್ಕಾಗಿ ನೀಡಲಾದ 6 ಲಕ್ಷ ರೂ.ಗಳಲ್ಲಿ 1.26 ಲಕ್ಷ ರೂ.ಗಳನ್ನು ಬಿಡುಗಡೆ ಮಾಡದಿದ್ದಕ್ಕಾಗಿ ನ್ಯಾಯಾಲಯದ ಮೊರೆ ಹೋದ ವಿಶ್ವಾಸ್‌ಗೆ ಮೊಕದ್ದಮೆ ವೆಚ್ಚವಾಗಿ 2 ಲಕ್ಷ ರೂ.ಗಳನ್ನು ಪಾವತಿಸಬೇಕೆಂದು ಹೇಳಿದ ನ್ಯಾಯಾಲಯ, ಅವರಿಗೆ 1.26 ಲಕ್ಷ ರೂ.ಗಳ ಪಾವತಿಯನ್ನು ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ಎರಡು ವಾರಗಳಲ್ಲಿ ಮೊತ್ತವನ್ನು ಪಾವತಿಸದಿದ್ದರೆ, ಅರ್ಜಿದಾರರು ಪ್ರತಿ ದಿನದ ವಿಳಂಬಕ್ಕೆ 1,000 ರೂ.ಗಳಂತೆ ಅದು ಅವರಿಗೆ ತಲುಪುವವರೆಗೆ ವೆಚ್ಚವನ್ನು ಭರಿಸಲು ಅರ್ಹರಾಗಿರುತ್ತಾರೆ.
“ಅಧಿಕಾರಶಾಹಿ ತಾಂತ್ರಿಕತೆಗಳ ಮೇಲೆ ಗಮನವಿರಬಾರದು, ಬದಲಾಗಿ ಪ್ರತಿಕೂಲಗಳ ವಿರುದ್ಧ ಜಯಗಳಿಸಿದ ಮಾನವ ಚೈತನ್ಯದ ಮೇಲೆ ಗಮನವಿರಬೇಕೆಂದು ನಾವು ಭಾವಿಸುತ್ತೇವೆ. ಸರ್ಕಾರದ ಕರ್ತವ್ಯ ಕೇವಲ ಆಡಳಿತಾತ್ಮಕವಲ್ಲ; ಅದು ನೈತಿಕ, ಸಾಂವಿಧಾನಿಕ ಮತ್ತು ಮಾನವೀಯವಾಗಿರಬೇಕು” ಎಂದು ಆದೇಶ ಹೊರಡಿಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಹೇಳಿದರು.
ಇದು ರಾಜ್ಯದ ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಾರೆ ಎನ್ನುವುದರ ಪ್ರತಿಬಿಂಬವಾಗಿದೆ, ವಿಶೇಷವಾಗಿ ಅಂಗವಿಕಲ ವ್ಯಕ್ತಿಯ ಕಡೆಗೆ ಇಂತಹ ನಿರ್ದಯ ಉದಾಸೀನತೆಯು ತಿದ್ದುಪಡಿಯನ್ನು ಮಾತ್ರವಲ್ಲ, ಖಂಡನೆಯನ್ನೂ ಬಯಸುತ್ತದೆ. ಕ್ರೀಡೆ ಮತ್ತು ಎಲ್ಲರನ್ನೂ ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಬಗ್ಗೆ ಹೆಮ್ಮೆಪಡುವ ರಾಜ್ಯವು ಹಠಮಾರಿತನ ಮತ್ತು ಕ್ಷುಲ್ಲಕತೆಯಿಂದ ಪ್ರೇರಿತವಾಗಿ ದಾವೆ ಹೂಡುವವನಂತೆ ವರ್ತಿಸಲು ಸಾಧ್ಯವಿಲ್ಲ. ರಾಜ್ಯವು ಕೆಲವೇ ಕ್ರೀಡೆಗಳನ್ನು ಮುದ್ದಿಸಿ ಇತರ ಕ್ರೀಡಾಪಟುಗಳನ್ನು ಅತಂತ್ರ ಸ್ಥಿತಿಯಲ್ಲಿ ಬಿಡುವುದು ದುರದೃಷ್ಟಕರ” ಎಂದು ನ್ಯಾಯಾಲಯ ಗಮನಿಸಿದೆ.