ಕಾರ್ಕಳ ಯುವಕನ ಆತ್ಮಹತ್ಯೆ: ಪ್ರೇಯಸಿ ಮತ್ತು ತಂಡದಿಂದ ಹನಿಟ್ರ್ಯಾಪ್, ಬ್ಲಾಕ್‌ಮೇಲ್‌ಗೆ ರೋಸಿ ಹೋಗಿ ನೇಣಿಗೆ ಶರಣು; 7 ಪುಟಗಳ ಡೆತ್ ನೋಟ್‌ನಲ್ಲಿ ಸ್ಫೋಟಕ ಮಾಹಿತಿ

ಉಡುಪಿ: ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಯುವಕ ಅಭಿಶೇಕ್ ಇತ್ತೀಚೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಖಾಸಗಿ ಲಾಡ್ಜ್ ಒಂದರಲ್ಲಿ ಈತನ ಶವ ಪತ್ತೆಯಾಗಿತ್ತು. ಆದ್ರೆ, ಇದೀಗ ಶವದ ಜೊತೆ ಸಿಕ್ಕಿರುವ ಏಳು ಪುಟಗಳ ಡೆತ್ ನೋಟ್ ಹಲವು ಸಂಶಯಗಳನ್ನು ಹುಟ್ಟು ಹಾಕಿದೆ. ತಾನು ಪ್ರೀತಿಸುತ್ತಿದ್ದ ಹುಡುಗಿ ಮೊದಲು ತನ್ನನ್ನು ಪ್ರೇಮಿಸುವಂತೆ ನಾಟಕವಾಡಿ ನಂತರ ತನ್ನ ಅಶ್ಲೀಲ ಫೋಟೋಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿದ್ದಾಳೆ. ಈಕೆ ಮತ್ತು ಈಕೆಯ ತಂಡ, ತನ್ನಿಂದ 4 ಲಕ್ಷ ರೂಪಾಯಿಗೂ ಅಧಿಕ ಹಣ ಪಡೆದು ಇನ್ನಷ್ಟು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಇದರಿಂದ ರೋಸಿ ಹೋಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟಿನಲ್ಲಿ ಉಲ್ಲೇಖಿಸಿದ್ದಾನೆ.

ತಾನು ಪ್ರೀತಿಸಿದ ಹುಡುಗಿ ನಿರೀಕ್ಷಾ, ಆಕೆ ತಂಡದಲ್ಲಿದ್ದ ಮಂಗಳೂರು ಮೂಲದ ರಾಕೇಶ್ ,ರಾಹುಲ್ ಹಾಗೂ ತಸ್ಲೀಮ್ ಸಾವಿಗೆ ಕಾರಣ ಎಂದು ಬರೆದಿದ್ದಾನೆ. ಇವರು ತಂಡವಾಗಿ ಅನೇಕ ಜನರನ್ನು ಅಶ್ಲೀಲ ಫೋಟೋ ಬಳಸಿ ವಂಚಿಸಿದ್ದಾರೆ ಅಂತಲೂ ಆರೋಪಿಸಿದ್ದಾನೆ.
ಐಟಿಐ ಮಾಡಿಕೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆ ಒಂದರಲ್ಲಿ ಮೆಡಿಕಲ್ ಸಲಕರಣೆಗಳ ಸರ್ವಿಸಿಂಗ್ ಕೆಲಸ ಮಾಡುತ್ತಿದ್ದ ಅಭಿಷೇಕ್, ಈ ರೀತಿ ಸಂಚಿಗೆ ಬಲಿಯಾಗಿರುವುದು ಮನೆಯವರಿಗೆ ಆತಂಕ ಮಾಡಿಸಿದೆ. ಈತ ಪ್ರೀತಿಸುವ ಹುಡುಗಿ ನಿರೀಕ್ಷಾ ಕೂಡ ಮಂಗಳೂರಿನ ಅದೇ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದಾರೆ. ಆದರೆ ಯಾವ ಸಂಗತಿಗಳು ಕೂಡ ಮನೆಯವರಿಗಾಗಲಿ ಆತನ ರೂಮ್ ಮೇಟ್ ಗಳಾಗಿದ್ದ ಸಹೋದರ ಸಂಬಂಧಗಳಿಗಾಗಲಿ ಗೊತ್ತಿಲ್ಲ. ಆದ್ರೆ, ಡೆತ್ ನೋಟ್ ಬರೆದು ಸಾವನ್ನಪ್ಪಿರುವುದು ತಲ್ಲಣ ಮೂಡಿಸಿದೆ. ಇದೀಗ ಅಭಿಷೇಕ್ ಕುಟುಂಬದ ನೆರವಿಗೆ ವಿಶ್ವಕರ್ಮ ಸಂಘಟನೆಗಳು ಬಂದಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿವೆ.
ಇನ್ನೊಂದಡೆ ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿಯೇ ಪರಿಗಣಿಸಿದೆ. ಈತ ಆರೋಪಿಸಿರುವ ವ್ಯಕ್ತಿಗಳನ್ನು ಕರೆಸಿ ವಿಚಾರಣೆ ನಡೆಸಿದೆ. ಮೇಲ್ನೋಟಕ್ಕೆ ತನಿಖೆಯಿಂದಾಗಲಿ ಅವರ ಮೊಬೈಲ್ ದಾಖಲೆಗಳಿಂದಾಗಲಿ ಯಾವುದೇ ಸುಳಿವು ಸಿಕ್ಕಿಲ್ಲ. ಡೆತ್ ನೋಟಿನಲ್ಲಿ ಆರೋಪ ಮಾಡಿರುವ ಅಂಶಗಳಿಗೆ ಪೂರಕವಾದ ಯಾವುದೇ ಪುರಾವೆ ದೊರಕಿಲ್ಲ. ಪ್ರೇಮ ವೈಫಲ್ಯದಿಂದ ಅಭಿಷೇಕ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವುದು ಪೊಲೀಸ್ ಇಲಾಖೆಗೆ ಇರುವ ಗುಮಾನಿ. ಇಷ್ಟಾದರೂ ಆರೋಪಿತ ವ್ಯಕ್ತಿಗಳ ಮೊಬೈಲನ್ನು ರಿಟ್ರೈ ಮಾಡಲು ಪೊಲೀಸರು ಕಳುಹಿಸಿದ್ದಾರೆ. ಹನಿಟ್ರ್ಯಾಪ್ ನಂತಹ ಗಂಭೀರ ಆರೋಪ ಬಂದಿರುವ ಹಿನ್ನೆಲೆಯಲ್ಲಿ ತನಿಖೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ಬಡ ಯುವಕನೊಬ್ಬ ಹನಿಟ್ರ್ಯಾಪಿಗೆ ಬಲಿಯಾಗಿದ್ದಾನೆ ಎನ್ನುವ ಸಂಗತಿ ಆತಂಕಕ್ಕೀಡು ಮಾಡಿದ್ದು, ತಾಂತ್ರಿಕ ದಾಖಲೆಗಳ ಮೂಲಕ ಪೊಲೀಸರು ಈ ಪ್ರಕರಣವನ್ನು ಭೇದಿಸಬೇಕಿದೆ.