ಭಾರೀ ಮಳೆಗೆ ಜಲಾವೃತಗೊಂಡ ಕಂಠೀರವ ಕ್ರೀಡಾಂಗಣ: ಕ್ರೀಡಾ ಸಾಮಗ್ರಿ ಹಾನಿ, ಅಭ್ಯಾಸಕ್ಕೂ ಅಡಚಣೆ

ಬೆಂಗಳೂರು: ಕೆಲ ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಕಂಠೀರವ ಕ್ರೀಡಾಂಗಣ ಜಲಾವೃತಗೊಂಡಿದೆ. ಹೊರಾಂಗಣ, ಒಳಾಂಗಣ, ಕೆಲ ಕಚೇರಿಗಳಿಗೆ ನೀರು ನುಗ್ಗಿದ್ದು, ಕ್ರೀಡಾ ಸಾಮಾಗ್ರಿಗಳಿಗೆ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ. ಇದರಿಂದ ಕ್ರೀಡಾಪಟುಗಳ ಅಭ್ಯಾಸಕ್ಕೂ ಅಡಚಣೆ ಉಂಟಾಯಿತು.
ಸೋಮವಾರ ಬೆಳಗ್ಗೆ ಕ್ರೀಡಾಂಗಣದ ಹೊರಭಾಗ, ಹೊರಾಂಗಣದಲ್ಲಿರುವ ಫುಟ್ಬಾಲ್ ಮೈದಾನ, ಅಥ್ಲೆಟಿಕ್ಸ್ ಟ್ರ್ಯಾಕ್, ಜಿಮ್ನಾಸ್ಟಿಕ್ ಕೋರ್ಟ್ ಸೇರಿದಂತೆ ಬಹುತೇಕ ಕಡೆಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ನಿಂತಿತ್ತು. ಕ್ರೀಡಾಂಗಣದ ಹಲವು ಗೇಟ್‌ಗಳ ಭಾಗದಲ್ಲೂ ನೀರು ತುಂಬಿತ್ತು. ಇದರಿಂದ ಕ್ರೀಡಾಪಟುಗಳು ಕ್ರೀಡಾಂಗಣ ಪ್ರವೇಶಿಸಲೂ ಪರದಾಡಿದರು. ಮಳೆ ನೀರಿನ ನಡುವೆಯೇ ಕೆಲ ಅಥ್ಲೀಟ್‌ಗಳು ಅಭ್ಯಾಸ ನಡೆಸಿದರು.
ಇನ್ನು, ಒಳಾಂಗಣ ಕ್ರೀಡಾಂಗಣದ ಸುತ್ತಲೂ ನೀರು ತುಂಬಿದ್ದು, ಒಳ ಪ್ರವೇಶವೂ ಸಾಧ್ಯವಿರಲಿಲ್ಲ. ಕ್ರೀಡಾಂಗಣದ ಬಾಗಿಲು ಬಹುತೇಕ ಮುಳುಗಡೆಯಾಗಿದ್ದು, ಒಳ ಭಾಗದಲ್ಲಿದ್ದ ಸಾಮಾಗ್ರಿಗಳಿಗೆ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ.
ಕಚೇರಿಗೆ ನೀರು: ಕ್ರೀಡಾಂಗಣದಲ್ಲಿರುವ ಅಥ್ಲೆಟಿಕ್ಸ್ ಸಂಸ್ಥೆಯ ಕಚೇರಿಗೂ ನೀರು ನುಗ್ಗಿತು. ಬ್ಯಾಡ್ಮಿಂಟನ್, ಚೆಸ್ ಸೇರಿ ಹಲವು ಸಂಸ್ಥೆಗಳ ಕಚೇರಿಗಳಲ್ಲೂ ನೀರು ನಿಂತಿದ್ದು, ಕಡತಗಳಿಗೆ ಹಾನಿ ಉಂಟಾಗಿದೆ ಎಂದು ತಿಳಿದುಬಂದಿದೆ.
ಅವ್ಯವಸ್ಥೆ ಬಗ್ಗೆ ಭಾರಿ ಆಕ್ರೋಶ
ಕ್ರೀಡಾಂಗಣವನ್ನು ಕೋಟ್ಯಂತರ ರು. ಖರ್ಚು ಮಾಡಿ ನಿರ್ಮಿಸಲಾಗಿದೆ. ಆದರೆ ಮಳೆ ಬಂದರೆ ಪ್ರತಿ ಬಾರಿಯೂ ಕ್ರೀಡಾಂಗಣಕ್ಕೆ ನೀರು ನುಗ್ಗಿ ತೊಂದರೆಯಾಗುತ್ತದೆ. ಈ ಬಾರಿ ಕ್ರೀಡಾಂಗಣ ಕೆರೆಯಂತಾಗಿದ್ದು, ಕ್ರೀಡಾಪಟುಗಳು, ಕೋಚ್‌ಗಳು ಭಾರಿ ಆಕ್ರೋಶ ವ್ಯಕ್ತಪಡಿಸಿದರು. ಕ್ರೀಡಾಂಗಣದ ಬಹುತೇಕ ಎಲ್ಲಾ ಕಡೆಗಳಲ್ಲೂ ನೀರು ತುಂಬಿದ್ದರಿಂದ ಅಥ್ಲೀಟ್‌ಗಳ ಸಾಮಾಗ್ರಿಗಳಿಗೂ ಹಾನಿಯುಂಟಾಗಿದೆ.
ಮೋಟಾರ್ ಪಂಪ್ ಬಳಸಿ ನೀರು ಹೊರಕ್ಕೆ
ಕ್ರೀಡಾಂಗಣಕ್ಕೆ ನೀರು ನುಗ್ಗಿದ್ದರಿಂದ ಕ್ರೀಡಾ ಇಲಾಖೆ ಆಯುಕ್ತ ಚೇತನ್ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಬಳಿಕ ಮೋಟಾರ್ ಪಂಪ್ ಬಳಸಿ ಒಳಾಂಗಣ ಕ್ರೀಡಾಂಗಣದಲ್ಲಿದ್ದ ನೀರನ್ನು ಹೊರ ಹಾಕಲಾಯಿತು. ಆದರೆ ಭಾರೀ ಪ್ರಮಾಣದಲ್ಲಿ ನೀರು ತುಂಬಿದ್ದರಿಂದ ಸಂಪೂರ್ಣವಾಗಿ ನೀರು ಖಾಲಿ ಮಾಡಲು ಸಿಬ್ಬಂದಿ ಹರಸಾಹಸಪಟ್ಟರು.
ಭಾರತ ವೀಸಾ ಬಗ್ಗೆ ಗ್ಯಾರಂಟಿ ನೀಡಿ: ಏಷ್ಯಾ ಹಾಕಿಗೆ ಪಾಕ್ ಬೇಡಿಕೆ
ಕರಾಚಿ: ಆ.27ರಿಂದ ಸೆ.7ರ ವರೆಗೂ ಬಿಹಾರದ ರಾಜ್‌ಗಿರ್‌ನಲ್ಲಿ ನಡೆಯಲಿರುವ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಪಾಲ್ಗೊಳ್ಳಲು ತನ್ನ ಆಟಗಾರರು, ಸಿಬ್ಬಂದಿಗೆ ಭಾರತ ವೀಸಾ ವಿತರಿಸುವ ಬಗ್ಗೆ ಗ್ಯಾರಂಟಿ ಕೊಡುವಂತೆ ಪಾಕಿಸ್ತಾನ ಹಾಕಿ ಫೆಡರೇಶನ್ (ಪಿಎಚ್‌ಎಫ್), ಏಷ್ಯನ್ ಹಾಕಿ ಫಡರೇಶನ್ (ಎಎಚ್‌ಎಫ್)ಗೆ ಬೇಡಿಕೆ ಸಲ್ಲಿಸಿದೆ. ಮುಂದಿನ ವರ್ಷದ ವಿಶ್ವಕಪ್‌ಗೆ ಏಷ್ಯಾಕಪ್ ಅರ್ಹತಾ ಟೂರ್ನಿಯಾಗಿರುವ ಕಾರಣ, ತಾನು ಅವಕಾಶ ಕಳೆದುಕೊಳ್ಳಲು ಇಚ್ಛಿಸುವುದಿಲ್ಲ ಎಂದಿರುವ ಪಿಎಚ್‌ಎಫ್, ಭಾರತದ ವೀಸಾ ಕೊಡಿಸಿ ಇಲ್ಲವೇ ಟೂರ್ನಿಯನ್ನು ಭಾರತದಿಂದ ಸ್ಥಳಾಂತರಿಸಿ ಎಂದು ಒತ್ತಾಯಿಸಿರುವುದಾಗಿ ತಿಳಿದುಬಂದಿದೆ.