ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಯಾಯಿತು; ದಂತಕಥೆ ಅನಾವರಣ!

‘ಕಾಂತಾರ’ ಸಿನಿಮಾ ರಿಲೀಸ್ ಆಗಿದ್ದು 2022ರ ಸೆಪ್ಟೆಂಬರ್ 30ರಂದು. ಈಗ ಈ ಚಿತ್ರಕ್ಕೆ ಸರಿಯಾಗಿ ಮೂರು ವರ್ಷಕ್ಕೆ ಪ್ರೀಕ್ವೆಲ್ ತೆರೆಗೆ ಬರುತ್ತಿದೆ. ದಸರಾ ಪ್ರಯುಕ್ತ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2ರಂದು ತೆರೆಗೆ ಬರಲಿದೆ. ಇಷ್ಟು ದಿನ ಚಿತ್ರದ ಪೋಸ್ಟರ್ ಹಾಗೂ ಮೇಕಿಂಗ್ ವಿಡಿಯೋ ಮಾತ್ರ ರಿಲೀಸ್ ಆಗಿದ್ದವು. ಈಗ ಚಿತ್ರದ ಟ್ರೇಲರ್ ಬಿಡುಗಡೆ ಕಂಡಿದೆ. ದೃಶ್ಯ ವೈಭವವನ್ನು ರಿಷಬ್ ಶೆಟ್ಟಿ ಅವರು ಪ್ರೇಕ್ಷಕರ ಎದುರು ಇಟ್ಟಿದ್ದಾರೆ. ‘ಕಾಂತಾರ’ ಚಿತ್ರದ ಕಥೆ ಹಿಂದಿನ ವಿಚಾರವನ್ನು ರಿಷಬ್ ಹೇಳಿದ್ದಾರೆ.

ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ ಸಿನಿಮಾ ಹಿಟ್ ಆಗುತ್ತಿದ್ದಂತೆ, ‘ಕಾಂತಾರ’ ಚಿತ್ರಕ್ಕೆ ಪ್ರೀಕ್ವೆಲ್ ತರೋದಾಗಿ ರಿಷಬ್ ಘೋಷಿಸಿದರು. ಅದಾದ ಬಳಿಕ ರಿಷಬ್ ಸಂಪೂರ್ಣವಾಗಿ ಸ್ಕ್ರಿಪ್ಟ್ ಕೆಲಸಗಳಲ್ಲಿ ತೊಡಗಿಕೊಂಡರು. ಆ ಬಳಿಕ ಸಿನಿಮಾ ಶೂಟ್ನಲ್ಲಿ ಅವರು ಬ್ಯುಸಿ ಆದರು. ಹಲವು ಅದ್ಭುತ ಲೊಕೇಶನ್ಗಳಲ್ಲಿ ಸಿನಿಮಾದ ಶೂಟ್ ನಡೆದಿದೆ. ಚಿತ್ರಕ್ಕಾಗಿ ಅದ್ದೂರಿ ಸೆಟ್ಗಳನ್ನು ಕೂಡ ನಿರ್ಮಾಣ ಮಾಡಲಾಗಿದೆ. ಟ್ರೇಲರ್ನಲ್ಲಿ ಇದು ಎದ್ದು ಕಾಣಿಸಿದೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾದ ಟ್ರೇಲರ್ ಅದ್ದೂರಿಯಾಗಿ ಮೂಡಿ ಬಂದಿದೆ. ಹೊಂಬಾಳೆ ಫಿಲ್ಮ್ಸ್ ಸಿನಿಮಾ ಅದ್ದೂರಿತನಕ್ಕೆ ಯಾವುದೇ ಕೊರತೆ ಆಗದಂತೆ ನೋಡಿಕೊಂಡಿದ್ದಾರೆ. ರಿಷಬ್ ಅವರು ಮಾಡಿದ ಸ್ಟಂಟ್ಗಳು ಗಮನ ಸೆಳೆಯುವ ರೀತಿಯಲ್ಲಿ ಇದೆ. ಈ ಚಿತ್ರದ ಟ್ರೇಲರ್ ನೋಡಿದ ಬಳಿಕ ಸಿನಿಮಾದ ಮೈಲೇಜ್ ಹೆಚ್ಚಿದೆ. ಈ ಚಿತ್ರದಲ್ಲಿಯೂ ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡ್ ಮೊದಲಾದವರು ನಟಿಸಿದ್ದಾರೆ. ಕನ್ನಡದವರೇ ಆದ ಗುಲ್ಶನ್ ದೇವಯ್ಯ ರಾಜನ ಪಾತ್ರದಲ್ಲಿದ್ದಾರೆ.
‘ಕಾಂತಾರ’ ಸಿನಿಮಾದಲ್ಲಿ ದೈವದ ವೇಶ ಹಾಕುವ ವ್ಯಕ್ತಿ (ರಿಷಬ್ ಶೆಟ್ಟಿ) ಮಾಯ ಆಗುತ್ತಾನೆ. ಅದು ಕಾಡಿನ ಒಂದು ಜಾಗದಲ್ಲಿ. ಈ ಜಾಗದ ಬಗ್ಗೆ ಕೇಳಿದಾಗ ಅದರ ಇತಿಹಾಸ ಆರಂಭ ಆಗುತ್ತದೆ. ಇಲ್ಲಿ, ರಕ್ತದ ಇತಿಹಾಸದ ಇದೆ. ರಾಜ ಮನೆತನದ ಕಥೆ ಇದೆ. ಜನ ಸಾಮಾನ್ಯನಿಗೂ ರಾಜ ಮನೆತನಕ್ಕೂ ಮೂಡುವ ಪ್ರೀತಿ ಇದೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರೇ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರುಕ್ಮಿಣಿ ವಸಂತ್ ಚಿತ್ರಕ್ಕೆ ನಾಯಕಿ. ಈ ಸಿನಿಮಾದ ಹೊಂಬಾಳೆ ಫಿಲ್ಮ್ಸ್ ಅದ್ದೂರಿಯಾಗಿ ನಿರ್ಮಾಣ ಮಾಡಿದೆ. ಬಿ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕೆ ಇದೆ. ಅಕ್ಟೋಬರ್ 1ರಂದು ಸಿನಿಮಾಗೆ ಪ್ರೀಮಿಯರ್ ಶೋ ಆಯೋಜನೆ ಮಾಡುವ ಸಾಧ್ಯತೆ ಇದೆ.
