‘ಕಾಂತಾರ: ಚಾಪ್ಟರ್ 1’ ಇನ್ ಇಂಗ್ಲಿಷ್: ತುಳು ನೆಲದ ಕಥೆಯನ್ನು ವಿಶ್ವಕ್ಕೆ ಸಾಗಿಸಲು ಹೊಂಬಾಳೆ ಫಿಲ್ಮ್ಸ್ ಸಜ್ಜು; ಅಕ್ಟೋಬರ್ 31ಕ್ಕೆ ಇಂಗ್ಲಿಷ್ ವರ್ಷನ್ ರಿಲೀಸ್!

ದೇಶವ್ಯಾಪಿ ಅಬ್ಬರಿಸುತ್ತಿರುವ ಕಾಂತಾರ ಚಾಪ್ಟರ್ 1 ಚಿತ್ರ (Kantara Chapter 1) ಇದೀಗ ಒಂದು ಹೆಜ್ಜೆ ಮುಂದಿಟ್ಟಿದೆ. ಚಿತ್ರಕ್ಕೆ ಬಹು ಬೇಡಿಕೆ ಇರುವ ಕಾರಣ ಇಂಗ್ಲಿಷ್ ವರ್ಷನ್ನಲ್ಲಿ ಕಾಂತಾರ ಚಿತ್ರವನ್ನ ಹೊಂಬಾಳೆ ಫಿಲಂಸ್ ತಯಾರು ಮಾಡಿದೆ.

ಈ ಮೂಲಕ ಚಂದನವನದ ಕೀರ್ತಿಯನ್ನು ವಿಶ್ವವ್ಯಾಪಿ ತಲುಪಿಸಲು ಹೊಂಬಾಳೆ ಫಿಲಂಸ್ ಸಜ್ಜಾಗಿದೆ. ಇದೇ ಅಕ್ಟೋಬರ್ 31ಕ್ಕೆ ಚಿತ್ರ ರಿಲೀಸ್ ಆಗಲಿದೆ. ಈ ವಿಚಾರವನ್ನ ಹೊಂಬಾಳೆ ಫಿಲಂಸ್ ಅಧಿಕೃತವಾಗಿ ಘೋಷಣೆ ಮಾಡಿದೆ. ಈ ಮೂಲಕ ತುಳು ನೆಲದ ಕತೆ, ಮನರಂಜನೆಯನ್ನು ವಿದೇಶಿಗರಿಗೂ ತಲುಪಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕಾಂತಾರ ಚಿತ್ರ ವಿಶ್ವದೆಲ್ಲೆಡೆ ಏಕಕಾಲದಲ್ಲಿ ಏಳು ಭಾಷೆಯಲ್ಲಿ ರಿಲೀಸ್ ಆಗಿತ್ತು. ಇಂಗ್ಲಿಷ್ ಸಬ್ಟೈಟಲ್ ಹೊಂದಿತ್ತು. ಆದರೀಗ ಇಂಗ್ಲಿಷ್ ಭಾಷೆಯಲ್ಲೇ ಡಬ್ ಆಗಿ ವಿಶ್ವದೆಲ್ಲೆಡೆ ರಿಲೀಸ್ ಆಗುತ್ತಿದೆ. ವಿಶೇಷವೆಂದರೆ ಮೂಲ ಚಿತ್ರ 148 ನಿಮಿಷಗಳ ಅವಧಿಯನ್ನ ಹೊಂದಿತ್ತು. ಇದೀಗ ಇಂಗ್ಲಿಷ್ ವರ್ಷನ್ 02 ಗಂಟೆ 14 ನಿಮಿಷ 45 ಸೆಕೆಂಡ್ ಅವಧಿಯನ್ನು ಹೊಂದಿದೆ. ಇದರಿಂದ ಸಿನಿಮಾದ ಕೆಲ ದೃಶ್ಯಕ್ಕೆ ಕತ್ತರಿ ಪ್ರಯೋಗವಾಗಿರುವುದು ಕಾಣುತ್ತಿದೆ.
ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಹೇಳಬೇಕಿದೆಯಷ್ಟೆ. ಒಟ್ಟಿನಲ್ಲಿ ಕಾಂತಾರ ಇಂಗ್ಲಿಷ್ನಲ್ಲೂ ಬರುತ್ತಿರುವುದು ಚಂದನವನಕ್ಕೆ ವಿಶ್ವಮಟ್ಟದಲ್ಲಿ ದೊಡ್ಡ ಮಟ್ಟದ ಮಾರ್ಕೇಟ್ ಓಪನ್ ಆಗೋದಕ್ಕೆ ದಾರಿ ಮಾಡಿ ಕೊಟ್ಟಂತಾಗಿದೆ.