ಕೆನಡಾದಲ್ಲಿ ಕನ್ನಡಿಗನ ಬಲಿ: ನೆಲಮಂಗಲ ಮೂಲದ ಚಂದನ್ ಕುಮಾರ್ ಗುಂಡೇಟಿಗೆ ಸಾ*ವು!

ನೆಲಮಂಗಲ: ಕೆನಡಾದಲ್ಲಿ ಕೆಲಸ ಮಾಡುತ್ತಿದ್ದ ನೆಲಮಂಗಲದ (Nelamangala) ವ್ಯಕ್ತಿಯ ಕಾರಿನ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ಆಸ್ಪತ್ರೆಗೆ ಕರೆದೊಯ್ದ ನಂತರ ವ್ಯಕ್ತಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ವ್ಯಕ್ತಿಯ ಸಾವಿನಿಂದ ಕರ್ನಾಟಕದಲ್ಲಿ ನೆಲೆಸಿರುವ ಆತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಏಕಾಏಕಿ ನಡೆದ ಗುಂಡಿನ ದಾಳಿಗೆ ನಿಖರವಾದ ಕಾರಣವೇನು ಎಂದು ಸದ್ಯಕ್ಕೆ ತಿಳಿದು ಬಂದಿಲ್ಲ.

ನಡೆದಿದ್ದೇನು?
ಮೃತ ವ್ಯಕ್ತಿ ಚಂದನ್ ಕುಮಾರ್ (37) ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ಗ್ರಾಮದ ಮೂಲದವರಾಗಿದ್ದು, ಕಳೆದ ಆರು ವರ್ಷಗಳಿಂದ ಕೆನಡಾದಲ್ಲಿ ನೆಲೆಸಿದ್ದು, ಎಲ್ ಅಂಡ್ ಟಿ (L&T) ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ನಿನ್ನೆ (ಫೆ.8) ಚಂದನ್ ಕೆನಡಾದ ವುಡ್ಬೈನ್ ಮಾಲ್ ಬಳಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಏಕಾಏಕಿ ದುಷ್ಕರ್ಮಿಗಳು ಗುಂಡಿನ ಸುರಿಮಳೆ ಸುರಿಸಿದ್ದಾರೆ. ಇದರಿಂದ ತೀವ್ರವಾಗಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಗುಂಡಿನ ದಾಳಿ ನೋಡಿದ ಸ್ಥಳೀಯ ಹೇಳಿದ್ದೇನು?
ಶೂಟೌಟ್ ನಡೆದ ಸಂದರ್ಭದಲ್ಲಿ ಅದನ್ನು ತನ್ನ ಕಣ್ಣಾರೆ ನೋಡಿದ ಸ್ಥಳೀಯರು ಗಾಬರಿಗೊಂಡಿದ್ದು, ತಾವು ನೋಡಿತ ಭೀಕರತೆಯನ್ನು ವಿವರಿಸಿದ್ದಾರೆ. ಮಾಲ್ ಹೊರಗೆ ತಮ್ಮ ಕಾರಿನಲ್ಲಿ ಕುಳಿತು ಮೊಬೈಲ್ನಲ್ಲಿ ಮಾತನಾಡುತ್ತಿದ್ದ ಓರ್ವ ವ್ಯಕ್ತಿಗೆ 5-6 ಬಾರಿ ಗುಂಡು ಹಾರಿಸಿದ ಶಬ್ಧ ಕೇಳಿತ್ತಂತೆ. ಈ ವೇಳೆ ಕಾರಿನ ಕನ್ನಡಿಯ ಮೂಲಕ ನೋಡಿದಾಗ ವ್ಯಕ್ತಿಯೊಬ್ಬ ಗನ್ ಹಿಡಿದು ನಿಂತಿದ್ದೂ ಕಾಣಿಸಿತೆಂದು ಕೆನಡಾದ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.
ಚಂದನ್ ಅಪ್ಪಟ ಕನ್ನಡಾಭಿಮಾನಿಯಾಗಿದ್ದ ಎಂದ ಆತನ ಸಂಬಂಧಿ
ಚಂದನ್ ತಂದೆ ನಂದಕುಮಾರ್ ಅವರು ನಿವೃತ್ತ ಶಿಕ್ಷಕರಾಗಿದ್ದು, ತಾಯಿ ಹಾಗೂ ಕುಟುಂಬದವರು ತ್ಯಾಮಗೊಂಡ್ಲು ಗ್ರಾಮದಲ್ಲೇ ವಾಸಿಸುತ್ತಿದ್ದಾರೆ. ಕೆನಡಾದಲ್ಲಿ ಘಟನೆ ನಡೆದ ತಕ್ಷಣ ಅಲ್ಲಿನ ಪೊಲೀಸರು ಚಂದನ್ ತಂದೆಯನ್ನು ಸಂಪರ್ಕಿಸಿದ್ದರು. ಆದರೆ ಭಾಷೆಯ ವಿಷಯವಾಗಿ ಅಡೆತಡೆಗಳು ಬಂದಾಗ, ಭಾರತೀಯರೊಬ್ಬರ ಮೂಲಕ ಮೃತರ ತಂದೆ-ತಾಯಿಗೆ ವಿಷಯ ರವಾನಿಸಲಾಗಿತ್ತು ಎಂದು ಸಂಬಂಧಿಯೊಬ್ಬರು ತಿಳಿಸಿದ್ದಾರೆ.
ಚಂದನ್ ತನ್ನ ಕೆಲಸದ ಜೊತೆಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ವಿದೇಶದಲ್ಲಿ ಹರಡುತ್ತಿದ್ದರು ಎಂದು ತಿಳಿದು ಬಂದಿದೆ. ಕೆಲಸವನ್ನರಸಿ ಕೆನಡಾಗೆ ಹೋದ ಭಾರತೀಯರಿಗೆ, ಅದರಲ್ಲಿಯೂ ಕನ್ನಡಿಗರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದರು. ಕನ್ನಡಿಗರಿಗಾಗಿ ಸಂಘಟನೆಗಳ ಮುಖಾಂತರ ಅಗತ್ಯ ಸೇವೆಗಳನ್ನೂ ಒದಗಿಸುತ್ತಿದ್ದರೆಂದು ಮೃತರ ಸಂಬಂಧಿಕರು ತಿಳಿಸಿದ್ದಾರೆ.