ಕಾಬೂಲ್‌ನಿಂದ ದೆಹಲಿಗೆ ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಅಡಗಿ ಬಂದ ಬಾಲಕ

ನವದೆಹಲಿ: ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಅಡಗಿ ಕುಳಿತು ಬಾಲಕನೊಬ್ಬ ಅಫ್ಗಾನಿಸ್ತಾನದ ಕಾಬೂಲ್‌ನಿಂದ ದೆಹಲಿಗೆ ಬಂದಿದ್ದಾನೆ. ಭಾನುವಾರ ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ಘಟನೆ ನಡೆದಿದೆ.ಎರಡು ಗಂಟೆಯ ಪ್ರಯಾಣದ ಬಳಿಕ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನ ಬಂದಿಳಿದಾಗ ಬಾಲಕ ಇರುವುದು ಗೊತ್ತಾಗಿದ್ದು, ಅದೇ ವಿಮಾನದಲ್ಲಿ ಆತನನ್ನು ವಾಪಸ್ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ವಿಮಾನ ಲ್ಯಾಂಡ್ ಆದ ಬಳಿಕ ಬಾಲಕನೊಬ್ಬ ವಿಮಾನದ ಸುತ್ತ ಓಡಾಡುತ್ತಿರುವುದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಕುಂದುಜ್ ನಗರದ ಮೂಲದವನಾದ ಬಾಲಕನನ್ನು ವಿಮಾನಯಾನ ಸಿಬ್ಬಂದಿ ಬಂಧಿಸಿ ಭದ್ರತಾ ಪಡೆ ಸಿಬ್ಬಂದಿಗೆ ಹಸ್ತಾಂತರಿಸಿದ್ದರು. ವಿಚಾರಣೆ ವೇಳೆ ‘ನಾನು ಕಾಬೂಲ್ ವಿಮಾನ ನಿಲ್ದಾಣಕ್ಕೆ ನುಸುಳಿದೆ. ನಂತರ ವಿಮಾನದ ಹಿಂಭಾಗದ ಲ್ಯಾಂಡಿಂಗ್ ಗೇರ್ ವಿಭಾಗದೊಳಗೆ ಪ್ರವೇಶಿಸಿದೆ. ಕುತೂಹಲದಿಂದ ಈ ರೀತಿ ಮಾಡಿದ್ದೇನೆ’ ಎಂದು ತಿಳಿಸಿದ್ದಾನೆ.
ವಿಮಾನದ ಲ್ಯಾಂಡಿಂಗ್ ಗೇರ್ ವಿಭಾಗವನ್ನು ತಪಾಸಣೆ ನಡೆಸಲಾಗಿದ್ದು, ವಿಮಾನ ಸುರಕ್ಷಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಅಫ್ಗಾನಿಸ್ತಾನಕ್ಕೆ ಮರು ಪ್ರಯಾಣಿಸಿದ ಅದೇ ವಿಮಾನದಲ್ಲಿ ಬಾಲಕನನ್ನು ಭದ್ರತಾ ಸಿಬ್ಬಂದಿ ವಾಪಸ್ ಕಳಿಸಿದ್ದಾರೆ.