‘ಕಾಂತಾರ: ಚಾಪ್ಟರ್ 1’ ಕ್ರೇಜ್: ಇಡೀ ಚಿತ್ರಮಂದಿರ ಬುಕ್ ಮಾಡಿದ ಸಂಸದ ಪ್ರತಾಪ್ ಸಿಂಹ

ಬಿಗ್ ಬಜೆಟ್ನಲ್ಲಿ ನಿರ್ಮಾಣ ಆಗಿರುವ ‘ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾ ಬಿಡುಗಡೆಯಾಗಿ ಸಖತ್ ಸದ್ದು ಮಾಡುತ್ತಿದೆ. ಮೊದಲ ದಿನವೇ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಬುಧವಾರ (ಅಕ್ಟೋಬರ್ 1) ರಾತ್ರಿ ನಡೆದ ಪ್ರೀಮಿಯರ್ ಶೋಗೆ ಜನರಿಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಗುರುವಾರ (ಅಕ್ಟೋಬರ್ 2) ಕೂಡ ಎಲ್ಲ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಂಡಿದೆ. ಈಗ ವೀಕೆಂಡ್ನಲ್ಲಿ ಕೂಡ ಸಿನಿಮಾ ಅಬ್ಬರಿಸಲಿದೆ. ಜನಸಾಮಾನ್ಯರು ಮಾತ್ರವಲ್ಲದೇ ರಾಜಕೀಯ ಕ್ಷೇತ್ರದವರು ಕೂಡ ‘ಕಾಂತಾರ: ಚಾಪ್ಟರ್ 1’ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ಪ್ರತಾಪ್ ಸಿಂಹ (Pratap Simha) ಅವರು ಸಿನಿಮಾ ನೋಡಲು ಇಡೀ ಚಿತ್ರಮಂದಿರದ ಟಿಕೆಟ್ ಬುಕ್ ಮಾಡಿದ್ದಾರೆ.

ಈ ಬಗ್ಗೆ ಪ್ರತಾಪ್ ಸಿಂಹ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ನಾಳೆ 4 ಗಂಟೆಗೆ ಕಾರ್ಯಕರ್ತರೆಲ್ಲ ಒಡಗೂಡಿ ಕಾಂತಾರ 2 ನೋಡೋಣ. DRCಯಲ್ಲಿ ಫುಲ್ ಸ್ಕ್ರೀನ್ ಬುಕ್ ಮಾಡಿದ್ದೇನೆ’ ಎಂದು ಪ್ರತಾಪ್ ಸಿಂಹ ಅವರು ಟ್ವೀಟ್ ಮಾಡಿದ್ದಾರೆ. ಅಂದರೆ, ಶನಿವಾರ (ಅಕ್ಟೋಬರ್ 4) ಸಂಜೆ ಅವರು ಸಿನಿಮಾ ವೀಕ್ಷಿಸಲಿದ್ದಾರೆ.
ಟಿಕೆಟ್ ಬುಕಿಂಗ್ ವಿವರವನ್ನು ಕೂಡ ಪ್ರತಾಪ್ ಸಿಂಹ ಅವರು ಹಂಚಿಕೊಂಡಿದ್ದಾರೆ. DRCಯಲ್ಲಿ 2ನೇ ಸ್ಕ್ರೀನ್ನಲ್ಲಿ ಒಟ್ಟು 197 ಟಿಕೆಟ್ಗಳನ್ನು ಅವರು ಬುಕ್ ಮಾಡಿದ್ದಾರೆ. ಇದಕ್ಕಾಗಿ ಅವರು ಒಟ್ಟು 68,920 ರೂಪಾಯಿ ಖರ್ಚು ಮಾಡಿದ್ದಾರೆ. ಸಿನಿಮಾ ನೋಡಿದ ಬಳಿಕ ಅವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಹೊಂಬಾಳೆ ಫಿಲ್ಮ್ಸ್ ಮೂಲಕ ‘ಕಾಂತಾರ: ಚಾಪ್ಟರ್ 1’ ಸಿನಿಮಾ ನಿರ್ಮಾಣ ಆಗಿದೆ. ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ಪ್ರತಾಪ್ ಸಿಂಹ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ‘ಕರ್ನಾಟಕದ ಹೆಮ್ಮೆಯ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌ನ ಸ್ಥಾಪಕರಾದ ಶ್ರೀ ವಿಜಯ್ ಕಿರಗಂದೂರು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ತಾಯಿ ಚಾಮುಂಡೇಶ್ವರಿಯು ತಮಗೆ ಆರೋಗ್ಯ, ಆಯಸ್ಸು, ಸುಖ-ಶಾಂತಿ, ನೆಮ್ಮದಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾಗೆ ನಿರ್ದೇಶನ ಮಾಡಿ, ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ರಿಷಬ್ ಶೆಟ್ಟಿ ಜೊತೆ ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ, ಜಯರಾಮ್, ಪ್ರಕಾಶ್ ತುಮಿನಾಡು ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. 7 ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹುಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತಿದೆ.