ಜ್ಯೋತಿ-ಅಲೋಕ್ ಪ್ರಕರಣ: ಜೀವನಾಂಶ ಅರ್ಜಿಗೆ ಹೈಕೋರ್ಟ್‌ನಲ್ಲಿ ಹೊಸ ಟ್ವಿಸ್ಟ್

ಉತ್ತರ ಪ್ರದೇಶ: ಬರೇಲಿ ಜಿಲ್ಲೆಯ ಪ್ರಾಂತೀಯ ನಾಗರಿಕ ಸೇವಾ ಅಧಿಕಾರಿ ಜ್ಯೋತಿ ಮೌರ್ಯ ಪ್ರಕರಣ ಇದೀಗ ಮತ್ತೆ ಚರ್ಚೆಗೆ ಬಂದಿದ್ದು, ಈ ಬಾರಿ ಕೇಸ್ ಗೆ ಮಹತ್ವದ ಟ್ವಿಸ್ಟ್ ದೊರೆತಿದ್ದು, ಜೀವನಾಂಶ ನೀಡುವಂತೆ ಕೋರಿ ಪತಿ ಅಲೋಕ್ ಮೌರ್ಯ ಅಲಹಾಬಾದ್ ಕೋರ್ಟ್ ಮೆಟ್ಟಿಲೇರಿದ್ದಾರೆ.
ಮೂಲಗಳ ಪ್ರಕಾರ 6 ತಿಂಗಳ ಹಿಂದೆಯೇ ಅಲೋಕ್ ಮೌರ್ಯ ತಮ್ಮನ್ನು ಬಿಟ್ಟು ಹೋದ ಪತ್ನಿ ಜ್ಯೋತಿ ಮೌರ್ಯರಿಂದ ಜೀವನಾಂಶ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ವರ್ಷದ ಆರಂಭದಲ್ಲಿ ಅಜಂಗಢ ಕುಟುಂಬ ನ್ಯಾಯಾಲಯದಲ್ಲಿ ಜೀವನಾಂಶಕ್ಕಾಗಿ ಅಲೋಕ್ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಜೀವನಾಂಶ ಅರ್ಜಿ ಸಲ್ಲಿಕೆ ತಡವಾಗಿ ಮಾಡಲಾಗಿದೆ ಎಂದು ಅರ್ಜಿ ತಿರಸ್ಕರಿಸಿತ್ತು.

ಇದೀಗ ಅವರು ಅಲಹಾಬಾದ್ ಹೈಕೋರ್ಟ್‌ನಲ್ಲಿ ಹೊಸ ಮೇಲ್ಮನವಿ ಸಲ್ಲಿಸಿದ್ದು, ಆರ್ಥಿಕ ಮತ್ತು ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿದ್ದಾರೆ. ಅಲ್ಲದೆ ತಡವಾಗಿ ಅರ್ಜಿ ಸಲ್ಲಿಸಲು ಕಾರಣಗಳನ್ನೂ ನೀಡಿದ್ದಾರೆ ಎನ್ನಲಾಗಿದೆ.
ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಅಲೋಕ್ ಮೌರ್ಯ, ತಮ್ಮ ಪರಿತ್ಯಕ್ತ ಪತ್ನಿ ಆಡಳಿತ ಅಧಿಕಾರಿಯಾಗಿದ್ದು, ಸರ್ಕಾರಿ ಕೆಲಸ ಮಾಡುತ್ತಿದ್ದಾರೆ ಮತ್ತು ಪತಿ ಅಲೋಕ್ ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದು, ಆದ್ದರಿಂದ ಆಕೆಯಿಂದ ಜೀವನಾಂಶ ಪಡೆಯಲು ಅರ್ಹರು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. 77 ದಿನಗಳ ವಿಳಂಬದ ನಂತರ ಮೇಲ್ಮನವಿ ಸಲ್ಲಿಸಲ್ಪಟ್ಟ ಕಾರಣ, ಪತಿಯ ಪರವಾಗಿ ವಿಳಂಬವನ್ನು ಕ್ಷಮಿಸುವಂತೆ ಅರ್ಜಿಯನ್ನು ಸಹ ಸಲ್ಲಿಸಲಾಗಿದೆ.
ಅಲೋಕ್ ಕುಮಾರ್ ಮೌರ್ಯ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಅರಿಂದಮ್ ಸಿನ್ಹಾ ಮತ್ತು ಡಾ. ಯೋಗೇಂದ್ರ ಕುಮಾರ್ ಶ್ರೀವಾಸ್ತವ ಅವರಿದ್ದ ವಿಭಾಗೀಯ ಪೀಠವು ಸರ್ಕಾರಿ ಅಧಿಕಾರಿ ಜ್ಯೋತಿ ಮೌರ್ಯ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 8ಕ್ಕೆ ನಿಗದಿಪಡಿಸಿತು.
ಏನಿದು ಘಟನೆ?
ಜ್ಯೋತಿ ಮೌರ್ಯ ಮತ್ತು ಅಲೋಕ್ ಮೌರ್ಯ ದಂಪತಿಗಳು 2010 ರಲ್ಲಿ ವಿವಾಹವಾಗಿದ್ದರು ಮತ್ತು 2015 ರಲ್ಲಿ ಈ ದಂಪತಿಗೆ ಅವಳಿ ಹೆಣ್ಣು ಮಕ್ಕಳು ಕೂಡ ಜನಿಸಿದ್ದರು. ಜ್ಯೋತಿ ಅದೇ ವರ್ಷ ಉತ್ತರ ಪ್ರದೇಶ ಪ್ರಾಂತೀಯ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ 16ನೇ ಸ್ಥಾನ ಪಡೆದು ಸರ್ಕಾರಿ ಉದ್ಯೋಗ ಗಿಟ್ಟಿಸಿದ್ದರು. ಆ ಸಮಯದಲ್ಲಿ ಅಲೋಕ್ ಮೌರ್ಯ ಮಪಂಚಾಯತ್ ರಾಜ್ ಇಲಾಖೆಯಲ್ಲಿ 4ನೇ ವರ್ಗದ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ಇದರ ನಡುವೆ ಜ್ಯೋತಿ ಓದು ಮುಂದುವರಿಸುವ ಬಯಕೆಯನ್ನು ಗಂಡನ ಬಳಿ ವ್ಯಕ್ತಪಡಿಸಿದ್ದರು. ಬಳಿಕ ಅಲೋಕ್ ಕೂಡ ಇದಕ್ಕೆ ಓಕೆ ಎಂದಿದ್ದರು. ಬಳಿಕ ಅಲೋಕ್ ತಮ್ಮ ಪತ್ನಿ ಜ್ಯೋತಿ ಮೌರ್ಯರನ್ನು ಕಷ್ಟಪಟ್ಟು ಓದಿಸಿ ಪ್ರಯಾಗ್ರಾಜ್ನಲ್ಲಿರುವ ಒಳ್ಳೆಯ ಕೋಚಿಂಗ್ ಕೇಂದ್ರಕ್ಕೆ ದಾಖಲಿಸಿದರು. ಜ್ಯೋತಿ ಕೂಡ ತನ್ನ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದಾಗಿ 2016ರಲ್ಲಿ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಆಗಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಳು.
ಆದರೆ ಸರ್ಕಾರಿ ಕೆಲಸ ಸಿಕ್ಕ ಬೆನ್ನಲ್ಲೇ ಯಶಸ್ಸನ್ನು ತಲೆಗೆ ತುಂಬಿಸಿಕೊಂಡ ಪತ್ನಿ ಜ್ಯೋತಿ ಮೌರ್ಯ ಪತಿ ಅಲೋಕ್ ಗೆ ವಂಚಿಸಿ ಮತ್ತೋರ್ವ ಸರ್ಕಾರಿ ಉದ್ಯೋಗಿಯೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದರು ಎಂದು ಆಲೋಕ್ ಆರೋಪಿಸಿದ್ದಾರೆ. ‘ಜ್ಯೋತಿ ನನಗೆ ವಂಚನೆ ಮಾಡಲು ಮುಂದಾದಳು. ಮದುವೆ ಬಳಿಕ ಇಬ್ಬರು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದೆವು. ಆದರೆ, ನಾನು ಬಿಡುವಿಲ್ಲದೆ, ತುಂಬಾ ಶ್ರಮವಹಿಸಿ ದುಡಿದು ಪತ್ನಿಗೆ ಶಿಕ್ಷಣ ಕೊಡಿಸಿದೆ. ಪ್ರಯಾಗ್ರಾಜ್ನಲ್ಲಿರುವ ಒಳ್ಳೆಯ ಕೋಚಿಂಗ್ ಕೇಂದ್ರಕ್ಕೆ ದಾಖಲಿಸಿದೆ. ತನ್ನ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದಾಗಿ 2016ರಲ್ಲಿ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಆಗಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಳು. ಯಶಸ್ಸನ್ನು ತಲೆಗೆ ತುಂಬಿಸಿಕೊಂಡ ಪತ್ನಿ ನನಗೆ ವಂಚನೆ ಮಾಡಲು ಮುಂದಾದಳು ಎಂದು ಅಲೋಕ್ ಆರೋಪಿಸಿದ್ದಾರೆ.
ಅಲೋಕ್ ಕಣ್ಣೀರು
2023ರ ಮೇ 7ರಂದು ತನ್ನ ಮಾವ ಮತ್ತು ಗಂಡನ ವಿರುದ್ಧ ಜ್ಯೋತಿ ಮೌರ್ಯ ವರದಕ್ಷಿಣೆ ಕಿರುಕುಳ ದಾಖಲಿಸಿದರು. ಫಾರ್ಚೂನರ್ ಕಾರು ಮತ್ತು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ದೂರಿನಲ್ಲಿ ಜ್ಯೋತಿ ಉಲ್ಲೇಖಿಸಿದ್ದರು. ಅಲ್ಲದೆ, ಗಂಡನನ್ನು ಜೈಲಿಗೆ ಕಳುಹಿಸಲಾಗಿತ್ತು. ಇದೀಗ ಅಲೋಕ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ ಮತ್ತು ತನ್ನ ಕೆಲಸವನ್ನು ಕಳೆದುಕೊಂಡಿದ್ದಾರೆ. ಇದರಿಂದ ಸಂಕಷ್ಟಕ್ಕಿಡಾಗಿದ್ದು, ಮಾಧ್ಯಮಗಳ ಮುಂದೆ ಅಲೋಕ್ ಕಣ್ಣೀರಿಟ್ಟಿದ್ದಾರೆ.
ಸರಸ ಸಲ್ಲಾಪ
ಇದೀಗ ಅಲೋಕ್ ಮೌರ್ಯ ಕೂಡ ತನ್ನ ಪತ್ನಿ ವಿರುದ್ಧ ದೂರು ದಾಖಲಿಸಿದ್ದರು. ಗಾಜಿಯಾಬಾದ್‌ನಲ್ಲಿರುವ ರಾಷ್ಟ್ರೀಯ ಕಾವಲು ಪಡೆಯ ಕಮಾಂಡರ್ ಮನೀಶ್ ದುಬೆ ಎಂಬುವರ ಜತೆ ಪತ್ನಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಜ್ಯೋತಿ ತನ್ನ ಅಧಿಕೃತ ನಿವಾಸದಲ್ಲಿ ಮನೀಶ್ ಜೊತೆ ಸರಸ ಸಲ್ಲಾಪದಲ್ಲಿ ತೊಡಗಿದ್ದಳು. ಇದನ್ನು ನಾನು ಕಣ್ಣಾರೆ ಕಂಡೆ ಎಂದು ದೂರಿದ್ದಾರೆ. ನನಗೆ ಜ್ಯೋತಿ ಕಡೆಯಿಂದ ಜೀವಕ್ಕೆ ಬೆದರಿಕೆ ಇದೆ. ಡಿವೋರ್ಸ್ ಕೊಡದಿದ್ದರೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಅಲೋಕ್, ದೂರಿನಲ್ಲಿ ಉಲ್ಲೇಖಿಸಿದ್ದರು.
ಅಲೋಕ್ ವಿರುದ್ಧ ಜ್ಯೋತಿ ಆರೋಪ
ಅಲೋಕ್ ಮಾಡಿದ್ದ ಎಲ್ಲ ಆರೋಪಗಳನ್ನು ಜ್ಯೋತಿ ತಿರಸ್ಕರಿಸಿದ್ದು, ಮದುವೆಯ ಸಮಯದಲ್ಲಿ ತನ್ನ ಪತಿ ತನ್ನ ಕೆಲಸದ ಕುರಿತು ಸುಳ್ಳು ಹೇಳಿದ್ದರು ಎಂದಿದ್ದರು. 2023ರಲ್ಲಿ ಅಲೋಕ್ ಮತ್ತು ಅವರ ಕುಟುಂಬದ ವಿರುದ್ಧ ಜ್ಯೋತಿ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ದಾಖಲಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಅಲ್ಲದೆ ಅಲೋಕ್ ತೋರಿಸುತ್ತಿರುವ ವಾಟ್ಸಪ್ ಚಾಟ್ ಗಳು ನಕಲಿ.. ವೈರಲ್ ಆದ ಸ್ಕ್ರೀನ್‌ಶಾಟ್‌ಗಳನ್ನು “ವಿಕೃತ” ಎಂದು ಕರೆದು ಜ್ಯೋತಿ ಐಟಿ ಕಾಯ್ದೆಯಡಿಯಲ್ಲಿ ವೈಯಕ್ತಿಕ ವಾಟ್ಸಾಪ್ ಚಾಟ್‌ಗಳನ್ನು ಆನ್‌ಲೈನ್‌ನಲ್ಲಿ ಅನಧಿಕೃತವಾಗಿ ಪ್ರಸಾರ ಮಾಡಿದ್ದಕ್ಕಾಗಿ ದೂರು ದಾಖಲಿಸಿದ್ದಾರೆ. “ನನ್ನ ವೈಯಕ್ತಿಕ ಚಾಟ್‌ಗಳನ್ನು ಸೋರಿಕೆ ಮಾಡಿದ್ದಕ್ಕಾಗಿ ಐಟಿ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ನನ್ನ ಪತಿಯ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಪ್ರಕರಣವನ್ನು ಇತ್ಯರ್ಥಪಡಿಸುತ್ತಾರೆ ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಾರೆ” ಎಂದು ಹೇಳಿದ್ದರು.
