“ಪಹಲ್ಗಾಂ ದಾಳಿ ಸಮರ್ಥನೆ: ‘ನಿಚ್ಚು ಮಂಗಳೂರು’ ಎಂಬ ಫೇಸ್‌ಬುಕ್ ಬಳಕೆದಾರರ ವಿರುದ್ಧ ಎಫ್‌ಐಆರ್”

ಮಂಗಳೂರು : ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಸಮರ್ಥಿಸಿಕೊಂಡ ಆರೋಪದ ಮೇಲೆ ‘ನಿಚ್ಚು ಮಂಗಳೂರು’ ಎಂಬ ಫೇಸ್‌ಬುಕ್ ಬಳಕೆದಾರರ ವಿರುದ್ಧ ಮಂಗಳೂರಿನಲ್ಲಿ ಪ್ರಕರಣ ದಾಖಲಾಗಿದೆ
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಉಳ್ಳಾಲ ನಿವಾಸಿ ಸತೀಶ್ ಕುಮಾರ್ ಎಂಬವರು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲು ಮಾಡಲಾಗಿದೆ. ಗಲಭೆಯನ್ನು ಪ್ರಚೋದಿಸುವ ಉದ್ದೇಶದಿಂದ ವಿಷಯವನ್ನು ಪ್ರಕಟಿಸಿದ್ದಕ್ಕಾಗಿ ಮತ್ತು ಶಾಂತಿ ಕದಡುವ ಅಥವಾ ಹಾನಿಯನ್ನುಂಟುಮಾಡುವ ಹೇಳಿಕೆಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಕಾಯ್ದೆ, 2023ರ ಸೆಕ್ಷನ್ 192 ಮತ್ತು 353(1)(ಬಿ) ಅಡಿಯಲ್ಲಿ ಬಳಕೆದಾರರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಪೊಲೀಸರ ಪ್ರಕಾರ, ಈ ಪೋಸ್ಟ್ ಸಾರ್ವಜನಿಕ ಶಾಂತಿಯನ್ನು ಕದಡುವ ಗುರಿಯನ್ನು ಹೊಂದಿರುವ ಪ್ರಚೋದನಕಾರಿ ಭಾಷೆಯನ್ನು ಹೊಂದಿದೆ. ದೂರಿನಲ್ಲಿ ಪೋಸ್ಟ್‌ನ ಸ್ಕ್ರೀನ್‌ಶಾಟ್‌ಗಳು ಮತ್ತು ಬಳಕೆದಾರರ ಪ್ರೊಫೈಲ್ ಅನ್ನು ಪುರಾವೆಯಾಗಿ ಸೇರಿಸಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಮಾಡಿರುವ ಪೋಸ್ಟ್‌ನಲ್ಲಿ, ಬಳಕೆದಾರರು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಹತ್ಯೆಗಳನ್ನು 2023 ರ ಪಾಲ್ಘರ್ ರೈಲ್ವೆ ನಿಲ್ದಾಣದ ಗುಂಡಿನ ದಾಳಿಗೆ ಹೋಲಿಸಿದ್ದಾರೆ. ಇದರಲ್ಲಿ ರೈಲ್ವೆ ರಕ್ಷಣಾ ಪಡೆ ಅಧಿಕಾರಿಯೊಬ್ಬರು ಹಿರಿಯ ಸಹೋದ್ಯೋಗಿ ಸೇರಿದಂತೆ ನಾಲ್ವರು ಜನರನ್ನು ಗುಂಡಿಕ್ಕಿ ಹತ್ಯೆ ನಡೆಸಿದ್ದರು. ಇಲ್ಲಿ ಹತ್ಯೆಗೀಡಾದವರ ಮೇಲೆ ಗುಂಡು ಹಾರಿಸುವ ಮೊದಲು ಅಧಿಕಾರಿ ಮುಸ್ಲಿಮರೇ ಎಂದು ಕೇಳಿದ್ದರು ಎಂದು ಬಳಕೆದಾರರು ಹೇಳಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಆ ಭಯೋತ್ಪಾದಕನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದ್ದರೆ, ಶ್ರೀನಗರದಲ್ಲಿ ಇಂತಹ ಕೃತ್ಯ ನಡೆಯುತ್ತಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್‌ಗೆ ಕಾಮೆಂಟ್ ವಿಭಾಗದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ತಮ್ಮ ಪೋಸ್ಟ್ ಮೂಲಕ ವ್ಯಕ್ತಿ ದ್ವೇಷವನ್ನು ಹರಡುತ್ತಿದ್ದಾರೆ, ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದಾರೆ ಎಂದು ಬಹುತೇಕ ಮಂದಿ ಆಕ್ರೋಶ ಹೊರ ಹಾಕಿದ್ದಾರೆ.
ಒಬ್ಬ ಬಳಕೆದಾರರು, “ಅದು ಕೂಡಾ ತಪ್ಪು, ಇದು ಕೂಡಾ ತಪ್ಪು.ಇಲ್ಲಿ ಯಾವುದೇ ಸಮರ್ಥನೆಯ ಅಗತ್ಯವಿಲ್ಲ” ಎಂದು ಹೇಳಿದ್ದಾರೆ. ಮತ್ತೊಬ್ಬ ವ್ಯಕ್ತಿ “ನೀವು ಈ ರೀತಿಯ ಪೋಸ್ಟ್ ಪೋಸ್ಟ್ ಮಾಡಿದ್ದೀರಿ ಎಂಬ ಕಾರಣಕ್ಕಾಗಿ, ನೀವು ಉತ್ತಮ ಚಿಂತಕರಲ್ಲ. ನೀವು ಹೇಡಿ ಎಂದು ಕಾಮೆಂಟ್ ಮಾಡಿದ್ದಾರೆ.
ಈ ಮಧ್ಯೆ, ಪ್ರೊಫೈಲ್‌ನ ಡಿಸ್ಪ್ಲೇ ಚಿತ್ರದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಯನ್ನು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
