ಕೋಳಿಗೆ ನ್ಯಾಯ ಬೇಕು!: ನಲ್ಗೊಂಡದಲ್ಲಿ ವಿಚಿತ್ರ ದೂರು, ಪೊಲೀಸ್ ಠಾಣೆ ಮುಂದೆ ಮಹಿಳೆಯ ಪಟ್ಟು!

ಅಪರಾಧಗಳು, ಕೊಲೆಗಳು, ದರೋಡೆಗಳು ಮತ್ತು ಕಳ್ಳತನದಂತಹ ಘಟನೆಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ, ನಲ್ಗೊಂಡ ಜಿಲ್ಲೆಯ ನಕ್ರೆಕಲ್ ಪೊಲೀಸರಿಗೆ ಒಂದು ವಿಚಿತ್ರವಾದ ಪ್ರಕರಣ ಎದುರಾಗಿದೆ. ಸಾಮಾನ್ಯವಾಗಿ ನೊಂದ ಜನರು ನನಗೆ ನ್ಯಾಯ ಕೊಡಿಸಿ ಎಂದು ಠಾಣೆಗೆ ಬರುತ್ತಾರೆ.

ಆದರೆ, ಇಲ್ಲೊಬ್ಬ ಮಹಿಳೆ ತನ್ನ ಕೋಳಿಗೆ ನ್ಯಾಯ ಕೊಡಿಸಿ ಎಂದು ಆಗ್ರಹಿಸಿದ್ದಾಳೆ.
ನಕ್ರೆಕಲ್ ಮೂಲದ ನಿವಾಸಿ ಗಂಗಮ್ಮ ಎಂಬುವರಿಗೆ ತುಂಬಾ ಇಷ್ಟವಾದ ಸಾಕು ಕೋಳಿ ಒಂದಿತ್ತು. ಅದು ಪ್ರತಿದಿನ ಹೊರಗೆ ಹೋಗಿ ಸಂಜೆ ಮನೆಗೆ ತಪ್ಪದೇ ಬರುತ್ತಿತ್ತು. ಇದೇ ಕೋಳಿ ಪಕ್ಕದ ರಾಕೇಶ್ ಮನೆಯ ಕೊಟ್ಟಿಗೆಯಲ್ಲಿ ಬೀಜಗಳನ್ನು ತಿನ್ನಲು ಪ್ರಾರಂಭಿಸಿತು. ಇದನ್ನು ನೋಡಿ ರಾಕೇಶ್ ಕೋಪಗೊಂಡು ಕೋಲಿನಿಂದ ಕೋಳಿಗೆ ಹೊಡೆದರು. ಇದರ ಪರಿಣಾಮ ಕೋಳಿಯ ಕಾಲುಗಳು ಮುರಿದವು.
ಕೋಳಿಯ ಕಾಲುಗಳು ಮುರಿದಿರುವುದನ್ನು ಗಮನಿಸಿದ ಗಂಗಮ್ಮ, ನಕ್ರೆಕಲ್ ಪೊಲೀಸ್ ಠಾಣೆಗೆ ಹೋಗಿ ಅಳುತ್ತಾ ದೂರು ದಾಖಲಿಸಿದ್ದಾರೆ. ನನ್ನ ಕೋಳಿಗೆ ನ್ಯಾಯ ಬೇಕು. ರಾಕೇಶ್ ಅದನ್ನು ಕೋಲಿನಿಂದ ಹೊಡೆದಿದ್ದಾನೆ. ಹೀಗಾಗಿ ನನ್ನ ಕೋಳಿಗೆ ನಡೆಯಲು ಆಗುತ್ತಿಲ್ಲ. ನನಗೆ ಹಣ ಬೇಡ. ರಾಕೇಶ್‌ಗೆ ಶಿಕ್ಷೆಯಾಗಬೇಕು ಎಂದು ಗಂಗಮ್ಮ ಆಗ್ರಹಿಸಿದ್ದಾರೆ.
ಆರಂಭದಲ್ಲಿ ಪೊಲೀಸರು ಗಂಗಮ್ಮರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಆದರೆ, ಅದು ಸಾಧ್ಯವಾಗಲಿಲ್ಲ. ನಾನೀಗ ಸುಮ್ಮನಾದರೇ ಹಳ್ಳಿಯಲ್ಲಿರುವ ಇತರ ಕೋಳಿಗಳಿಗೂ ಇದೇ ರೀತಿ ಸಂಭವಿಸಬಹುದು ಎಂದು ಗಂಗಮ್ಮ ಹೇಳಿದರು. ಅಲ್ಲದೆ, ಪೊಲೀಸರು ಈ ಪ್ರಕರಣವನ್ನು ತೆಗೆದುಕೊಳ್ಳಲೇ ಬೇಕೆಂದು ಗಂಗಮ್ಮ ಒತ್ತಾಯ ಮಾಡಿದತು.
ಗಂಗಮ್ಮರ ಒತ್ತಾಯದಿಂದ ಗೊಂದಲಕ್ಕೊಳಗಾದ ಪೊಲೀಸರು, ಕೊನೆಗೆ ಗ್ರಾಮಕ್ಕೆ ಬಂದು ಪಂಚಾಯತಿ ನಡೆಸುವುದಾಗಿ ಭರವಸೆ ನೀಡಿದರು. ಸದ್ಯಕ್ಕೆ, ಗಂಗಮ್ಮರನ್ನು ಮನೆಗೆ ಕಳುಹಿಸಿ ಕೋಳಿಗೆ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ.
