ಹಣದುಬ್ಬರದಲ್ಲೀ ಇಳಿಕೆ ಸರಣಿ: ರೀಟೇಲ್ ದರವೂ ಇಳಿಯುವ ನಿರೀಕ್ಷೆ

ನವದೆಹಲಿ: ಭಾರತದ ಸಗಟು ದರ ಹಣದುಬ್ಬರ ಸೂಚ್ಯಂಕ ಜೂನ್ ತಿಂಗಳಲ್ಲಿ ಮೈನಸ್ ಶೇ. 0.13ಕ್ಕೆ ಇಳಿದಿದೆ. ಇದು 20 ತಿಂಗಳಲ್ಲೇ ಕನಿಷ್ಠ ಸಗಟು ದರ ಹಣದುಬ್ಬರ ಮಟ್ಟ ಎನಿಸಿದೆ. ಹಿಂದಿನ ತಿಂಗಳಾದ ಮೇ ಹಾಗೂ ಕಳೆದ ವರ್ಷದ ಜೂನ್ ತಿಂಗಳಿಗಿಂತ ಡಬ್ಲ್ಯೂಪಿಐ ದರ ಗಣನೀಯವಾಗಿ ತಗ್ಗಿದೆ. 2025ರ ಮೇ ತಿಂಗಳಲ್ಲಿ ಈ ಹೋಲ್ಸೇಲ್ ಹಣದುಬ್ಬರ ಶೇ. 0.39ರಷ್ಟಿತ್ತು. 2024ರ ಜೂನ್ ತಿಂಗಳಲ್ಲಿ ಇದು ಶೇ. 3.43ರಷ್ಟಿತ್ತು. ಆಹಾರವಸ್ತು ಮತ್ತು ಇಂಧನ ದರಗಳು ಜೂನ್ ತಿಂಗಳಲ್ಲಿ ಕಡಿಮೆಗೊಂಡಿದ್ದು ಡಬ್ಲ್ಯುಪಿಐ ಆಧಾರಿತ ಹಣದುಬ್ಬರ ದರದ ಇಳಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.

ಆಹಾವಸ್ತು, ಇಂಧನ, ಖನಿಜ ತೈಲ, ಕಚ್ಛಾ ಪೆಟ್ರೋಲಿಯಂ ಮತ್ತ ನೈಸರ್ಗಿಕ ಅನಿಲಗಳ ಬೆಲೆಗಳು ಇಳಿಯುವುದರ ಜೊತೆಗೆ, ಮೂಲ ಲೋಹಗಳು ಸೇರಿದಂತೆ ಪ್ರಮುಖ ಉತ್ಪನ್ನ ತಯಾರಿಕೆ ವೆಚ್ಚವೂ ಕಡಿಮೆ ಆಗಿರುವುದು ಸಗಟು ಮಾರಾಟ ಬೆಲೆ ತಗ್ಗಲು ಸಹಾಯಕವಾಗಿದೆ.
ಸರ್ಕಾರ ಸೋಮವಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಆಹಾರವಸ್ತುಗಳ ಬೆಲೆ ಜೂನ್ ತಿಂಗಳಲ್ಲಿ ಶೇ. 3.75ರಷ್ಟು ಇಳಿದಿದೆ. ಮೇ ತಿಂಗಳಲ್ಲಿ ಇವುಗಳ ಹೋಲ್ಸೇಲ್ ಬೆಲೆ ಶೇ. 1.56ರಷ್ಟು ಇಳಿದಿತ್ತು. ಅದು ಜೂನ್ ತಿಂಗಳಲ್ಲೂ ಮುಂದುವರಿದಿದೆ. ಆಹಾರವಸ್ತುಗಳ ಪೈಕಿ ತರಕಾರಿಗಳ ಹೋಲ್ಸೇಲ್ ಬೆಲೆ ಶೇ. 22.65ರಷ್ಟು ಕಡಿಮೆಗೊಂಡಿತ್ತು.
ರೀಟೇಲ್ ಹಣದುಬ್ಬರವೂ ಇಳಿಯುವ ಸಾಧ್ಯತೆ
ಹೋಲ್ಸೇಲ್ ಬೆಲೆ ಇಳಿದರೆ ಸಹಜವಾಗಿ ರೀಟೇಲ್ ಬೆಲೆಯೂ ಇಳಿಯುತ್ತದೆ. ಜೂನ್ ತಿಂಗಳಲ್ಲಿ ರೀಟೇಲ್ ಹಣದುಬ್ಬರವು ಆರು ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ಇಳಿಯಬಹುದು ಎಂದು ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮೇ ತಿಂಗಳಲ್ಲಿ ಶೇ. 2.82ರಷ್ಟಿದ್ದ ರೀಟೇಲ್ ಇನ್ಫ್ಲೇಶನ್ ಜೂನ್ ತಿಂಗಳಲ್ಲಿ ಶೇ. 2.33ಕ್ಕೆ ಇಳಿಯಬಹುದು. ಇದು ವಿವಿಧ ಆರ್ಥಿಕ ತಜ್ಞರು ಮಾಡಿರುವ ಅಂದಾಜು.
ಇದೇನಾದರೂ ನಿಜವೇ ಆದಲ್ಲಿ ಕಳೆದ ಆರು ವರ್ಷದಲ್ಲೇ ರೀಟೇಲ್ ಹಣದುಬ್ಬರ ಕನಿಷ್ಠ ಮಟ್ಟಕ್ಕೆ ಜಾರಬಹುದು. 2019ರ ಜನವರಿ ತಿಂಗಳಲ್ಲಿ ಹಣದುಬ್ಬರ ಶೇ. 1.97 ಇತ್ತು. ಇವತ್ತು ಸಂಜೆ ಸರ್ಕಾರದಿಂದ ಅಧಿಕೃತ ರೀಟೇಲ್ ಹಣದುಬ್ಬರ ದತ್ತಾಂಶ ಪ್ರಕಟವಾಗಲಿದೆ.
