ಆಧಾರ್ ಉಚಿತ ನವೀಕರಣಕ್ಕೆ ಜೂನ್ 14 ಕೊನೆಯ ದಿನ: ಈಗಲೇ ಅಪ್ಡೇಟ್ ಮಾಡಿ!

ಪ್ರತಿಯೊಬ್ಬ ಭಾರತೀಯನಿಗೂ ಬಹಳ ಮುಖ್ಯವಾದ ದಾಖಲಾತಿ ಎಂದರೆ ಅದು ಆಧಾರ್ ಕಾರ್ಡ್. ಒಂದು ರೀತಿ ಎಲ್ಲಾ ಡಾಂಕ್ಯೂಮೆಂಟ್ಗಳ ಕಾರ್ಡ್ಗಳಿಗೆ ಅಧಿಪತಿಯೇ ಈ ಆಧಾರ್ ಕಾರ್ಡ್. ಇದೊಂದು ಚೀಟಿ ಸರಿಯಿದ್ದರೇ ಉಳಿದೆಲ್ಲವೂ ಕೂಡ ಬಹಳ ಸರಳ ಹಾಗೂ ಸುಲಭ.
ಹೌದು, ನಾವು ಪಡಿತರ ಚೀಟಿ, ವಾಹನ ಪರವಾನಗಿ, ಪಾನ್ ಕಾರ್ಡ್, ಬ್ಯಾಂಕ್ ಖಾತೆ ಹೀಗೆ ಹಲವು ದಾಖಲಾತಿ ಪಡೆಯಲು ಸೇವಾ ಕೇಂದ್ರಗಳಿಗೆ ಭೇಟಿ ಕೊಟ್ಟಾಗ ಅವರು ನಮ್ಮನ್ನು ಮೊದಲು ಕೇಳುವುದೇ ‘ಎಲ್ಲಿ ನಿಮ್ಮ ಆಧಾರ್ ಕೊಡಿ’ ಎಂದು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಈ 12 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆ ಮಹತ್ವ ಬಹಳ ಇದೆ. ಆದ್ರೆ, ಈ ಮಧ್ಯೆ ಉಚಿತ ನವೀಕರಣಕ್ಕೆ ಕೊಟ್ಟಿರುವ ಗಡುವು ಶೀಘ್ರವೇ ಅಂತ್ಯಗೊಳ್ಳಲಿದೆ.
ಈಗಾಗಲೇ ನಿಮ್ಮ ಆಧಾರ್ ನವೀಕರಣ ಮಾಡಿಸಿಕೊಂಡಿದ್ದೀರಾ? ಇಲ್ಲವಾದಲ್ಲಿ, ಈಗಲೇ ನವೀಕರಿಸಿಕೊಳ್ಳಿ. ಪ್ರತಿಯೊಬ್ಬರೂ ತಮ್ಮ ಆಧಾರ್ ವಿವರಗಳನ್ನು ನವೀಕರಿಸುವುದು ಅಗತ್ಯ ಹಾಗೂ ಅನಿವಾರ್ಯ. ಪ್ರಸ್ತುತ, ಆಧಾರ್ ವಿವರಗಳನ್ನು ಉಚಿತವಾಗಿ ಕೇಂದ್ರ ಸರ್ಕಾರ ನೀಡಿರುವ ಅಧಿಕೃತ ವೆಬ್ಸೈಟ್ನಲ್ಲಿ ನವೀಕರಿಸಬಹುದಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಜೂನ್ 14, 2025 ರವರೆಗೆ ಮಾತ್ರ ಆಧಾರ್ ಉಚಿತ ನವೀಕರಣಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ.
ಈ ಗಡುವು ಮುಗಿದ ಬಳಿಕ ಎಂದಿನಂತೆ 50 ರೂ. ಶುಲ್ಕ ನವೀಕರಣಕ್ಕೆ ತಗುಲಲಿದೆ. ಬಳಕೆದಾರರು ತಮ್ಮ ಮನೆಯಿಂದಲೇ myAadhaar ಪೋರ್ಟಲ್ನಲ್ಲಿ ತಮ್ಮ ವಿವರಗಳನ್ನು ಸಲ್ಲಿಸಿ ಅಪ್ಡೇಟ್ ಮಾಡಿಕೊಳ್ಳಬಹುದು. ಆಧಾರ್ ನೋಂದಣಿ ಮತ್ತು ನವೀಕರಣ ನಿಯಮಗಳು 2016ರ ಪ್ರಕಾರ, ಪ್ರತಿ 10 ವರ್ಷಗಳಿಗೊಮ್ಮೆ ಆಧಾರ್ನಲ್ಲಿ ಗುರುತಿನ ಪುರಾವೆ (PoI) ಮತ್ತು ವಿಳಾಸದ ಪುರಾವೆ (PoA) ಅನ್ನು ನವೀಕರಿಸುವುದು ಕಡ್ಡಾಯವಾಗಿದೆ. ಅಸಲಿಗೆ ಆನ್ಲೈನ್ ಪೋರ್ಟ್ನಲ್ಲಿ ಆಧಾರ್ ನವೀಕರಿಸುವುದು ಹೇಗೆ ಎಂಬುದರ ಮಾಹಿತಿ ಈ ಕೆಳಕಂಡಂತಿದೆ ಗಮನಿಸಿ.
ಈ ವಿಷಯ ಗೊತ್ತಿರಲಿ
ಆಧಾರ್ ಕಾರ್ಡ್ನಲ್ಲಿರುವ ಜನಸಂಖ್ಯಾ ವಿವರಗಳನ್ನು ಮಾತ್ರ ಆನ್ಲೈನ್ನಲ್ಲಿ ಉಚಿತವಾಗಿ ನವೀಕರಿಸಬಹುದು. ಇದಕ್ಕಾಗಿ ಆಧಾರ್ ದಾಖಲಾತಿ ಕೇಂದ್ರಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. ಹೆಸರು, ಜನ್ಮ ದಿನಾಂಕ, ವಿಳಾಸ, ಲಿಂಗ, ಭಾಷೆ ಮುಂತಾದ ವಿವರಗಳನ್ನು ಉಚಿತವಾಗಿ ನವೀಕರಿಸಬಹುದು. ಫಿಂಗರ್ಪ್ರಿಂಟ್, ಐರಿಸ್ ಸ್ಕ್ಯಾನ್, ಪಾಸ್ಪೋರ್ಟ್ ಫೋಟೋಗಳಂತಹ ಬಯೋಮೆಟ್ರಿಕ್ ವಿವರಗಳನ್ನು ಆಧಾರ್ ದಾಖಲಾತಿ ಕೇಂದ್ರಗಳ ಮೂಲಕವೇ ನವೀಕರಿಸಬಹುದು. ಬಳಕೆದಾರರು UIDAI ವೆಬ್ಸೈಟ್ನಲ್ಲಿ ನಗರದ ಪಿನ್ ಕೋಡ್ ಅನ್ನು ನಮೂದಿಸುವ ಮೂಲಕ ಹತ್ತಿರದ ಆಧಾರ್ ದಾಖಲಾತಿ ಕೇಂದ್ರಗಳನ್ನು ಕಂಡುಹಿಡಿಯಬಹುದು.
ನವೀಕರಿಸುವುದು ಹೇಗೆ?
ನಿಮ್ಮ ಆಧಾರ್ ವಿವರಗಳನ್ನು ಆನ್ಲೈನ್ನಲ್ಲಿ ನವೀಕರಿಸಲು ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ. ಮೊದಲು ನಿಮ್ಮ ಮೊಬೈಲ್ನಲ್ಲಿ ‘ಮೈ ಆಧಾರ್’ ಪೋರ್ಟಲ್ ತೆರೆದರೆ ಅಲ್ಲಿ ಹಲವು ಆಯ್ಕೆಗಳು ನಿಮಗೆ ಕಾಣಸಿಗುತ್ತವೆ. ಇದನ್ನು ಸರಿಯಾಗಿ ಗಮನಿಸಿ, ಆ ನಂತರ ನೀವು ಯಾವುದನ್ನು ಅಪ್ಡೇಟ್ ಮಾಡಿಕೊಳ್ಳಬೇಕು ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಿ.
UIDAIನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ (https://myaadhaar.uidai.gov.in)
ಮುಖಪುಟದಲ್ಲಿ, ನೀಲಿ ಬಣ್ಣದ ಲಾಗಿನ್ ಟ್ಯಾಬ್ ಕ್ಲಿಕ್ ಮಾಡಿ.
ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ನಮೂದಿಸಿ.
ನೋಂದಾಯಿತ ಮೊಬೈಲ್ ಸಂಖ್ಯೆಗೆ ಒನ್ ಟೈಮ್ ಪಾಸ್ವರ್ಡ್ (OTP) ಕಳುಹಿಸಲಾಗುತ್ತದೆ.
OTP ನಮೂದಿಸಿ ನಂತರ ಲಾಗಿನ್ ಮಾಡಿ.
ಪ್ರಸ್ತುತ ವಿಳಾಸ ಮತ್ತು ಗುರುತಿನ ಪುರಾವೆಯನ್ನು ನವೀಕರಿಸಲಾಗಿದೆಯೇ ಎಂದು ಪರಿಶೀಲಿಸಿ.
ನವೀಕರಿಸದಿದ್ದರೆ, ಪುಟದ ಮೇಲಿರುವ ಬಲ ಮೂಲೆಯಲ್ಲಿ ‘ಡಾಕ್ಯುಮೆಂಟ್ ಅಪ್ಲೋಡ್’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
ನೀವು ನವೀಕರಿಸಲು ಬಯಸುವ ವಿವರಗಳನ್ನು ಆಯ್ಕೆ ಮಾಡಲು ಮತ್ತು ಅಗತ್ಯವಿರುವ ದಾಖಲೆಗಳನ್ನು
ಅಪ್ಲೋಡ್ ಮಾಡಲು ಡ್ರಾಪ್-ಡೌನ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ನಿಮ್ಮ ದಾಖಲೆಗಳನ್ನು ಪರಿಶೀಲಿಸಿ, ಆ ಬಳಿಕ ಸಲ್ಲಿಸಿ.
ಅಪ್ಡೇಟ್ ಮನವಿಯನ್ನು ಟ್ರ್ಯಾಕ್ ಮಾಡಲು ನೀವು ಸೇವಾ ವಿನಂತಿ ಸಂಖ್ಯೆಯನ್ನು (SRN) ಸ್ವೀಕರಿಸುತ್ತೀರಿ