ನ್ಯಾಯಾಲಯದ ಹೊರಗೆ ಬಂದು ಪ್ರಕರಣ ಇತ್ಯರ್ಥಪಡಿಸಿದ ನ್ಯಾಯಾಧೀಶೆ: ಮಾನವೀಯತೆಗೆ ಶ್ಲಾಘನೆ!

ಮಂಡ್ಯ,:- ಜಿಲ್ಲೆಯ ಮಳವಳ್ಳಿ ಪಟ್ಟಣದ ನ್ಯಾಯಾಲಯದಲ್ಲಿ ಪ್ರಕರಣವೊಂದಕ್ಕೆ ಸಂಬಂದಿಸಿದಂತೆ ನ್ಯಾಯಾಧೀಶರೇ ತಮ್ಮ ಪೀಠದಿಂದ ಎದ್ದು ನ್ಯಾಯಾಲಯದಿಂದ ಹೊರಬಂದು ಕಕ್ಷಿದಾರ ಇದ್ದ ಜಾಗಕ್ಕೆ ತೆರಳಿ ದಾವೆಯನ್ನು ಇತ್ಯರ್ಥಪಡಿಸಿದ ಅಪರೂಪದ ಸನ್ನಿವೇಶ ಜರುಗಿತು.

ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರಕರಣಗಳಿಗೆ ಸಂಬಂಧಿಸಿದಂತೆ ದಾವೆಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸುವ ಸಮಯದಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದ ಕಕ್ಷಿದಾರೊಬ್ಬರು ನ್ಯಾಯಾಲಯದ ಒಳಗೆ ವಿಚಾರಣೆಗೆ ಭಾಗವಹಿಸಲು ಸಾಧ್ಯವಾಗದೇ ಹೊರಗೆ ಇರುವುದಾಗಿ ಕಕ್ಷಿದಾರ ಪರ ವಕೀಲ ನ್ಯಾಯಾಧೀಶರಿಗೆ ತಿಳಿಸಿದರು.
ವಿಷಯ ತಿಳಿದ ಅಪರ ಸಿವಿಲ್ ನ್ಯಾಯಾಧೀಶೆ ಕಾವ್ಯಶ್ರೀ ರವರು ತಮ್ಮ ನ್ಯಾಯ ಪೀಠದಿಂದ ಎದ್ದು ಕಕ್ಷಿದಾರರು ಇದ್ದ ಸ್ಥಳಕ್ಕೆ ಆಗಮಿಸಿ ಅಹವಾಲನ್ನು ಆಲಿಸಿದ ಬಳಿಕ ದಾವೆಯನ್ನು ಇತ್ಯರ್ಥಪಡಿಸಿದರು. ನ್ಯಾಯಾಧೀಶರ ಈ ನಡೆಯನ್ನು ಸ್ಥಳದಲ್ಲಿದ್ದ ವಕೀಲರು ಹಾಗೂ ಕಕ್ಷಿದಾರರು ಮೆಚ್ಚುಗೆ ಸೂಚಿಸುವುದರ ಜತೆಗೆ ನ್ಯಾಯಾಧೀಶರ ಕಾರ್ಯಪರತೆಗೆ ಶ್ಲಾಘನೆ ವ್ಯಕ್ತಪಡಿಸಿದರು.
ಈ ವೇಳೆ ಕಕ್ಷಿದಾರರನ್ನು ಕುರಿತು ಮಾತನಾಡಿದ ಅವರು, ರಾಷ್ಟ್ರೀಯ ಲೋಕ ಅದಾಲತ್ ಮೂಲಕ ಇಡೀ ರಾಷ್ಟ್ರಾದ್ಯಂತ ರಾಜಿ ಸಂಧಾನದ ಮೂಲಕ ವ್ಯಾಜ್ಯಗಳನ್ನು ಬಗೆಹರಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದ್ದು, ವಿವಿಧ ಸಣ್ಣಪುಟ್ಟ ಪ್ರಕರಣಗಳನ್ನು ದಾವೆ ಹೂಡಿರುವ ಕಕ್ಷಿದಾರರು ಬಗೆ ಹರಿಸಿಕೊಂದು ವ್ಯಾಜ್ಯ ಮುಕ್ತ ಜೀವನವನ್ನು ನಿರ್ವಹಿಸುವಂತೆ ಸಲಹೆ ನೀಡಿದರು.
ರಾಜಿ ಸಂಧಾನದಿಂದ ಪ್ರಕರಣಗಳಿಗೆ ಪರಿಹಾರ ಕಂಡುಕೊಳ್ಳುವುದರಿಂದ ವೃತ ನ್ಯಾಯಾಲಯಕ್ಕೆ ಅಲೆದಾಡುವುದರ ಜತೆಗೆ ನಿಮ್ಮ ಹಣ ಹಾಗೂ ಸಮಯವನ್ನು ವ್ಯರ್ಥ ಮಾಡಿಕೊಳ್ಳುವುದು ತಪ್ಪುತ್ತದೆ ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಪ್ಯಾನಲ್ವಕೀಲರು ಹಾಜರಿದ್ದರು.
