ಪ್ರಯಾಗ್‌ರಾಜ್‌ನಲ್ಲಿ ಪತ್ರಕರ್ತರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ

ಲಕ್ನೋ: ಪ್ರಯಾಗ್‌ರಾಜ್‌ನಲ್ಲಿ (Prayagraj) ಪತ್ರಕರ್ತರೊಬ್ಬರ (Journalist) ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಹತ್ಯೆಗೀಡಾದ ವ್ಯಕ್ತಿಯನ್ನು ಲಕ್ಷ್ಮಿ ನಾರಾಯಣ್ ಸಿಂಗ್ ಅಲಿಯಾಸ್ ಪಪ್ಪು (54) ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಸ್ವರೂಪ್ ರಾಣಿ ನೆಹರು ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ವೈದ್ಯರು ಮೃತಪಟ್ಟಿದ್ದಾಗಿ ಖಚಿತಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ
ಕೊಲೆಯಾದ ಪಪ್ಪು ಹೈಕೋರ್ಟ್ ಬಾರ್ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷ ಅಶೋಕ್ ಸಿಂಗ್ ಅವರ ಸೋದರಳಿಯ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಎಡಿಸಿಪಿ) ಪುಷ್ಕರ್ ವರ್ಮಾ ತಿಳಿಸಿದ್ದಾರೆ.
ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ದುಷ್ಕರ್ಮಿಗಳನ್ನು ಗುರುತಿಸಲು ಪೊಲೀಸರ ತಂಡಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿವೆ. ಆರೋಪಿಗಳ ಬಂಧನಕ್ಕೆ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಮಾಹಿತಿ ನೀಡಿದ್ದಾರೆ