ತಮಾಷೆಗೆ ಶುರುವಾದ ಜಗಳ, ಆಟೋ ಚಾಲಕ ದರ್ಶನ್ ಕೊಲೆಯಲ್ಲಿ ಅಂತ್ಯ – ಓರ್ವ ಆರೋಪಿ ಅರೆಸ್ಟ್!

ಬೆಂಗಳೂರು/ಆನೇಕಲ್ : ತಮಾಷೆಗೆಂದು ತಲೆಗೆ ಒಂದೇಟು ಸಣ್ಣದಾಗಿ ಹೊಡೆದಿದ್ದಕ್ಕೆ ಸ್ನೇಹಿತರಿಬ್ಬರ ನಡುವೆ ಶುರುವಾದ ಜಗಳ, ಮಂಡ್ಯ ಮೂಲದ ಆಟೋ ಚಾಲಕ ದರ್ಶನ್‌ನ ಕೊಲೆಯಲ್ಲಿ ಅಂತ್ಯವಾಗಿದೆ.

ಆಟೋ ಚಾಲಕ ದರ್ಶನ್ ಕೊಲೆ ಕೇಸಿಗೆ ಸಂಬಂಧಿಸಿದಂತೆ ಕೊಲೆ ಆರೋಪಿ ಜಯಸೂರ್ಯ@ ಕೆಂಚನನ್ನು ಹೆಬ್ಬಗೋಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮಂಡ್ಯ ಮೂಲದ ಗುಡ್ಡಹಟ್ಟಿ ಗೇಟ್ ವಾಸಿ ಕೆಂಚ ಕ್ಷುಲ್ಲಕ ಕಾರಣಕ್ಕೆ ಆಟೋ ಓಡಿಸಿಕೊಂಡು ಜೀವನ ಮಾಡುತ್ತಿದ್ದ ಸ್ನೇಹಿತ ದರ್ಶನ್‌ನನ್ನು ಕೊಲೆ ಮಾಡಿದ್ದನು. ಜು.14ರಂದು ರಾತ್ರಿ 11 ಗಂಟೆ ಸುಮಾರಿಗೆ ಘಟನೆ ನಡೆದಿತ್ತು. ಬೊಮ್ಮಸಂದ್ರ ಸಮೀಪದ ಟಾಟಾ ಕಾರ್ ಶೋ ರೂಮ್ ಬಳಿ ದರ್ಶನ್ ಕುಳಿತ್ತಿದ್ದನು. ಅಲ್ಲಿಗೆ ಬಂದಿದ್ದ ಜಯಸೂರ್ಯ@ ಕೆಂಚ ಮತ್ತು ಗಿರೀಶ್ @ ಕರಿಯ ಬಂದಿದ್ದಾರೆ. ಆಗ ಆಟೋ ಚಾಲಕ ದರ್ಶನ್, ತಮಾಷೆಗೆಂದು ಕೆಂಚನ ತಲೆಗೆ ಹೊಡೆದಿದ್ದಾನೆ. ಅಷ್ಟಕ್ಕೇ ಕೋಪಗೊಂಡು ಕೆಂಚ, ದರ್ಶನ್ ಕೆನ್ನೆಗೆ ಜೋರಾಗಿ ಹೊಡೆದಿದ್ದಾನೆ. ಈ ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಸಣ್ಣದಾಗಿ ತಲೆಗೆ ಹೊಡೆದ ವಿಚಾರ ಇಬ್ಬರ ನಡುವೆ ಜಗಳ ಶುರುವಾಗಲು ಕಾರಣವಾಗಿದೆ. ಈ ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ಆಟೋ ಚಾಲಕ ದರ್ಶನ್ ತನ್ನ ಆಟೋದಲ್ಲಿದ್ದ ಮಚ್ಚು ತೆಗೆದಿದ್ದಾನೆ. ತಮಾಷೆಗೆಂದು ತಲೆಗೆ ಹೊಡೆದಿದ್ದಕ್ಕೆ ಮಚ್ಚು ತೆಗೆದು ಕೊಲೆ ಮಾಡುವ ಹಂತಕ್ಕೆ ಹೋಗಿದ್ದಕ್ಕೆ ಸಿಟ್ಟಿಗೆದ್ದ ಕೆಂಚ ಅದೇ ಮಚ್ಚನನ್ನು ಕಸಿದುಕೊಂಡು ವಾಪಸ್ ಬೆದರಿಕೆ ಹಾಕಿದ್ದಾನೆ. ಜೊತೆಗೆ, ನೀನು ಇಲ್ಲಿಂದ ಜಾಗ ಖಾಲಿ ಮಾಡು ಎಂದು ಎಚ್ಚರಿಕೆಯನ್ನೂ ರವಾನಿಸಿದ್ದಾನೆ. ಆದರೆ, ಮಂಡ್ಯ ಮೂಲದ ದರ್ಶನ್ ಮಾತ್ರ ಮಚ್ಚು ತನಗೆ ವಾಪಸ್ ಕೊಡು ನಾನು ಹೋಗುತ್ತೇನೆ ಎಂದು ಹೇಳಿದ್ದಾನೆ.
ಆಗ ಮಚ್ಚು ಕೊಡದ ಕೆಂಚ ಮತ್ತಷ್ಟು ಬೆದರಿಕೆ ಹಾಕಿದ್ದಾನೆ. ಆದರೆ, ತನಗೆ ಆ ಮಚ್ಚು ಬೇಕೇ ಬೇಕು ಎಂದು ಹಠಕ್ಕೆ ಬಿದ್ದವನಂತೆ ನಡೆದುಕೊಂಡ ದರ್ಶನ್ ಮೇಲೆ ಕೆಂಚ ಹರಿತವಾದ ಆಯುಧದಿಂದ ಹಲ್ಲೆ ಮಾಡಿದ್ದಾನೆ. ದರ್ಶನ್ ತಲೆ, ಕುತ್ತಿಗೆ, ಬೆನ್ನು ಮತ್ತು ಕೈ ಮೇಲೆ ಮಚ್ಚು ಬೀಸಿದ್ದಾನೆ. ಈ ವೇಳೆ ತೀವ್ರ ರಕ್ತಸ್ರಾವ ಉಂಟಾದ ದರ್ಶನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಘಟನೆ ಸಂಬಂಧ ಹೆಬ್ಬಗೋಡಿ ಪೊಲೀಸರು ಕೊಲೆ ಕೇಸ್ ದಾಖಲಿಸಿಕೊಂಡಿದ್ದರು. ಸದ್ಯ ಪ್ರಮುಖ ಆರೋಪಿ ಜಯಸೂರ್ಯ@ ಕೆಂಚ ಅರೆಸ್ಟ್ ಮಾಡಿದ್ದಾರೆ. ಆದರೆ, ಈತನಿಗೆ ಸಾಥ್ ನೀಡದ್ದ ಮತ್ತೊಬ್ಬ ಆರೋಪಿ ಗಿರೀಶ್ @ ಕರಿಯ ತಲೆಮರೆಸಿಕೊಂಡಿದ್ದು, ಆತನಿಗೆ ಶೋಧ ಕಾರ್ಯ ಮಂದುವರೆಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಂಡ ಎಲೆಕ್ಟ್ರಾನಿಕ್‌ಸಿಟಿ ಡಿಸಿಪಿ ಬಿ. ನಾರಾಯಣ ಅವರು, ಹೆಬ್ಬಗೋಡಿ ಠಾಣಾ ವ್ಯಾಪ್ತಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕನ ಕೊಲೆಯಾಗಿದೆ. ಕಳೆದ ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಜಯಸೂರ್ಯ @ ಕೆಂಚ ಮತ್ತು ಗಿರೀಶ್ @ ಕರಿಯ ಎಂಬುವವರಿಂದ ಕೊಲೆ ಮಾಡಲಾಗಿದ್ದು, ಈ ಘಟನೆ ಸಂಬಂಧ ಪ್ರಮುಖ ಆರೋಪಿ ಕೆಂಚನನ್ನು ಬಂಧಿಸಲಾಗಿದೆ. ಈ ಘಟನೆ ಬೊಮ್ಮಸಂದ್ರದ ಬೆಲ್ಲದ್ ಟಾಟಾ ಮೋಟರ್ಸ್ ಬಳಿ ನಡೆದಿದೆ. ಆಟೋ ಚಾಲಕ ದರ್ಶನ್ ರಾತ್ರಿ ಊಟ ಮಾಡುವ ಸಂದರ್ಭದಲ್ಲಿ, ಸ್ಥಳಕ್ಕೆ ಬಂದ ಕೆಂಚನ ತಲೆಗೆ ದರ್ಶನ್ ತಮಾಷೆಗೆಂದು ತಲೆಗೆ ಹೊಡೆದಿದ್ದಾನೆ. ಇದಕ್ಕೆ ಕೋಪಗೊಂಡ ದರ್ಶನ್ ಆಟೋದಲ್ಲಿ ಮಚ್ಚು ಹೊರ ತೆಗೆದು ಹಲ್ಲೆಗೆ ಮುಂದಾದಾಗ, ಕೆಂಚ ಮತ್ತು ಕರಿಯ ಇಬ್ಬರೂ ಸೇರಿ ಮಚ್ಚನನ್ನು ಕಸಿದು ವಾಪಸ್ ದರ್ಶನ್ ಮೇಲೆ ಹಲ್ಲೆ ಮಾಡಿದ್ದಾರೆ. ದರ್ಶನ್ ಮೃತಪಟ್ಟ ಬಳಿಕ ಆತನ ಆಟೋವನ್ನು ತೆಗೆದುಕೊಂಡು ಇಬ್ಬರೂ ಪರಾರಿ ಆಗಿದ್ದಾರೆ. ಈಗ ಒಬ್ಬ ಆರೋಪಿ ಸಿಕ್ಕಿದ್ದು, ಮತ್ತೊಬ್ಬನಿಗೆ ಶೋಧ ಕಾರ್ಯ ಮುಂದುವರೆದಿದೆ ಎಂದು ತಿಳಿಸಿದರು.
