ಬೆಂಗಳೂರಿನಲ್ಲಿ ಉದ್ಯೋಗ ಭದ್ರತೆ ಪ್ರಶ್ನೆ: ಕ್ಯಾಂಪಸ್‌ನಿಂದ ಆಯ್ಕೆಯಾದ ಯುವತಿಗೆ ಆರು ತಿಂಗಳಲ್ಲೇ ‘ರಾಜೀನಾಮೆ ನೀಡಿ’ ಆದೇಶ

ಕ್ಯಾಂಪಸ್ ಆಯ್ಕೆಯ ಮೂಲಕ ಉದ್ಯೋಗ ಪಡೆದುಕೊಂಡು, ಅನಿರೀಕ್ಷಿತವಾಗಿ ಕೆಲಸ ಕಳೆದುಕೊಂಡ ತನ್ನ ದುಃಸ್ಥಿತಿಯ ಬಗ್ಗೆ ಯುವತಿಯೊಬ್ಬಳು ಹಂಚಿಕೊಂಡಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

2024ರಲ್ಲಿ ನಾಲ್ಕು ವರ್ಷಗಳ ಪದವಿಪೂರ್ವ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ನಡೆದ ಕ್ಯಾಂಪಸ್ ನೇಮಕಾತಿ ಮೂಲಕ ಯುವತಿಗೆ ಖಾಸಗಿ ಕಂಪನಿಯಲ್ಲಿ ಕೆಲಸ ಸಿಕ್ಕಿತು.
ಆರು ತಿಂಗಳ ತರಬೇತಿ ಅವಧಿಯನ್ನು ಪೂರ್ಣಗೊಳಿಸಿದ ನಂತರ ಯುವತಿ, ಇತ್ತೀಚೆಗೆ ಪೂರ್ಣ ಸಮಯದ ಉದ್ಯೋಗಿಯಾಗಿ ಕಂಪನಿಗೆ ಸೇರಿದಳು.
ಹೀಗೆ ಒಂದು ದಿನ, ಕೆಲಸಕ್ಕಾಗಿ ಕಚೇರಿಗೆ ಬಂದಾಗ, ಯುವತಿಗೆ ಮಾನವ ಸಂಪನ್ಮೂಲ ವಿಭಾಗದಿಂದ ಒಂದು ಸಂದೇಶ ಬಂದಿತು. ಅದೇನೆಂದರೆ, ಮಧ್ಯಾಹ್ನ 2 ಗಂಟೆಯೊಳಗೆ ತನ್ನ ಕೆಲಸಕ್ಕೆ ರಾಜೀನಾಮೆ ನೀಡಬೇಕು. ಒಂದು ವೇಳೆ ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡದಿದ್ದರೆ ಮಧ್ಯಾಹ್ನ 3 ಗಂಟೆಯೊಳಗೆ ಅವಳನ್ನು ವಜಾಗೊಳಿಸಲಾಗುವುದು ಎಂಬ ಸಂದೇಶವಿತ್ತು.

ವಜಾಗೊಳಿಸುತ್ತಾರೆ ಎಂಬ ಭಯದಿಂದ ಆ ಯುವತಿ ಅನಿವಾರ್ಯ ಕಾರಣಗಳಿಂದ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದಳು. ಆ ಯುವತಿ 2024ರ ನವೆಂಬರ್ ತಿಂಗಳಲ್ಲಿ ಕಂಪನಿಗೆ ಸೇರಿದ್ದಳು. 6 ತಿಂಗಳ ತರಬೇತಿಯ ಅವಧಿಯ ನಂತರ, ಆಕೆಗೆ ಪೂರ್ಣ ಸಮಯದ ಉದ್ಯೋಗಿಯಾಗಿ ಬಡ್ತಿ ನೀಡಲಾಯಿತು. ಆದರೆ, ಕೆಲಸ ಸಿಕ್ಕ ಖುಷಿ ಆಕೆಗೆ ಹೆಚ್ಚ ದಿನ ಉಳಿಯಲಿಲ್ಲ. ಕೆಲವೇ ತಿಂಗಳಲ್ಲಿ ಕೆಲಸ ಕಳೆದುಕೊಂಡು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.
ಈ ವಿಚಾರವಾಗಿ ಆ ಯುವತಿ ತನ್ನ ರೆಡ್ಡಿಟ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಕಂಪನಿಯಿಂದ ತನಗೆ ಬಂದ ಸಂದೇಶ ಅಸಾಮಾನ್ಯವಾಗಿದ್ದು, ಅದೊಂದು ಕೆಟ್ಟ ನಡವಳಿಕೆ ಎಂದು ಪರಿಗಣಿಸಬಹುದು ಎಂದಿದ್ದಾರೆ. ಕಂಪನಿಯ ನಡವಳಿಕೆಯ ವಿರುದ್ಧ ಆ ಯುವತಿ ಟೀಕಾ ಪ್ರಹಾರ ಮಾಡಿದ್ದಾರೆ.
ಯುವತಿಯ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅನೇಕ ಮಂದಿ ನೆಟ್ಟಿಗರು ಪೋಸ್ಟ್ ಕಾಮೆಂಟ್ಗಳ ಸುರಿಮಳೆಗೈಯುತ್ತಿದ್ದಾರೆ. ಯಾವುದೇ ಕಾರಣವಿಲ್ಲದೆ ವಜಾ ಮಾಡುವುದು ದೇಶದ ಕಾರ್ಮಿಕ ಕಾನೂನುಗಳಿಗೆ ವಿರುದ್ಧವಾಗಿದೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಇತ್ತೀಚೆಗೆ, ತರಬೇತಿ ಅವಧಿಯನ್ನು ಪೂರ್ಣಗೊಳಿಸಿದ ನಂತರ ಹೊಸಬರನ್ನು ವಿನಾಕಾರಣ ವಜಾಗೊಳಿಸುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮೂಲಕ ಟೀಕಿಸಿದ್ದಾರೆ