ಚಿಂಚೋಳಿಯಲ್ಲಿ ಇನ್ನು ಜೀಪ್ ಸಫಾರಿ, ಬೋಟಿಂಗ್ ಸಂಭ್ರಮ: ಪ್ರವಾಸಿ ತಾಣಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ

ಕಲಬುರಗಿ : ಚಂದ್ರಂಪಳ್ಳಿ ಜಲಾಶಯ, ಗೊಟ್ಟಂಗೊಟ್ಟ, ಎತ್ತಿಪೊತ್ತ ಜಲಪಾತ ಸೇರಿದಂತೆ ದಟ್ಟ ಅರಣ್ಯದೊಂದಿಗೆ ವನ್ಯಜೀವಿ ತಾಣವಾಗಿರುವ ಜಿಲ್ಲೆಯ ಚಿಂಚೋಳಿಯನ್ನು ಮುಂದಿನ ಒಂದೂವರೆ ವರ್ಷದಲ್ಲಿ ಮಿನಿ ಪ್ರವಾಸಿ ಸರ್ಕ್ಯೂಟ್ ಮಾಡಲಾಗುವುದು ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಶನಿವಾರ ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿಯಲ್ಲಿ ಅರಣ್ಯ ಜೀಪ್ ಸಫಾರಿ ಹಾಗೂ ಚಂದ್ರಂಪಳ್ಳಿ ಜಲಾಶಯದಲ್ಲಿ ದೋಣಿ ವಿಹಾರ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಂಚೋಳಿ ಸುತ್ತಮುತ್ತವಿರುವ 8-10 ಪ್ರವಾಸಿ ತಾಣಗಳನ್ನು ಸರ್ಕ್ಯೂಟ್ ನಲ್ಲಿ ಸೆರಿಸಲಾಗುವುದು. ಪ್ರವಾಸಿಗರು ಒಂದು ದಿನದ ಪ್ಯಾಕೇಜ್ ನಡಿ ಇದನೆಲ್ಲ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು. ಕೆ.ಎಸ್.ಟಿ.ಡಿ.ಸಿ. ಯಿಂದ ಪ್ಯಾಕೇಜ್ ಟೂರ್ ವ್ಯವಸ್ಥೆ ಸಹ ಜಾರಿಗೆ ತರಲಾಗುವುದು ಎಂದರು.

ಚಿಂಚೋಳಿ ಸುತ್ತಮುತ್ತ ಪ್ರಾಕೃತಿಕ ತಾಣಗಳ ಸೌಂದರ್ಯ ಸವೆಯಲು ಪ್ರವಾಸಿಗರಿಗೆ ಪೂರಕವಾಗಿ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗುತ್ತಿದೆ. ಈಗಾಗಲೇ ತೋಟಗಾರಿಕೆ ಇಲಾಖೆಯಿಂದ 6.50 ಕೋಟಿ ರೂ. ಮೊತ್ತದ ಡಿ.ಪಿ.ಅರ್. ಸಿದ್ಧಪಡಿಸಲಾಗಿದೆ. ಪ್ರವಾಸೋದ್ಯಮ, ಅರಣ್ಯ, ಕೃಷಿ, ತೋಟಗಾರಿಕೆ ಹೀಗೆ ಎಲ್ಲಾ ಇಲಾಖೆಯ ಸಮನ್ವಯದೊಂದಿಗೆ ಬ್ಲೂಪ್ರಿಂಟ್ ಸಿದ್ಧಪಡಿಸಲಾಗುವುದು. ಇನ್ನು ಈ ನಿಟ್ಟಿನಲ್ಲಿ ಶೀಘ್ರವೇ ಪ್ರವಾಸೋದ್ಯಮ ಸಚಿವರನ್ನು ಸಹ ಭೇಟಿ ಮಾಡಿ ಚರ್ಚಿಸಲಾಗುವುದು ಎಂದರು.
ಅರಣ್ಯ ಜೀಪ್ ಸಫಾರಿಗೆ 24 ಲಕ್ಷ ವೆಚ್ಚದಲ್ಲಿ ಎರಡು ಕ್ಯಾಂಪರ್ ವಾಹನಗಳನ್ನು ಖರೀದಿಸಿ ಸಫಾರಿ ವಾಹನಗಳಾಗಿ ಮಾರ್ಪಡಿಸಲಾಗಿದೆ. 64 ಲಕ್ಷ ರೂ. ವೆಚ್ಚದಲ್ಲಿ ಸಫಾರಿ ರಸ್ತೆ ಅಭಿವೃದ್ಧಿಪಡಿಸಲಾಗಿದೆ. 43 ಲಕ್ಷ ರೂ. ವೆಚ್ಚದಲ್ಲಿ ಮೂಲಭೂತ ಸೌಲಭ್ಯಗಳೊಂದಿಗೆ ಗೊಟ್ಟಂಗೊಟ್ಟದಲ್ಲಿ ಎರಡು ಹೆಚ್ಚುವರಿ ಟೆಂಟ್ ಹೌಸ್ ನಿರ್ಮಿಸಲಾಗಿದೆ. 14 ಲಕ್ಷ ರೂ. ವೆಚ್ಚದಲ್ಲಿ ಮನರಂಜನಾ ಚಟುವಟಿಕೆಗಳಿಗಾಗಿ 12 ಆಸನಗಳ ಮೋಟಾರ್ ದೋಣಿ ಮತ್ತು ಎರಡು ಪೆಡಲ್ ದೋಣಿಗಳು ಮತ್ತು ಕಯಾಕ್ ಗಳನ್ನು ಒದಗಿಸಲಾಗಿದೆ. ಇದಲ್ಲದೆ ಕೆಕೆಆರ್ ಡಿಬಿಯ ಮ್ಯಾಕ್ರೋ ಅನುದಾನದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ವಿವಿಧ ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಕ್ರಮಗಳು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ಅನುಮಾನವಿಲ್ಲ. ಇಲ್ಲಿನ ಪ್ರವಾಸೋದ್ಯಮ ಹೆಚ್ಚಿದಂತೆ ಸ್ಥಳೀಯ ಆರ್ಥಿಕತೆಗೆ ಉತ್ತೇಜನ ದೊರಕುತ್ತದೆ ಮತ್ತು ಸ್ಥಳೀಯರ ಉದ್ಯೋಗಾವಕಾಶಗಳು ಹೆಚ್ಚುತ್ತದೆ ಎಂಬ ನಂಬಿಕೆ ನಮ್ಮದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಬೋಟಿಂಗ್ ಗೆ 175 ರೂ., ಸಫಾರಿಗೆ 450 ರೂ.:
ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಪಾಟೀಲ್ ಮಾತನಾಡಿ, ಚಂದ್ರಂಪಳ್ಳಿ ಜಲಾಶಯದಲ್ಲಿ ಬೋಟಿಂಗ್ ನಡೆಸಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಬೋಟ್ ಆಪರೇಟರ್‌ಗಳಿಗೆ ಗೋವಾದ ‘ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವಾಟರ್ ಸ್ಪೋರ್ಟ್ಸ್’ ಸಂಸ್ಥೆಯಿಂದ ವಿಶೇಷ ತರಬೇತಿ ಕೊಡಿಸಲಾಗಿದೆ. ಸ್ಥಳೀಯ 15 ಯುವಕರಿಗೆ ಈಜುವುದು ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು ಎಂಬ ಬಗ್ಗೆ ತರಬೇತಿ ನೀಡಲಾಗಿದೆ. ಬೋಟ್ ನಡೆಸಲು ಅಗತ್ಯವಿರುವ ಲೈಸೆನ್ಸ್ ಮತ್ತು ಇನ್ನೂರೆನ್ಸ್ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಲೈಫ್ ಜಾಕೆಟ್‌ಗಳು ಮತ್ತು ಅಗ್ನಿಶಾಮಕ ಉಪಕರಣಗಳನ್ನು ಪ್ರತಿ ಬೋಟ್‌ನಲ್ಲಿ ಕಡ್ಡಾಯಗೊಳಿಸಲಾಗಿದೆ ಎಂದರು.
ಬೋಟ್ ರೈಡಿಂಗ್ ಗೆ ಪ್ರತಿ ವ್ಯಕ್ತಿಗೆ 175 ರೂ. ದರ ನಿಗದಿಪಡಿಸಿದೆ. ಇನ್ನು ಅರಣ್ಯ ಸುತ್ತುವ ಜೀಪ್ ಸಫಾರಿಗೆ ವಯಸ್ಕರಿಗೆ 450 ರೂ., ಮಕ್ಕಳಿಗೆ 200 ರೂ. ದರ ಇರಲಿದೆ. ಇದಲ್ಲದೆ, ದೂರದ ಊರುಗಳಿಂದ ಬರುವ ಪ್ರವಾಸಿಗರಿಗಾಗಿ ಜಲಾಶಯದ ಸಮೀಪವಿರುವ ಕಾಟೇಜ್ ಜೊತೆಗೆ ಹೆಚ್ಚುವರಿಯಾಗಿ ತಂಗಲು ಟೆಂಟ್ ಹೌಸ್ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಮಾಡಲಾಗುತ್ತಿದೆ ಎಂದರು.
ವಿಧಾನ ಪರಿಷತ್ ಶಾಸಕ ಜಗದೇವ ಗುತ್ತೇದಾರ, ಕೆ.ಕೆ.ಆರ್.ಟಿ.ಸಿ ಅಧ್ಯಕ್ಷ ಅರುಣಕುಮಾರ ಪಾಟೀಲ, ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್, ಕಲಬುರಗಿ ವಲಯದ ಅರಣ್ಯ ಸಂರಕ್ಷಣಾಧಿಕಾರಿ ಸುನಿಲ ಪನ್ವಾರ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಎಸ್.ಪಿ. ಅಷ್ಟೂರು ಶ್ರೀನಿವಾಸಲು, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಜಂಟಿ ತೋಟಗಾರಿಕೆ ನಿರ್ದೇಶಕ ಸಂತೋಷ ಇನಾಂದಾರ, ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ, ಮುಖಂಡರಾದ ಸುಭಾಷ ರಾಠೋಡ, ಕೈಲಾಶನಾಥ ಪಾಟೀಲ, ದೀಪಕನಾಗ್ ಪುಣ್ಯಶೆಟ್ಟಿ ಸೇರಿದಂತೆ ಅರಣ್ಯ ಇಲಾಖೆಯ ಇತರೆ ಅಧಿಕಾರಿಗಳು ಇದ್ದರು.