ಜೇಮ್ಸ್ ಬಾಂಡ್ ಶೈಲಿಯ ವಂಚಕನ ಬೇಟೆ: ಮದ್ಯದ ಗ್ಲಾಸ್‌ನಿಂದ ಸಿಕ್ಕಿಬಿದ್ದ ಮಹಾವಂಚಕ ರೋಶನ್ ಸಲ್ಡಾನ್ಹಾ!

ಮಂಗಳೂರು: ಇದೊಂದು ಥೇಟ್ ಬಾಲಿವುಡ್ ಸಿನೆಮಾದಂತಿದೆ. ಜೇಮ್ಸ್ ಬಾಂಡ್ ಕಥೆಯ ರೀತಿಯಲ್ಲಿ ಇಲ್ಲಿ ನೈಜ ವ್ಯವಸ್ಥೆಗಳಿದ್ದವು. ಪೊಲೀಸ್ ಮತ್ತು ಕಾನೂನು ಪಾಲಕರಿಂದ ಪಾರಾಗಲು ಯಾವೆಲ್ಲ ತಂತ್ರಗಳಿವೆಯೋ ಅವೆಲ್ಲವನ್ನೂ ಆ ಮಹಾವಂಚಕ ಹೊಂದಿದ್ದ. ಆದರೂ ಸಿಕ್ಕಿಬಿದ್ದಿರುವುದು ಮದ್ಯದ ಗ್ಲಾಸ್‌ನಿಂದಾಗಿ.

ಹೌದು. ಅದೊಂದು ಅಲ್ಲಿ ಇರದಿದ್ದರೆ ಆತ ಈ ಬಾರಿಯೂ ಸುಲಭದಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ. ಸೊಳ್ಳೆ ಬಂದರೂ ಕುಳಿತಲ್ಲಿಂದಲೇ ನೋಡುವ ರೀತಿಯ ಅತ್ಯುನ್ನತ ದರ್ಜೆಯ ಸಿಸಿ ಕೆಮರಾ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದ ಈ ವಂಚಕ ಬಜಾಲ್ ಬೊಲ್ಲಗುಡ್ಡ ನಿವಾಸಿ ವಂಚಕ ರೋಶನ್ ಸಲ್ಡಾನ್ಹಾ (43) ಸಿಕ್ಕಿಬಿದ್ದದ್ದೆ ಒಂದು ರೋಚಕ ಕತೆ.
ದೇಶಾದ್ಯಂತ ಹಲವು ಉದ್ಯಮಿಗಳಿಗೆ ಬಹುಕೋಟಿ ರೂ.ವಂಚನೆ ಮಾಡಿ ತಲೆಮರೆಸಿಕೊಂಡಿದ್ದ ರೋಶನ್‌ನ ಪತ್ತೆಗಾಗಿ ಹಲವು ಸಮಯದಿಂದ ಪೊಲೀಸರು ಬಲೆ ಬೀಸಿದ್ದರು. ಗುರುವಾರ ರಾತ್ರಿ ಆತ ಬಜಾಲ್‌ನ ವೈಭವೊಪೇತ ಮನೆಯಲ್ಲಿಯೇ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ. ಈ ವೇಳೆ ಆತ ಮನೆಯೊಳಗಿನ ಮೊದಲ ಅಂತಸ್ತಿನ ಐಷಾರಾಮಿ ಬಾರ್ ಮಾದರಿಯ ಹಾಲ್‌ನಲ್ಲಿ ಮದ್ಯ ಕುಡಿಯುತ್ತಾ ಕುಳಿತಿದ್ದ. ಪೊಲೀಸರ ಹಠಾತ್ ದಾಳಿಯ ಬಳಿಕ ಪರಾರಿಯಾಗುವಾಗ ಮದ್ಯದ ಗ್ಲಾಸ್‌ಗಳನ್ನು ಅಲ್ಲಿಯೇ ಬಿಟ್ಟು ಹೋದ.ಅದರಲ್ಲಿದ್ದ ಅರ್ಧ ಮದ್ಯವೇ ಪೊಲೀಸರಿಗೆ ಸಾಕ್ಷ್ಯನೀಡಿದ್ದವು!
ಗೇಟ್ ಹಾರಿ ದಿಢೀರ್ ದಾಳಿ
ರೋಶನ್ ಮನೆಯ ಗೇಟ್ ರಿಮೋಟ್ ಮೂಲಕ ತೆರೆಯುವಂತದ್ದಾಗಿದ್ದವು. ಆದುದರಿಂದ ಪೊಲೀಸರು ಅನಿವಾರ್ಯವಾಗಿ ಗೇಟ್ ಹಾರಿ ಒಳಗೆ ನುಗ್ಗಿದ್ದರು. ಅಲ್ಲಿಂದ ಎರಡು ತಂಡವಾಗಿ ಒಂದು ತಂಡ ನೇರವಾಗಿ ಮೊದಲ ಅಂತಸ್ತು (ಹೊರಗಿನಿಂದಲೇ ಹೋಗಲು ನೇರ ದಾರಿ ಇದೆ) ಮತ್ತೊಂದು ತಂಡ ನೆಲ ಅಂತಸ್ತಿನತ್ತ ಧಾವಿಸಿತು. ನೆಲ ಅಂತಸ್ತಿನ ಬಾಗಿಲು ಬಡಿದಾಗ ಕೆಲಸದವರು ಹೊರ ಬಂದರು. ಮೊದಲ ಅಂತಸ್ತಿನಿಂದ ಕೂಡಲೇ ಪ್ರತಿಕ್ರಿಯೆ ಸಿಗದಿದ್ದಾಗ ಪೊಲೀಸರು ಬಾಗಿಲಿನ ಬೀಗವನ್ನೇ ಮುರಿದು ಒಳಗೆ ನುಗ್ಗಿದರು.ಅಷ್ಟರಲ್ಲಾಗಲೇ ಕುಳಿತಲ್ಲಿಂದಲೇ ಸಿಸಿಟಿವಿ ಮೂಲಕ ಗಮನಿಸಿದ ಅಸಾಮಿ ಪರಾರಿ!
ಪೊಲೀಸರು ಒಳಗೆ ನುಗ್ಗಿದಾಗ ಅಲ್ಲಿ ಮಲೇಷ್ಯಾ ಯುವತಿ ಮಾತ್ರವಿದ್ದಳು. ರೋಶನ್ ಬಗ್ಗೆ ವಿಚಾರಿಸಿದಾಗ ಯಾರೂ ಇಲ್ಲ, ತಾನೊಬ್ಬಳೇ ಎಂದು ಹೇಳಿದ್ದಳು ಆದರೆ ಅಲ್ಲಿಯೇ ಅರ್ಧ ಖಾಲಿಯಾಗಿದ್ದ ಮದ್ಯದ ಗ್ಲಾಸ್‌ಗಳು ಆತನ ಇರುವಿಕೆಯನ್ನು ಒತ್ತಿ ಹೇಳಿದವು.
ಎಲ್ಲಿ ಹುಡುಕಿದರೂ ಆತ ಸಿಗಲಿಲ್ಲ. ವಾರ್ಡ್ ರೋಬ್‌ನಲ್ಲಿ ಅಡಗಿದ್ದಾನೆಯೇ ಎಂದು ತಿಳಿಯಲು ಅದರ ಬಾಗಿಲು ತೆರೆದಾಗ ಅಲ್ಲೂ ಇಲ್ಲ. ಬಟ್ಟೆಗಳನ್ನು ಸರಿಸಿ ನೋಡಿದಾಗ ಚಿಲಕ ಕಾಣಿಸುತ್ತಿತ್ತು!. ಅದು ಮತ್ತೂಂದು ಕೋಣೆಗೆ ದಾರಿಯಾಗಿತ್ತು. ಅಲ್ಲಿಂದ ಹೋದಾಗ ಅಡಗು ಕೋಣೆ ಪತ್ತೆಯಾಗಿದ್ದು, ಅಡಗಿ ಕುಳಿತಿದ್ದ ಆತ ಪೊಲೀಸರ ಕೈಗೆ ಸಿಕ್ಕಿ ಬಿದ್ದ.
ನಗದು ರೂಪದಲ್ಲೇ ವ್ಯವಹಾರ
ರೋಶನ್ ಉದ್ಯಮಿಗಳಿಂದ ಕೋಟ್ಯಂತರ ರೂಪಾಯಿಯನ್ನು ನಗದು ರೂಪದಲ್ಲೇ ಪಡೆದುಕೊಳ್ಳುತ್ತಿದ್ದ. ನಗದು ರೂಪದಲ್ಲೇ ವ್ಯವಹಾರ ನಡೆಯುವುದರಿಂದ ಹಣ ನೀಡಿದವರಲ್ಲಿಯೂ ಈ ಬಗ್ಗೆ ಸಾಕ್ಷéಗಳು ಇರುವುದಿಲ್ಲ. ಕೆಲವರು ಕಪ್ಪು ಹಣವನ್ನು ನೀಡುವುದರಿಂದ ಹಾಗೂ ಇತರ ತನಿಖಾ ಸಂಸ್ಥೆಗಳು ರೈಡ್ ಮಾಡುವ ಭಯವೋ ಏನೋ ಹೆಚ್ಚಿನವರು ದೂರು ಕೂಡ ನೀಡುತ್ತಿರಲಿಲ್ಲ. ಒಂದರೆಡು ಬಾರಿ ಆತನ ಮನೆ ಬಳಿಗೆ ಬಂದು ಆತ ಇಲ್ಲ ಎಂದು ತಿಳಿದ ಬಳಿಕ ಸುಮ್ಮನಾಗುತ್ತಿದ್ದರು.
ಉದ್ಯಮಿಗಳನ್ನು ಖೆಡ್ಡಕ್ಕೆ ಬೀಳಿಸಲು ಏಜೆಂಟ್‌ಗಳಿದ್ದರು
ರೋಶನ್‌ನ ನೆಟ್‌ವರ್ಕ್ ದೇಶದ ನಾನಾ ಕಡೆಗಳಲ್ಲಿತ್ತು. ಆತ ವಿವಿಧೆಡೆ ಏಜೆಂಟ್‌ಗಳನ್ನು ಇಟ್ಟುಕೊಂಡಿದ್ದ. ಸಾಲ ಅಗತ್ಯವಿರುವ ಉದ್ಯಮಿಗಳನ್ನು ಈ ಏಜೆಂಟ್‌ಗಳು ಸಂಪರ್ಕಿಸಿ ಕಡಿಮೆ ಬಡ್ಡಿದರದಲ್ಲಿ ಸಾಲ ಮಾಡಿಸಿಕೊಡುವ ಬಗ್ಗೆ ನಂಬಿಸಿ, ರೋಶನ್‌ನ ಪರಿಚಯ ಮಾಡಿಸುತ್ತಾರೆ. ಬಳಿಕ ಅವರನ್ನು ಮಂಗಳೂರಿಗೆ ಕರೆಸಿಕೊಂಡು, ತನ್ನ ಜೀವನ ಶೈಲಿಯನ್ನು ಅವರಿಗೆ ತೋರಿಸಿ ನಂಬಿಕೆ ಮೂಡಿಸುತ್ತಾನೆ. ಆತನ ಐಷಾರಾಮಿ ಜೀವನ ಶೈಲಿಯನ್ನು ನೋಡಿದಾಗ ಲೋನ್ ಸಿಗುವ ಭರವಸೆಯಿಂದ ಮಾತುಕತೆಗಳು ನಡೆದು, ಸಾಲದ ಮೊತ್ತದ ಆಧಾರದಲ್ಲಿ ಸ್ಟ್ಯಾಂಪ್ ಡ್ಯೂಟಿ ಎಂದು ಇಂತಿಷ್ಟು ಮೊತ್ತವನ್ನು ನಗದು ರೂಪದಲ್ಲಿಯೇ ಕೊಡಬೇಕು ಎಂದು ಹೇಳಿ ಅವರಿಂದ ಪಡೆದುಕೊಳ್ಳುತ್ತಾನೆ. ಎರಡು ದಿನದಲ್ಲಿ ನಗದು ರೂಪದಲ್ಲೇ ಹಣ ತಲುಪುತ್ತದೆ ಎಂದು ಭರವಸೆ ನೀಡುವ ರೋಶನ್ ತಲೆ ಮರೆಸಿಕೊಳ್ಳುತ್ತಿದ್ದ.
ಚಿತ್ರದುರ್ಗದ ಕೇಸಿನ ತನಿಖೆಯಲ್ಲಿ…
ಮಂಗಳೂರಿನಲ್ಲಿ ಈತನ ವಿರುದ್ಧ ಈಗಾಗಲೇ ಎರಡು ಪ್ರಕರಣ ದಾಖಲಾಗಿದ್ದವು. ಪೊಲೀಸರು ದಾಳಿ ನಡೆಸಿದ್ದರೂ ಅವರಿಗೆ ಸಿಕ್ಕಿರಲಿಲ್ಲ. ಚಿತ್ರದುರ್ಗ ನಗರದ ಠಾಣೆಯಲ್ಲಿ ದಾಖಲಾದ ವಂಚನೆ ಪ್ರಕರಣದ ತನಿಖೆ ಆರಂಭಿಸಿದಾಗ ಪೊಲೀಸರ ಅತಿಥಿಯಾದ. ಆತನ ವಂಚನೆಯ ಜಾಲದ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.
ಚಿತ್ರದುರ್ಗ ನಗರದ ಠಾಣೆಯಲ್ಲಿ ಜು.16ರಂದು 40 ಲಕ್ಷ ರೂ. ವಂಚನೆಗೆ ಸಂಬಂಧಿಸಿ ಆಂಧ್ರ ಮೂಲದ ಉದ್ಯಮಿಯೊಬ್ಬ ನೀಡಿದ ದೂರಿನನ್ವಯ ಎಫ್‌ಐಆರ್ ದಾಖಲಾಗಿತ್ತು. ಸಾಯಿ ಫೈನಾನ್ಸ್ ಹೆಸರಿನಲ್ಲಿ ಚಿತ್ರದುರ್ಗದಲ್ಲಿ ಫೈನಾನ್ಸ್ ಹೊಂದಿದ್ದ ರೋಶನ್, ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಹಿಂದೂಪುರ ನಿವಾಸಿ, ಸಿಲ್ಕ್ ಸಾರಿ ಕಂಪೆನಿ ನಡೆಸುತ್ತಿದ್ದ ಕೃಷ್ಣ ಮೂರ್ತಿ ಅವರಿಗೆ ಸಾಲ ನೀಡುವುದಾಗಿ ದಾಖಲಾತಿಗಳನ್ನು ಪಡೆದು, ಸ್ಟ್ಯಾಂಪ್ ಡ್ಯೂಟಿ ಎಂದು 40 ಲಕ್ಷ ರೂ. ವಸೂಲಿ ಮಾಡಿದ್ದ ಎಂದು ಆರೋಪಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರೋಶನ್‌ಗೆ ಪರಿಚಯ ಮಾಡಿಕೊಟ್ಟಿದ್ದ ಬೆಂಗಳೂರಿನ ವಿಮಲೇಶ್ ಹತ್ತಿಕೊಂಡ ಎಂಬಾತನ ವಿರುದ್ಧವೂ ಪ್ರಕರಣ ದಾಖಲಾಗಿದೆ.ಈತ ಹೊಸದಿಲ್ಲಿ, ಮಹಾರಾಷ್ಟ್ರದ ಸಾಂಗ್ಲಿ, ಪುಣೆ, ಉತ್ತರ ಪ್ರದೇಶದ ಲಕ್ನೋ, ಅಹ್ಮದಾಬಾದ್, ಗೋವಾ, ಬೆಂಗಳೂರು, ವಿಜಯಪುರ, ತುಮಕೂರು, ಕೋಲ್ಕತಾ, ಬಾಗಲಕೋಟೆ, ಚಿತ್ರದುರ್ಗ ಇತ್ಯಾದಿ ಕಡೆ ಉದ್ದಿಮೆದಾರರಿಗೆ ಸಾಲ ಕೊಡಿಸುವುದಾಗಿ ನಂಬಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಕಲಂ 316(2), 316 (5), 318 (2), 318 (3), 3(5), 61 (2), 3(5) ರಡಿ ವಂಚನೆ ಪ್ರಕರಣ ದಾಖಲಾಗಿದೆ.