‘ಜೈ ಹೋ’ ನಟ ಮುಕುಲ್ ದೇವ್ ಇನ್ನಿಲ್ಲ

ಮುಂಬೈ: ‘ಸನ್ ಆಫ್ ಸರ್ದಾರ್’, ‘ಜೈ ಹೋ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ ಬಾಲಿವುಡ್ ನಟ ಮುಕುಲ್ ದೇವ್ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು.
ಕಳೆದ ಕೆಲ ದಿನಗಳಿಂದ ಅರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಅಲ್ಲದೆ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ ನಿಧನಹೊಂದಿದ್ದಾರೆ ಎಂದು ಸನ್ ಆಫ್ ಸರ್ದಾರ್ ಚಿತ್ರದ ವೇಳೆ ಅವರೊಂದಿಗೆ ಕೆಲಸ ಮಾಡಿದ ವಿಂದು ದಾರಾ ಸಿಂಗ್ ಮಾಹಿತಿ ನೀಡಿದ್ದಾರೆ.
ಒಬ್ಬಂಟಿಯಾಗಿದ್ದರು:
ಮುಕುಲ್ ಅವರ ಹೆತ್ತವರ ನಿಧನದ ಬಳಿಕ ಅವರು ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಅಲ್ಲದೆ ಮನೆಯಿಂದ ಹೊರಗೆ ಹೋಗುವುದು ಮತ್ತು ಜನರನ್ನು ಭೇಟಿಯಾಗುವುದು ಕೂಡ ಅಪರೂಪವಾಗಿತ್ತು. ಅವರು ನಿಜವಾಗಿಯೂ ಒಳ್ಳೆಯ ವ್ಯಕ್ತಿಯಾಗಿದ್ದರು ಮತ್ತು ನಾವು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ ಎಂದು ಮುಕುಲ್ ಅವರ ಆಪ್ತ ಸ್ನೇಹಿತೆಯಾಗಿದ್ದ ದೀಪ್ಶಿಖಾ ನಾಗ್ಪಾಲ್ ಹೇಳಿಕೊಂಡಿದ್ದಾರೆ.
1996 ರ ದಸ್ತಕ್ ಚಿತ್ರದೊಂದಿಗೆ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಮುಕುಲ್. ಹಿಮ್ಮತ್ವಾಲಾ, ಯಮ್ಲಾ ಪಾಗ್ಲಾ ದೀವಾನಾ, ಸನ್ ಆಫ್ ಸರ್ದಾರ್, ಆರ್ ರಾಜ್ಕುಮಾರ್, ಜೈ ಹೋ, ಭಾಗ್ ಜಾನಿ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಹಿಂದಿ ಮಾತ್ರವಲ್ಲದೆ ಪಂಜಾಬಿ, ಬಂಗಾಳಿ, ಗುಜರಾತಿ, ಮಲಯಾಳಂ ಮತ್ತು ಕನ್ನಡ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ.
ಅಷ್ಟು ಮಾತ್ರವಲ್ಲದೆ ಅವರು ಘರ್ವಾಲಿ-ಉಪರ್ವಾಲಿ, ಕುಟುಂಬ, ಭಾಭಿ, ಕುಂಕುಮ್ ಮುಂತಾದ ಟಿವಿ ಶೋಗಳಲ್ಲಿಯೂ ಕೆಲಸ ಮಾಡಿದ್ದಾರೆ.
ಮುಕುಲ್ ದೇವ್ ಅವರು ಸಿನಿಮಾದಲ್ಲಿ ನಿರ್ವಹಿಸಿದ ಪ್ರತಿಯೊಂದು ಪಾತ್ರದಿಂದಲೂ ಜನರ ಗಮನ ಮತ್ತು ಪ್ರಶಂಸೆಯನ್ನು ಪಡೆದಿದ್ದರು. ಅವರ ಹಠಾತ್ ನಿಧನ ಅವರ ಪ್ರೀತಿಪಾತ್ರರನ್ನು ಆಘಾತಕ್ಕೊಳಪಡಿಸಿದೆ.