‘ಸತ್ಯನಾರಾಯಣ ಪೂಜೆಯ ಪ್ರಸಾದ ನನ್ನ ಹುಟ್ಟಿಗೆ ಕಾರಣ’ ಎಂದಿದ್ದ ಬಿ. ಸರೋಜಾ ದೇವಿ

ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಬಿ. ಸರೋಜಾ ದೇವಿ ನಿಧನ ಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಸರೋಜಾ ದೇವಿ ಜನಿಸಿದ್ದು 1938ರಲ್ಲಿ. ಆಗಿನ ಕಾಲದಲ್ಲಿ ಹೆಣ್ಣು ಜನಿಸಿತು ಎಂದರೆ ಮನೆಯವರು ಸಮಸ್ಯೆ ಎಂಬ ರೀತಿಯಲ್ಲೇ ನೋಡುತ್ತಿದ್ದರು. ಆದರೆ, ಸರೋಜಾ ದೇವಿ ಕುಟುಂಬ ಮಾತ್ರ ಆ ರೀತಿ ಅಂದುಕೊಳ್ಳಲಿಲ್ಲ. ತಂದೆ ಬೈರಪ್ಪ ಹಾಗೂ ತಾಯಿ ರುದ್ರಮ್ಮ ಪ್ರೀತಿಯಿಂದ ಮಗುವನ್ನು ಸಾಕಿದರು. ತಾವು ಹುಟ್ಟಿದ್ದು ಸತ್ಯನಾರಾಯಣ ಪೂಜೆ ಪ್ರಸಾದದಿಂದ ಎಂಬ ವಿಚಾರವನ್ನು ಅವರು ಈ ಮೊದಲು ರಿವೀಲ್ ಮಾಡಿದ್ದರು.

‘ನನ್ನ ತಾಯಿಗೆ ಆಗಲೇ ಮೂರು ಹೆಣ್ಣು ಮಕ್ಕಳು ಇದ್ದರು. ನಾಲ್ಕನೇ ಬಾರಿ ನನ್ನ ತಾಯಿ ಪ್ರೆಗ್ನೆಂಟ್ ಆದರು. ಆಗ ತುಂಬಾ ಹೊಟ್ಟೆ ನೋವು ಆಗಿತ್ತು. ಮಗು ಉಳಿಯಲ್ಲ ಎಂಬ ಸ್ಥಿತಿ ತಲುಪಿತ್ತು. ಪಕ್ಕದ ಮನೆಯವರು ಸತ್ಯ ನಾರಾಯಣ ಪೂಜೆ ಮಾಡಿದ್ದರು. ಆಗ ಪೂಜೆಗೆ ಸಜ್ಜಿಗೆ ಮಾಡುತ್ತಿದ್ದರು. ಆ ಪ್ರಸಾದವನ್ನು ಅಮ್ಮನಿಗೆ ತಿನ್ನಿಸಿದರು. ಅದನ್ನು ತಿಂದ ಬಳಿಕ ನಾನು ಹುಟ್ಟಿದೆ’ ಎಂದು ಸರೋಜಾ ದೇವಿ ಅವರು ಹಳೆಯ ಘಟನೆ ವಿವರಿಸಿದ್ದರು.
‘ನಾಲ್ಕೂ ಹೆಣ್ಣು ಮಕ್ಕಳೇ ಎಂದಾಗ ನಮ್ಮ ತಾತ ನನ್ನನ್ನು ಯಾರಿಗಾದರೂ ಕೊಡು ಎಂದರು. ಆದರೆ ನನ್ನ ತಾಯಿ ಕೇಳಲ್ಲಿ. ಅವರೇ ಕಷ್ಟಪಟ್ಟು ಸಾಕಿದರು. ದೈವ ಭಕ್ತಿ ಹಾಗೂ ವಿದ್ಯಾರ್ಜನೆಯನ್ನು ತಾಯಿ ನನಗೆ ನೀಡಿದರು’ ಎಂದು ಸರೋಜಾ ದೇವಿ ಹೇಳಿದ್ದರು. 17ನೇ ವಯಸ್ಸಿಗೆ ಅವರು ‘ಮಹಾಕವಿ ಕಾಳಿದಾಸ’ ಸಿನಿಮಾ ಮಾಡಿದರು. ಅಲ್ಲಿಂದ ಅವರು ಹಿಂದಿರುಗಿ ನೋಡಲೇ ಇಲ್ಲ.
ಒಮ್ಮೆ ಅವರು ಚೆನ್ನೈನಲ್ಲಿ ಇದ್ದರು. ಆಗ ಎಂಜಿಆರ್ ಅವರು ಸೆಟ್ಗೆ ಬಂದಿದ್ದರು. ಇವರನ್ನು ನೋಡಿ ಅವರು ಇಂಪ್ರೆಸ್ ಆದರು. ಅವರ ಭೇಟಿ ಆದ ಮೂರೇ ದಿನಕ್ಕೆ ಎಂಜಿಆರ್ ಚಿತ್ರಕ್ಕೆ ನಾಯಕಿ ಆದರು ಸರೋಜಾ ದೇವಿ. ‘ಯಾವ ಚಿತ್ರರಂಗದಿಂದ ನಾನು ದೂರ ಹೋಗುತ್ತಿದ್ದೆನೋ ಅದೇ ಚಿತ್ರರಂಗ ನನ್ನನ್ನು ಹುಡುಕಿ ಬರುತ್ತಿತ್ತು’ ಎಂದು ಸರೋಜಾ ದೇವಿ ವಿವರಿಸಿದ್ದರು.
